ಹುಲ್ಲು ಕಡ್ಡಿ ಗೂಡು ಕಟ್ಟಿ
ಹಕ್ಕಿ ಕಾಯುವುದು ನಾಳೆಗೆ
ಕಾಳುಗಳನು ಹೆಕ್ಕಿ ತಂದು
ಅಳಿಲು ಕಾಯುವುದು ನಾಳೆಗೆ

ಎಲೆಯುದುರಿಸಿ ಚಳಿಯಲ್ಲಿ
ಮರ ಕಾಯುವುದು ನಾಳೆಗೆ
ನೆಲ ಉತ್ತು ಬೀಜ ಬಿತ್ತಿ
ರೈತ ಕಾಯುವುದು ನಾಳೆಗೆ

ಬಾವಿ ಕಟ್ಟೆ ಸುತ್ತ ನಿಂತು
ಏನು ಗುಸು ಗುಸು ಹೆಂಗಸರದು
ಮರದ ನೆರಳ ಕೆಳಗೆ ಕುಳಿತು
ಏನು ಚರ್ಚೆ ಗಂಡಸರದು

ಹೊಂತಗಾರ ಹೊಂತಗಾತಿ
ನಗುನಗುತ್ತ ಹೋಗುತಾರೆ
ಕೋಲೂರುವ ಮುದುಕರೂ
ಈ ದಾರಿ ನಡೆಯುತ್ತಾರೆ

ಚಿನ್ನಿ ದಾಂಡು ಆಡುತಾವೆ
ಬೀದಿ ತುಂಬ ಮಕ್ಕಳು
ಜಗಳಾಡುವ ನಲಿದಾಡುವ
ಖಯಾಲಿರದ ಹೈಕಳು

ನೆನಪುಗಳಿವೆ ಕತೆಗಳಿವೆ
ಸಂತೋಷವಿದೆ ವ್ಯಥೆಯಿದೆ
ಮಾಗಿ ಕಳೆದು ವಸಂತ ಬಂದು
ಮತ್ತೆ ಸುರುವಾಗುವ ಕಥೆಯಿದೆ

ಯಾರೊ ಸಮೆದ ಆಟದಂತೆ
ನೇಮ ನಿಯಮ ತಿಳಿಯದೆ
ಕಣ್ಕಟ್ಟು ಕಣ್ಬಿಟ್ಟು
ಆಟವಂತು ಸಾಗಿದೆ

ಸೋತುದೆಷ್ಟು ಗಳಿಸಿದೆಷ್ಟು
ಲೆಕ್ಕಾಚಾರ ನಂತರ
ಈಗಂತೂ ಎತ್ತಿಕೊಳ್ಳಿ
ನಿಮಗೆ ಬಂದ ಚಿತ್ತರ
*****