ಕನ್ನಡಕೆ ಕೈಯೆತ್ತಿ ಓ ನನ್ನ ಬಂಧುಗಳೆ
ಇಲ್ಲವಾದರೆ ತೊಲಗಿ ಈ ನೆಲದ ‘ಭಾರ’ಗಳೆ
ಉಂಡ ಅನ್ನದ ಋಣವ ತೀರಿಸದೆ ಏಕಿಂತು
ಮುಳ್ಳಾಗಿ ನಿಲ್ಲುವಿರಿ ತಾಯ್ ನಡೆವ ಹಾದಿಗೆ?
ಕನ್ನಡದ ಈ ನಾಡು ಸಿಂಗರದ ಬೀಡು
ಸಿಂಗರದ ಈ ಬೀಡು ಕವಿಗಳೆದೆ ಹಾಡು
ಹಾಡು ತುಂಬಿದ ನಾಡು ಶಾರದೆಯ ಬೀಡು
ಇಂತಲ್ಲಿ ಏಕೆ ನಿಮ್ಮಪಸ್ವರದ ಹಾಡು
ಕನ್ನಡದ ನಮ್ಮ ಜನ ತ್ಯಾಗಕೆ ಹೆಸರು
ತ್ಯಾಗ ತುಂಬಿದ ಇವರು ಶೌರ್ಯಕ್ಕೆ ತವರು
ಏನಾದರೇನಿವರು ಮನಃಶಾಂತಿ ಪ್ರಿಯರು
ತಾಳ್ಮೆಯ ಕಟ್ಟೊಡೆದರೆ ಕೆಡುಕರಿಗೆ ಯಮರು
ಈ ಸತ್ಯವರಿತದು ನೀವ್ ಬಾಳಿದರೆ ಕ್ಷೇಮ
ಇಲ್ಲವಾದರೆ ಇಲ್ಲೆ ನಿಮ್ಮ ನಿರ್ನಾಮ
‘ಸಾಧುಂಗೆ ಸಾಧುಂ’ ಇದು ಇವರ ನೇಮ
‘ಬಾಧಿಪ್ಪ ಕಲಿಗೆ’ ಭೀಮನದೇ ನಿಯಮ
*****