ಅಂದಿನಂತೆಯೇ ಇಂದೂ
ಕ್ಷಣಗಳ ಯುಗವಾಗಿಸಿ
ಮುಖಾಮುಖಿ ಕುಳಿತಿದ್ದೇವೆ
ಏತಕ್ಕೋ ಕಾಡಿದ್ದೇವೆ!
ಅಥವಾ ಸುಮ್ಮನೆ ಹೀಗೇ…

ಭಾವುಕತೆ ಮೀರಿದ್ದೇವೆ
ಸ್ಥಿತಪ್ರಜ್ಞರಾಗಿದ್ದೇವೆ
ಮಾತಿಗೆ ಅರ್ಥವಿಲ್ಲ
ಮೌನ ವ್ಯರ್ಥವಲ್ಲ!
ತಿಳಿದಿದ್ದೇವೆ.

ಬಹುದೂರ ಸಾಗಿದ್ದೇವೆ
ಏನೆಲ್ಲಾ ನೀಗಿದ್ದೇವೆ
ಹಮ್ಮುಗಳನಿಳಿಸಿ ಬಾಗಿದ್ದೇವೆ
ಮತ್ತೆ ಮತ್ತೆ ಕಾಲನ ಕೈಗೆ
ಸಿಕ್ಕು ಮಾಗಿದ್ದೇವೆ
ಸ್ವಲ್ಪ ಬೆಳೆದಿದ್ದೇವೆ?
ಮತ್ತೆ ಈಗ ಎದುರಾಗಿದ್ದೇವೆ!

ತುಟಿತೆರೆಯದೆಯೂ ಆಡಿದ
ಸಾವಿರ ಅವ್ಯಕ್ತ ಮಾತು
ಮನಗಳಿಗೆ ಗೊತ್ತು!
ತಿಳಿದಿರಬಹುದು ಹೊತ್ತು
ಏಕೆ ಬೇರೆಯವರ ಮಾತು?

ಏತಕ್ಕೋ ಕಾದಿದ್ದರೂ…
ನಿರಾಳ ಕುಳಿತಿದ್ದೇವೆ
ನಿಟ್ಟುಸಿರ ಎಣಿಸಿದ್ದೇವೆ
ಪರಸ್ಪರ ನೋವುಗಳ
ಕೊಟ್ಟು ಪಡೆದಿದ್ದೇವೆ
ಸುಮ್ಮನೆ ಮುಗ್ಧತೆ
ನಟಿಸುತ್ತೇವೆ ಹೀಗೆ…

ಮುಖಾಮುಖಿ ಕುಳಿತಿದ್ದೆವು!
ಕುಳಿತಿದ್ದೇವೆ!
ಕುಳಿತಿರುತ್ತೇವೆ?
ಬದುಕು ಚಿಕ್ಕದು
ಕಾಲ ದೊಡ್ಡದು
ನಾವು ಸುಮ್ಮನೆ ಹೀಗೇ…
*****