ಸಾವಲ್ಲದ ಸಾವು!


ಇದ್ದರೂ ಸತ್ತಂತ ಇರುವವರೆ ಬಹುಜನರು,
ಇದ್ದವರಿಗೆಲ್ಲ ಸಾವಾಗಿ ಇರುವರು ಕೆಲರು,
ಮೊದ್ದುತನದಲಿ ಸಾವಿಗಂಜಿ, ಬದುಕನೆ ಸಾವು-
ಮಾಡಿಕೊಂಡವರು ಹಲರು!

ಇದ್ದಾಗ ನಿನ್ನಂತೆ ಇದ್ದವರು ಯಾರಿಹರು?
ಬಿದ್ದವರ ಬಾಳಲ್ಲಿ ಜೀವಕಳೆಯನ್ನೂದಿ
ಸಿದ್ದಿ ತುಂಬಿದರಾರು, ನಿನ್ನವೊಲು ಗಾಂಧೀಜಿ
ಸಾವಿರದ ಶೂರರಾರು?


ನೀನು ಮಾನವನೇನು? ಮರುಳಿದು
ಮಾನವನು ನೀನೆಂಬುದು ;
ಮಾನವತಯಾದರ್ಶವೇ ಮೈ-
ಗೊಳುತ ಬಂದಿಲ್ಲಿರ್ದ್ದುದು

ಕುದಿವ ಮಾನವಲೋಕವನು ಕಂ-
ಡದನು ತಣಿಸಲು ಪ್ರಕೃತಿಯು,
ಹದದಿ ನಿನ್ನನು ರೂಪಿಸುತ ಕಳು-
ಹಿದುದು ನಮ್ಮಯ ಸುಕೃತಿಯು!

ಪಂಚಭೂತಶರೀರಿಯೇ ನೀ
ಪಂಚಭಾವಶರೀರ!
ಕರುಣೆ ಮೈತ್ರಿಯು ಹರುಷ ನಿರ್ಭಯ
ಶಾಂತಿಗಳ ಸಾಕಾರ!


ಹೂವಿನರಳುವ ಗುಣವೆ ನಿನ್ನ ನಗೆಯಾಯ್ತೊ,
ಜೇನ ಸವಿ ನಿನಗೆ ಮೆಲುಮಾತನೊದವಿಸಿತೊ!
ಆಗಸದ ಕೇಂದ್ರವೇ ಎದೆಯು ನಿನಗಾಯ್ತೊ,
ಸಾಗರದ ಆಳ ಗಾಂಭೀರ್ಯ ಹವಣಿಸಿತೋ!


ನಿನ್ನ ಕಣ್ಗೆ ರವಿಯ ಪ್ರಭೆಯು ಹಿಂಗದ ಬೆಳಕೂಡಿತೊ!
ನಿನ್ನ ಭಾವಗಳಲಿ ಅಮರಗಣವು ಅಮೃತ ನೀಡಿತೊ!
ನೀನು ನುಡಿದುದೆಲ್ಲ ಋಷಿಯ ದಿವ್ಯಕಾವ್ಯವಾಯಿತೊ,
ನೀನು ನಡೆದುದೆಲ್ಲ ಜನಕೆ ಬಾಳ ತಿರುಳ ತಿಳುಹಿತೊ!


ನೂರಾರು ವರ್ಷಗಳ ಪಾರತಂತ್ರದಿ ಸಿಲುಕಿ-
ಭಾರತೀಯರು ಬಾಯಿ ಬಾಯಿ ಬಿಡುತಿರುವಾಗ
ಪಾರುಗಾಣಿಸಲೆಂದು ಹೋರಾಡಿದರು ಹಲರು !
ದೊರೆಯಲಿಲ್ಲಾರಿಗಾ ಕೀರ್ತಿ;

ನಿಜವು ನೀ ನಿಜ ಯಶೋಮೂರ್ತಿ !
ದಾರಿಯರಿತವ ನೀನು ತೋರಿ ಅವರಿಗೆ ಯುಕ್ತಿ
ಹೂಡಿದೆಯೊ ಗೆಲುವ ಶಕ್ತಿ…
ಮಾಡಿದೆಯೊ ಬಂಧಮುಕ್ತಿ!


ನಿನ್ನ ಮಾತೇ ಮಾತು ತುಂಬಿದೆ
ದಿಕ್ಕು-ದಿಕ್ಕುಗಳಲ್ಲಿ….
ನಿನ್ನ ರೂಪವೆ ನೆಲಸಿ ನಿಂತಿದೆ
ಜಗದ ಜನಮನದಲ್ಲಿ !

ನಿನ್ನ ಉನ್ನತ ಭಾವ ಹರಡಿದೆ
ಗಾಳಿಯಲೆಯಲೆಯಲ್ಲಿ….
ನಿನ್ನ ಕೀರ್ತಿಯ ಕಳಸ ಸಾರಿದೆ
ಬಾನತುತ್ತುದಿಯಲ್ಲಿ !

ಎಲ್ಲೆಡೆಯು ಗಾಂಧೀಜಿಯಾಗಿರೆ
ನಿನಗೆ ಕೊನೆಯಿನ್ನೆಲ್ಲಿ ?
ನಿನ್ನ ನೊಯ್ಯುವ ಬಲವು ಎಲ್ಲಿದೆ
ಮೃತ್ಯುವಿನ ಮೈಯಲ್ಲಿ ?


ಶಕ್ತಿಯಿಲ್ಲದ ಮೃತ್ಯು ಯುಕ್ತಿಯೇನನೊ ಹೂಡಿ,
ತನ್ನ ಬಲೆಯೊಳು ಬಿಗಿದು ನಿನ್ನ ಕಟ್ಟಿಹೆನೆಂದು
ಹುಸಿಬಿಂಕದಲ್ಲಿಹುದು,
ಹುರುಪಿನಲ್ಲಿಹುದು….
ಹುಸಿಬಿಂಕದಲ್ಲಿಹುದು, ಹುರುಪಿನಲ್ಲಿಹುದು-
ವ್ಯಕ್ತಿಗಿರುವುದು ಸಾವು, ಶಕ್ತಿಗೆಲ್ಲಿಹುದು ?
ಗಾಂಧೀಜಿಯನು ಕೊಂದೆನೆಂದು ಸಾರುವ ಸಾವು,
ಲೌಕಿಕರ ಹೃದಯದಲಿ ಕೆರಳಿಸಿದ ನೋವು!


ವ್ಯಕ್ತಿಯೇನೊ ಸಾಯಬಹುದು
ಶಕ್ತಿಗೆಲ್ಲಿ ಸಾವು ?
ಗರುಡನನ್ನು ಕೆಣಕಿ ಮಾಡ-
ಬಲ್ಲದೇನು ಹಾವು ?

ಗಾಂಧಿಯವರ ಮರೆಮಾಡಿದ
ಸಾವಲ್ಲದ ಸಾವು….
ಮೃತ್ಯುವಿಗಿತ್ತಿಹುದು ಟೊಳ್ಳು
ಅಮರತ್ವದ ಠಾವು!


ಇದ್ದರೂ ಸತ್ತಂತೆ ಇರುವವರೆ ಬಹುಜನರು,
ಇದ್ದವರಿಗೆಲ್ಲ ಸಾವಾಗಿ ಇರುವರು ಕೆಲರು,
ಮೊದ್ದುತನದಲಿ ಸಾವಿಗಂಜಿ, ಬದುಕನೆ ಸಾವ
ಮಾಡಿಕೊಂಡವರು ಹಲರು.

ಇದ್ದಾಗ ನಿನ್ನಂತೆ ಇದ್ದವರು ಯಾರಿಹರು?
ಬಿದ್ದವರ ಬಾಳಲ್ಲಿ ಜೀವಕಳೆಯನ್ನೂದಿ
ತಿದ್ದಿ ನಡೆಸಿದರಾರು ನಿನ್ನವೊಲು ಬಾಪೂಜಿ,
ಸಾವಿರದ ಶೂರರಾರು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೆಳೆಯ ವ್ಯಾಸ
Next post ದಮಯಂತಿ

ಸಣ್ಣ ಕತೆ

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…