(ಲಾಹೋರಿನ ಡಾ ಶೇಖ್‌ ಮಹಮ್ಮದ್‌ ಇಖ್ಬಾಲರ ಉರ್ದು ಘಜಲನ್ನು ಅವಲಂಬಿಸಿ ಬರೆದುದು)

ನಮ್ಮವಳೀ ಭಾರತ ಜನನಿ ||ಧ್ರುವ||

ಭೂಮಂಡಲದಿ ರಮಣೀಯಂ
ಈ ಭಾರತವೆಮ್ಮಯ ನಿಲಯಂ,
ನಾವೀಕೆಯ ಮರಿದುಂಬಿಗಳು,
ಈಕೆಯೆಮ್ಮ ಜೀವನನಳಿನಿ ||೧||

ನಾವೆತ್ತಲಲೆದರು ಮುದದಿ
ಹೃದಯಂಗಳೀಕೆಯ ಪದದಿ,
ಇರಬಲ್ಲೆವಲ್ಲಿಯೆ ನಿಸದಂ
ಹರಿವುದೆತ್ತಲೆಮ್ಮೆದೆ ಧಮನಿ ||೨||

ಗಿರಿಗುಂಪುಗಳ ಮುಡಿಯೇರಿ
ಗಿರಿಯಾವುದೊ ಗಗನವಿಹಾರಿ-
ಅದೆ ನಮ್ಮ ಚಿರ ಪ್ರತಿಹಾರಿ,
ಅದೆ ಕಾವನೆಮ್ಮಯ ಕರುಣಿ ||೩||

ನೂರಾರು ನದಿಬಾಲೆಯರು
ಈಕೆಯಂಕದಲಿ ನಲಿಯುವರು,
ಈ ನವನಂದನದಿನಿದುಸುರಿಂ
ಕರುಬಾಂತುದಮರರ ಧರಣಿ ||೪||

ಧುನಿರಾಣಿ ಗಂಗೆಯೆ ನಿನಗೆ
ನೆನಪಿಹುದೇನಾ ಶುಭ ಗಳಿಗೆ
ಇಳಿದಂದು ನಿನ್ನಯ ದಡದಿ
ಮುನ್ನಮೆಮ್ಮ ಪರಿಸೆಯ ಸರಣಿ? ||೫||

ಧರುಮಂಗಳರುಹವು ನಮಗೆ
ಹಗೆಯನ್ನಿರಿಸಲೆಮ್ಮೊಳಗೆ-
ಭಾರತೇಯರಾವೆಮಗೊಂದೆ
ತವರೀಕೆಯೆ ನಮ್ಮಯ ಜನನಿ ||೬||

ಮುನ್ನಾದ ಹಲ ನಾಡಿಂದು
ಇತಿಹಾಸದಿ ಕನವರಿಪಂದು,
ಕಂದದು ಕುಂದದು ಎಂದೆಂದು
ಮೀಕೆಯ ಸೌಭಾಗ್ಯದ ತರಣಿ ||೭||

ನಿನ್ನ ನಾಮವನೆ ಪಾಡುವೆವು,
ನಾವಿದನೊಂದನೆ ಬೇಡುವೆವು-
ನಮ್ಮನಿಂತೆ ಜನುಮಜನುಮದಿ
ನಿನ್ನುದರದಿ ತಳೆಯೌ ಜನನಿ ||೮||
*****