ಧಾರವಾಡ ತಾಯೆ
ನಿನ್ನದೆಂತ ಮಾಯೆ!
ಚಿತ್ತ ತಣಿಸುವ ಸತ್ಯ ಸಾರುವ
ತತ್ತ್ವಲೇಪದ ಕಾವ್ಯ ಕರ್ಮಕೆ
ಮಡಿಲು ಆದ ತಾಯೆ-ಆಹ
ನಿನ್ನದೆಂತ ಮಾಯೆ!
ಲೋಕ ಮೆಚ್ಚುವ ಸತ್ವ ಮಿಂಚುವ
ಆದಿ ಪಂಪ ಆ ಕುವರವ್ಯಾಸರ
ನಿನ್ನ ಹೊನ್ನ ಸಿರಿ ಗರ್ಭದಿ ಅರಳಿಸಿ
ಜಗಕೆ ತಂದೆಯಲ್ಲೆ
ಓ ಧಾರವಾಡ ತಾಯೆ
ಮೆರೆಸಿ ನಿನ್ನ ಮಾಯೆ!
ಅಡಿಗಣ ಪ್ರಾಸಕೆ ನಿಲುಕದ ಪದವ
ಬರೆದಾs ಶರೀಫ ಕನಕರ ನುಡಿಯಲಿ
ತೋರುತ ನಿನ್ನಯ ಚಿನ್ಮಯ ಛಾಯೆ
ಎಲ್ಲೆಯ ಮೀರಿದೆಯಲ್ಲೆ
ಓ ಧಾರವಾಡ ತಾಯೆ
ತೋರಿ ನಿನ್ನ ಮಾಯೆ!
ಬೆಂದರೆ ಆಗುವ ಬೇಂದ್ರೆ ಎನ್ನುವ
ಕಾವ್ಯದ ಕರೆಯಲೆ ಗಂಗೆಯ ಇಳಿಸುವ
ಸತ್ಯದ ಸಾಕ್ಷಾತ್ಕಾರವ ತೋರುತ
ಮನದಿ ನಿಂತೆಯಲ್ಲೆ
ಓ ಧಾರವಾಡ ತಾಯಿ – ನಾ
ಅರಿಯೆ ನಿನ್ನ ಮಾಯೆ!
*****