ಇಂದು ಅಘನಾಶಿನಿಯ ಬಗೆಗೆ ಮಾತಾಡುವೆ
ನನ್ನೊಲವಿನ ಅಘನಾಶಿನಿ ಆ ಊರು ನದಿ ಮತ್ತು ದಡ
ಇಲ್ಲಿ ನಾನು ಅವತರಿಸಿದೆ ನಿನ್ನ ಪ್ರೀತಿಯ ಅಘನಾಶಿನಿಗೆ
ಅದರ ಅಪಾರ ಜಲರಾಶಿಗೆ ನನಗೆ ಸ್ಪಷ್ಟ ಕೇಳಿಸುವ
ಆ ಜೀವದ ಮೂಲ ಚೈತನ್ಯದ ನಾಡಿ ಮಿಡಿತಕ್ಕೆ
ಇಲ್ಲಿ ಅಂಬಿಗರು ಹಾಕುವ ಹುಟ್ಟು ಆ ಹುಟ್ಟು
ಚಿಮ್ಮಿಸುವ ನೀರಿನ ಕಣಗಳ ಕುಣಿತ ಆಟಕ್ಕೆ
ಮೌನದಲ್ಲಿ ಭೋರ್ಗರೆಯುವ ಇಲ್ಲಿಯ ಅಲೆಗಳ ಕಲ್ಲುಬಡಿತಕ್ಕೆ
ಭರತಕ್ಕೆ ಇಳಿತಕ್ಕೆ
ನನ್ನ ಭಾವನೆಗಳನ್ನು ಕವಿತೆಗಳನ್ನು ಅಕ್ಷರ ಶಬ್ದಗಳನ್ನು
ಒಪ್ಪಿಸುವೆ ಪ್ರಿಯ ಅಘವಾಶಿನಿ

ಈ ನದಿಯನ್ನು ದಾಟಿ ಯಾರಾರೋ ಬರುವರು
ಅವರು ತಂದಿದ್ದರೆ ಸೈಕಲ್ಲನ್ನು
ಅಂಬಿಗರು ದಡಕ್ಕೆ ಹೊತ್ತು ತರುವರು ದೋಣಿ
ಅಲ್ಲಿಂದ ಇಲ್ಲಿಗೂ ಇಲ್ಲಿಂದ ಅಲ್ಲಿಗೂ
ಹೋಗುತ್ತಲಿರುವುದು

ಗಾಳಿ ಮಳೆಗೆ ಹಾಯಿ ಬಿಚ್ಚಿಕೊಳ್ಳುವುದು
ಅದರ ಸಹಸ್ರ ತೂತುಗಳಲ್ಲಿ ನನ್ನವರ ಬಡತನ
ನಿನ್ನ ಒಡಲಾಳದಲ್ಲಿ
ಯಾವಾವ ಜಾತಿಯ ಮೀನುಗಳು ಹುದುಗಿವೆ
ಇವರ ನಿರಕ್ಷರತೆ ದಾರಿದ್ರ್ಯ ಹಸಿವು ಸರಳ
ಹಾಗೂ ಕಠಿಣ
ಸರಾಯಿ ಘಮ್ಮೆಂದು ಮೂಗಿಗೆ ಬಡಿಯುವ ಬದುಕು
ಯಾವ ಕೈಯಲ್ಲಿ ಬರೆದೆ
ಇವರನ್ನು ದಡದಲ್ಲಿ ಕುಳ್ಳಿರಿಸಿ
ನೀನು ಯಾವಾವ ಲೋಕಕ್ಕೆ ನಡೆವೆ ನಿನ್ನ
ಗುಟ್ಟು ಬಗೆಯಲು ಕಾತರಿಸಿರುವೆ
ಉಪ್ಪು ನೀರಿನ ಒಳಗೂ ಸಿಹಿ
ತುಂಬಿ ತುಳುಕುವುದು ತದಡಿಯ ದಡಕ್ಕೊತ್ತಿ ನಿಂತ
ಲಾಂಚುಗಳು ರಾತ್ರಿಯ ಬೆಳಕಲ್ಲಿ
ದೋಣಿಗಳ ಕಂಡು ನಗಲಾರಂಭಿಸಿವೆ ತಾರೆಗಳು
ನೀರಲ್ಲಿ ಮುಖ ನೋಡಿ ರಾತ್ರಿಯ ಆಟಕ್ಕೆ
ಸಜ್ಜಾಗಿವೆ ತೇಲಿ ತೇಲಿ ಬರುತ್ತಿವೆ ನೆನಪುಗಳು
ಅಘನಾಶಿನಿ ಎಂದಾದರೊಂದು ದಿನ
ಈ ಕವಿತೆ ಪೂರ್ತಿ ಮಾಡುವೆ
*****