ಬಂಡೆದ್ದ ಶಕ್ತಿಗಳು ಸುತ್ತ ಮುತ್ತಿದ ನನ್ನ
ಪಾಪಭೂಮಿಯ ನಡುವೆ ನಿಂತ ಬಡ ಆತ್ಮವೇ,
ಬಳಿದು ಹೊರಗೋಡೆಗೆ ಅಂಥ ಚಂದದ ಬಣ್ಣ
ಒಳಗೊಳಗೆ ಕೊರತೆ ಅನುಭವಿಸಿ ನವೆಯುವೆ ಏಕೆ ?
ಈ ಮಹಲೊ ನಾಲ್ಕು ದಿನದಲ್ಲೆ ಕುಸಿಯುವ ಮಾಟ,
ಇಂಥ ಬಲು ತುಟ್ಟಿ ಸಿಂಗಾರ ಯಾತಕೆ ಇದಕೆ ?
ಹೆಚ್ಚಾದುದೆಲ್ಲ ವಾರಸುದಾರ ಕ್ರಿಮಿಕೀಟ
ಭಕ್ಷಿಸಲೆ ? ಹೀಗೆಯೇ ಕೊನೆ ನಿನ್ನ ದೇಹಕ್ಕೆ ?
ಆಳು ದೇಹವ ಕರಗಿಸುತ್ತ ಬಾಳುವೆ ನಡೆಸು,
ನಿನ್ನ ಭಂಡಾರ ವರ್‍ಧಿಸಲು ಅದು ಕ್ಷೀಣಿಸಲಿ.
ಕಿಲುಬು ಗಳಿಗೆಗಳ ವಿಕ್ರಯಿಸಿ ದಿವ್ಯವ ಗಳಿಸು,
ಒಳಗೆ ಬೆಳೆ, ಸಾಕು ಬಾಹ್ಯಾಡಂಬರವು ನಿಲಲಿ.
ಜೀವಗಳ ಕಬಳಿಸುವ ಸಾವನ್ನೆ ನೀ ಉಣ್ಣು.
ಸಾವೆ ಸತ್ತರೆ ಒಮ್ಮೆ, ಸಾವೆಲ್ಲಿಯದು ಇನ್ನು?
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 146
Poor soul, the centre of my sinful earth