ಕನ್ನಡ ಎಂದರೆ ಬರಿ ನುಡಿ ಅಲ್ಲ
ಮುತ್ತಿನ ಮಣಿ ಸಾಲು
ಕನ್ನಡ ಎನ್ನಲು ನಿನ ಕೊರಳಲ್ಲಿ
ಸಂಗೀತದ ಹೊನಲು
ಕನ್ನಡ ಎನುವ ಮೂರಕ್ಷರದಿ
ಎನಿತೋ ಅರ್ಥವಿದೆ
ಕನ್ನಡತನವ ಮೈಗೂಡಿಸಿದರೆ
ಬಾಳಿಗೆ ಸತ್ವವಿದೆ
ಕವಿ ಕೋಗಿಲೆಗಳು ಹಾಡಿವೆಯೆಂದರೆ
ಕನ್ನಡದೇ ಮೊದಲು
ಹಾಡಲು ಸೊಂಪು ಕೇಳಲು ಇಂಪು
ಇಲ್ಲ ಇಲ್ಲಿ ಅಳಲು
ದೇವಿ ಶಾರದೆಯ ಭಾಷೆಗಳಲ್ಲಿ
ಕನ್ನಡವೇ ಮೊದಲು
ಹಲವು ಭಾಷೆಗೆ ಒಲವು ತೋರಿರೆ
ಕನ್ನಡಕೇ ಮಿಗಿಲು
ಕನ್ನಡ ನೆಲದಲಿ ಹುಟ್ಟಿದೆಯೆಂದರೆ
ಹಿಂದಿನ ಪುಣ್ಯಫಲ
ಕಾವೇರೀ ಜಲ ಕುಡಿದೆಯೆಂದರೆ
ಅಮೃತಕೆಲ್ಲಿ ಬಲ?
*****