ರಂಗಣ್ಣನ ಕನಸಿನ ದಿನಗಳು – ೨೮

ರಂಗಣ್ಣನ ಕನಸಿನ ದಿನಗಳು – ೨೮

ಶಾಂತವೀರಸ್ವಾಮಿಗಳ ಆತಿಥ್ಯ

ರಂಗಣ್ಣನಿಗೆ ವರ್ಗವಾಗಿರುವ ಸಂಗತಿ ರೇಂಜಿನಲ್ಲಿ ಪ್ರಚಾರವಾಯಿತು. ಆವಲಹಳ್ಳಿಯ ದೊಡ್ಡ ಬೋರೇಗೌಡರೂ ರಂಗನಾಥಪುರದ ಗಂಗೇಗೌಡರೂ ಬಂದು ಮಾತನಾಡಿಸಿದರು. `ವರ್ಗದ ಆರ್ಡರನ್ನು ರದ್ದು ಪಡಿಸಲು ಪ್ರಯತ್ನ ಪಡೋಣವೇ’- ಎಂದು ಕೇಳಿದರು.

‘ಬೇಡ. ನೀವುಗಳು ಪ್ರಯತ್ನಪಟ್ಟರೆ ನಿಮ್ಮನ್ನೆಲ್ಲ ನಾನು ಎತ್ತಿ ಕಟ್ಟಿದೆನೆಂದು ಮೇಲಿನ ಸಾಹೇಬರು ತಿಳಿದುಕೊಂಡು ಅಸಮಾಧಾನ ಪಟ್ಟು ಕೊಳ್ಳುತ್ತಾರೆ. ಅದೂ ಅಲ್ಲದೆ ಈ ವರ್ಗದ ಆರ್ಡರನ್ನು ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ. ಆದ್ದರಿಂದ ಬದಲಾಯಿಸುವುದಿಲ್ಲ’ ಎಂದು ರಂಗಣ್ಣ ಹೇಳಿದನು. ಕಡೆಗೆ ಆ ಇಬ್ಬರು ಗೌಡರು ತಮ್ಮ ಹಳ್ಳಿಗಳಿಗೆ ಒಂದು ದಿನವಾದರೂ ಬಂದು ಆತಿಥ್ಯ ಸ್ವೀಕಾರ ಮಾಡಬೇಕೆಂದು ಕೇಳಿಕೊಂಡರು. ಅವರ ಇಷ್ಟಾನುಸಾರ ರಂಗಣ್ಣ ಅವರ ಹಳ್ಳಿಗಳಿಗೆ ಹೋಗಿಬಂದನು.

ಹೀಗೆ ವಾಪಸು ಬಂದನಂತರ ಗವಿಮಠದ ಪಾರು ಪತ್ಯಗಾರನು ಕುದುರೆಗಾಡಿಯನ್ನು ತೆಗೆದುಕೊಂಡು ಬಂದು ರಂಗಣ್ಣನನ್ನು ಮನೆಯಲ್ಲಿ ಕಂಡನು.

‘ಸ್ವಾಮಿಯವರಿಗೆ ನನ್ನ ಕಾಗದ ಸೇರಿತೋ?’ ಎಂದು ರಂಗಣ್ಣ ಕೇಳಿದನು.

‘ಸೇರಿತು ಸ್ವಾಮಿ! ಗಾಡಿಯನ್ನು ಕಳಿಸಿದ್ದಾರೆ. ಖುದ್ದಾಗಿ ನನ್ನನ್ನೆ ಕಳಿಸಿದ್ದಾರೆ. ತಾವು ದಯಮಾಡಿಸಬೇಕು.’

ರಂಗಣ್ಣ ಒಳಕ್ಕೆ ಹೋಗಿ ಹೆಂಡತಿಗೆ ವರ್ತಮಾನ ಕೊಟ್ಟನು. ಆಕೆ, ‘ಹೋಗಿಬನ್ನಿ, ಆದರೆ ಶಂಕರಪ್ಪನನ್ನು ಜೊತೆಗೆ ಕರೆದುಕೊಂಡು ಹೋಗಿ’ ಎಂದು ಹೇಳಿದಳು. ಶಂಕರಪ್ಪನಿಗೆ ಉಗ್ರಪ್ಪನ ಪೆನ್ಷನ್ ಕಾಗದಗಳನ್ನೂ ಜೊತೆಗೆ ತರುವಂತೆ ರಂಗಣ್ಣ ಹೇಳಿಕಳಿಸಿ ತಾನು ಹೊರಡಲು ಉಡುಪಿನ ಸಜ್ಜು ಮಾಡಿಕೊಂಡನು. ಸರಿಗೆಯ ಪಂಚೆಯನ್ನುಟ್ಟು ಕೊಂಡು, ಸರ್ಜುಕೋಟು, ಶಲ್ಯ ಮತ್ತು ರುಮಾಲುಗಳನ್ನು ಧರಿಸಿಕೊಂಡನು. ಶಂಕರಪ್ಪನ ಕೈಗೆ ಒಂದು ಶುಭ್ರವಾದ ಟವಲ್ಲನ್ನು ಕೊಟ್ಟು ತನ್ನ ಕೈ ಬೆತ್ತ ಹಿಡಿದುಕೊಂಡು ಹೊರಟನು. ಕುದುರೆಯ ಗಾಡಿಯಾದ್ದರಿಂದ ಪ್ರಯಾಣ ಬೇಜಾರು ಹಿಡಿಸಲಿಲ್ಲ. ಬೆಳಗ್ಗೆ ಒಂಬತ್ತು ಗಂಟೆಗೆ ಹೊರಟವರು ಹತ್ತೂಕಾಲು ಗಂಟೆಗೆ ಗವಿಮಠವನ್ನು ಸೇರಿದರು.

ಮಠದ ಸನ್ನಿವೇಶ ಬಹಳ ರಮಣೀಯವಾಗಿತ್ತು. ಮೂರು ಕಡೆ ಬೆಟ್ಟಗಳು ಒಂದು ಕಡೆ ಬಯಲು; ಬೆಟ್ಟಗಳಮೇಲೆ ಕುರುಚಲು ಕಾಡು; ಅಲ್ಲಲ್ಲಿ ಝರಿಗಳು; ಬಯಲಲ್ಲಿ ಸೀಳು ಹೊಳೆಗಳು; ಪೈರು ಪಚ್ಚೆ. ಬೆಟ್ಟದ ಬುಡದಲ್ಲಿ ಕೆಲವು ಸತ್ರಗಳು, ಎರಡು ಮೂರು ದೇವಾಲಯಗಳು; ಬೆಟ್ಟದಮೇಲೊಂದು ದೇವಾಲಯ, ಮಠದ ಕಟ್ಟಡ ಬೆಟ್ಟದ ಬುಡದಲ್ಲಿಯೇ ಇತ್ತು. ಸಾಮಾನ್ಯವಾಗಿ ಅಲ್ಲಿ ಪ್ರಶಾಂತ ವಾತಾವರಣವಿರುತ್ತಿತ್ತು. ಆದರೆ ಈಚೆಗೆ ನೂತನ ಸ್ವಾಮಿಗಳ ಪಟ್ಟಬಂಧ ಮಹೋತ್ಸವ ನಡೆದಿದ್ದುದರಿಂದ, ಅದರ ಅವಶಿಷ್ಟಗಳು ಇನ್ನೂ ಇದ್ದುವು; ಆ ಮಹೋತ್ಸವಕ್ಕೆ ಬಂದಿದ್ದವರಲ್ಲಿ ಕೆಲವರು ಇನ್ನೂ ಸ್ಥಳದಲ್ಲಿಯೇ ಇದ್ದರು. ಮಠವನ್ನು ಸಮೀಪಿಸುತ್ತಿದ್ದಾಗ ಅಮಲ್ದಾರರು, ಪೊಲೀಸ್ ಇನ್ಸ್‌ಪೆಕ್ಟರು, ಶಿರಸ್ತೆದಾರರು, ಮುನಸೀಫರು, ಮ್ಯಾಜಿಸ್ಟ್ರೇಟರು ಆದಿಯಾಗಿ ಹಲವರು ಸರಕಾರಿ ಅಧಿಕಾರಿಗಳು ಸಹ ಅತಿಥಿಗಳಾಗಿ ಬಂದಿರುವುದು ರಂಗಣ್ಣನಿಗೆ ತಿಳಿಯಿತು. ಜನಾರ್ದನ ಪುರದಿಂದ ಅಡಿಗೆಯವರನ್ನು ಕರೆಸಿ ಒಂದು ಸತ್ರದಲ್ಲಿ ಅಡಿಗೆಯ ಏರ್ಪಾಟನ್ನು ಇಟ್ಟಿದ್ದರು. ರಂಗಣ್ಣನಿಗೆ ಬೇರೆ ಒಂದು ಸತ್ರದಲ್ಲಿ ಮಹಡಿಯ ಮೇಲೆ ದೊಡ್ಡದೊಂದು ಕೊಟಡಿ ಬೀಡಾರವಾಗಿ ಏರ್ಪಟ್ಟಿತ್ತು. ಮೊದಲು ಆ ಬೀಡಾರವನ್ನು ನೋಡೋಣವೆಂದು ಹೋಗುತ್ತಿದ್ದಾಗ ಅಮಲ್ದಾರರೂ ಮುನಸೀಫರೂ ಎದುರು ಬಿದ್ದರು. ಒಬ್ಬರಿಗೊಬ್ಬರು ಕುಶಲ ಪ್ರಶ್ನೆಗಳನ್ನು ಮಾಡಿ ಕೈಗಳನ್ನು ಕುಲುಕಿ ಆದಮೇಲೆ,

`ರಂಗಣ್ಣನವರೇ! ನಿಮ್ಮ ನೆಪದಲ್ಲಿ ನಮಗೂ ಈ ದಿನ ಔತಣ. ಮುಖ್ಯ ಅತಿಥಿಗಳಾಗಿ ನೀವು ಬಂದಿದ್ದೀರಿ! ನಿಮ್ಮ ಪರಿವಾರವಾಗಿ ನಾವು ಬಂದಿದ್ದೇವೆ!’ ಎಂದು ನಗುತ್ತಾ ಅಮಲ್ದಾರರು ಹೇಳಿದರು.

`ತಾಲ್ಲೂಕಿನ ಧಣಿಗಳು ತಾವು! ತಾವು ಮುಂದಿರಬೇಕು, ತಮ್ಮ ಹಿಂದೆ ನಾವಿರಬೇಕು!’ ಎಂದು ರಂಗಣ್ಣನು ನಗುತ್ತಾ ಹೇಳಿದನು.

ಹೀಗೆ ಮಾತುಕತೆಗಳನ್ನಾಡಿ ರಂಗಣ್ಣ ತನ್ನ ಕೊಟಡಿಗೆ ಹೋದನು. ನೆಲಕ್ಕೆ ಜಮಖಾನವನ್ನು ಹಾಸಿ ದಿಂಬುಗಳನ್ನು ಗೋಡೆಗೆ ಒರಗಿಸಿದ್ದರು. ಒಂದು ಕಡೆ ಒಂದು ಮೇಜು ಮತ್ತು ಎರಡು ಕುರ್ಚಿಗಳಿದ್ದುವು. ಹಿಂದೆಯೇ ಬಂದ ಪಾರುಪತ್ಯಗಾರನು ‘ಸ್ವಾಮಿಯವರು ಇಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದು ಕೊಳ್ಳಬೇಕು. ಶ್ರೀಗಳವರಿಗೆ ತಾವು ಬಂದಿರುವ ಸಮಾಚಾರವನ್ನು ತಿಳಿಸಿ ಮತ್ತೆ ಬರುತ್ತೇನೆ’ ಎಂದು ಹೇಳಿ ಹೊರಟು ಹೋದನು.

ರಂಗಣ್ಣ ದಿಂಬಿಗೆ ಒರಗಿಕೊಂಡು, ‘ನೋಡಿದಿರಾ ಶಂಕರಪ್ಪ! ಹೀಗೆ ಆಗುವುದೆಂದು ಕನಸಿನಲ್ಲಾದರೂ ಕಂಡಿದ್ದೀರಾ? ಹಿಂದಿನ ಆ ಉಗ್ರಪ್ಪನೆಲ್ಲಿ! ಇಂದಿನ ಶಾಂತವೀರ ಸ್ವಾಮಿಗಳೆಲ್ಲಿ! ನಾನು ಮುಖ್ಯ ಅತಿಥಿಯಾಗಿ ಇಲ್ಲಿಗೆ ಬಂದಿರುವುದು ಒಂದು ಸೋಜಿಗವಲ್ಲವೆ! ಎಂದು ಹೇಳಿದನು.

`ಹೌದು ಸ್ವಾಮಿ! ಕಣ್ಣಿಂದ ಸಾಕ್ಷಾತ್ತಾಗಿ ನೋಡಿದರೂ ನಂಬಲಾಗದ ಘಟನೆ!’

ಶಂಕರಪ್ಪನೂ ಆಶ್ಚರ್ಯಭರಿತನಾಗಿ ಉಗ್ರಪ್ಪನ ಪೂರ್ವಾಶ್ರಮದ ಕಥೆಗಳನ್ನು ಹೇಳುತ್ತಿದ್ದನು. ರಂಗಣ್ಣ, ‘ಶಂಕರಪ್ಪ! ನೀವು ತಂದಿರುವ ಪೆನ್ಷನ್ ಕಾಗದಗಳಿಗೆ ಸ್ವಾಮಿಗಳ ರುಜು ಮಾಡಿಸೋಣ. ಎಂತಿದ್ದರೂ ಇಪ್ಪತೈದು ವರ್ಷ ಸರ್ವಿಸ್ ಆಗಿದೆ. ಆ ಸಂಸಾರ ಪೋಷಣೆಗೆ ಒಂದಿಷ್ಟು ಪೆನ್ಷನ್ ಒದಗಲಿ, ನಾನು ಖುದ್ದಾಗಿ ಶಿಫಾರಸು ಮಾಡಿ ಕಳಿಸಿಕೊಡುವೆ ಎಂದನು. ಪಾರುಪತ್ಯಗಾರನು ಮತ್ತೆ ಬಂದನು. ಅವನ ಜೊತೆಯಲ್ಲಿ ಮಾಣಿಯೊಬ್ಬನು ಬೆಳ್ಳಿಯ ತಟ್ಟೆಗಳಲ್ಲಿ ಸಜ್ಜಿಗೆ ಮತ್ತು ಬೋಂಡಗಳನ್ನೂ , ಲೋಟಗಳಲ್ಲಿ ಕಾಫಿಯನ್ನೂ ತೆಗೆದುಕೊಂಡು ಬಂದು ಮೇಜಿನ ಮೇಲಿಟ್ಟನು.

`ಸ್ವಲ್ಪ ಉಪಾಹಾರ ಸ್ವೀಕರಿಸಬೇಕು! ಶ್ರೀಗಳವರು ಪೂಜಾಗೃಹದಲ್ಲಿದ್ದಾರೆ. ಅರ್ಧಗಂಟೆಯ ತರುವಾಯ ತಮ್ಮನ್ನು ಅವರಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ತಾವು ಒಬ್ಬರೇ ಅಲ್ಲಿಗೆ ದಯಮಾಡಿಸಬೇಕೆಂದು ಶ್ರೀಗಳವರು ತಿಳಿಸಿದ್ದಾರೆ’ ಎಂದು ಪಾರುಪತ್ಯಗಾರನು ಹೇಳಿದನು.

ಉಪಾಹಾರ ಮುಗಿಯತು. ಅರ್ಧ ಗಂಟೆಯ ಮುಗಿಯಿತು. `ಇದೇ ಉಡುಪಿನಲ್ಲಿ ಸ್ವಾಮಿಗಳ ದರ್ಶನಕ್ಕೆ ಬರಬಹುದೇ? ಇಲ್ಲ. ಕೋಟು ರುಮಾಲುಗಳನ್ನು ತೆಗೆದಿಟ್ಟು ಬರಲೇ?’ ಎಂದು ರಂಗಣ್ಣ ಕೇಳಿದನು.

`ಹೇಗೆ ಬಂದರೂ ಆಕ್ಷೇಪಣೆಯಿಲ್ಲ ಸ್ವಾಮಿ!’

ಪಾರುಪತ್ಯಗಾರ ಮುಂದೆ ರಂಗಣ್ಣ ಹಿಂದೆ ಹೊರಟರು. ತಾನು ಹೇಗೆ ನಡೆದುಕೊಳ್ಳಬೇಕು? ಏನೆಂದು ಆತನನ್ನು ಸಂಬೋಧಿಸಬೇಕು? ಆತನೊಡನೆ ಏನನ್ನು ಮಾತನಾಡಬೇಕು? ಎಂದು ಮುಂತಾಗಿ ರಂಗಣ್ಣ ಆಲೋಚಿಸತೊಡಗಿದನು. ಅಂತಹ ಸಂದಿಗ್ಧ ಸನ್ನಿವೇಶದಲ್ಲಿ ಅವನು ಅದುವರೆಗೂ ಸಿಕ್ಕಿ ಕೊಂಡದ್ದೇ ಇಲ್ಲ. ಆ ಕಾಲಕ್ಕೆ ಏನು ಹೊಳೆಯುವುದೋ ಹಾಗೆ ಮಾಡೋಣವೆಂದು ತೀರ್ಮಾನಿಸಿಕೊಂಡು ರಂಗಣ್ಣ ಮೌನದಿಂದ ಹೋಗುತ್ತಿದ್ದನು. ಮಠದ ಮುಂಭಾಗದಲ್ಲಿ ಜನರ ಓಡಾಟ ಸುಮಾರಾಗಿತ್ತು. ಮುಂದಿನ ಕೈ ಸಾಲೆಯಲ್ಲಿ ಒಂದು ಎತ್ತರವಾದ ಗದ್ದುಗೆ ಇತ್ತು. ಅದರ ಮೇಲೆ ರತ್ನಗಂಬಳಿ ಹಾಕಿ ವ್ಯಾಘ್ರಾಜಿನವನ್ನು ಹರಡಿತ್ತು. ಕಾವಿಬಟ್ಟೆಯ ಮೇಲ್ಕಟ್ಟು ಮತ್ತು ಕಾವಿ ಬಟ್ಟೆಯ ಗವಸುಗಳಿದ್ದ ದಿಂಬುಗಳು ಇದ್ದುವು. ಹಲವರು ಭಕ್ತರು ಆ ಗದ್ದುಗೆಯ ಬಳಿಗೆ ಹೋಗಿ ಅಲ್ಲಿದ್ದ ಪಾದುಕೆಗಳನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಪಕ್ಕದಲ್ಲಿದ್ದ ಹುಂಡಿಯ ಪೆಟ್ಟಿಗೆಯಲ್ಲಿ ಕಾಣಿಕೆಗಳನ್ನು ಹಾಕಿ ಬರುತ್ತಿದ್ದರು. ಹುಂಡಿ ಪೆಟ್ಟಿಗೆಯ ಪಕ್ಕದಲ್ಲಿ ದವಾಲಿಯ ಜವಾನ ಕೋಲು ಹಿಡಿದು ಕೊಂಡು ನಿಂತಿದ್ದನು. ಕೈಸಾಲೆಯನ್ನು ದಾಟಿದಮೇಲೆ ದೊಡ್ಡ ದೊಡ್ಡ ಮರದ ಕಂಬಗಳ ವಿಶಾಲವಾದ ತೊಟ್ಟಿ, ಅಲ್ಲಿ ಹೆಚ್ಚು ಜನವಿರಲಿಲ್ಲ. ಆ ತೊಟ್ಟಿಯನ್ನು ದಾಟಿ ಮುಂದಕ್ಕೆ ಹೋದರೆ ಅಲ್ಲಿ ಇನ್ನೊಂದು ತೊಟ್ಟಿ, ಅದು ಮೊದಲಿನದರಷ್ಟು ವಿಶಾಲವಾಗಿರಲಿಲ್ಲ, ಮತ್ತು ಅಲ್ಲಿ ಬೆಳಕು ಸಹ ಹೆಚ್ಚಾಗಿರಲಿಲ್ಲ; ಜನರು ಯಾರೂ ಇರಲಿಲ್ಲ; ಗಂಭೀರ ನೀರವ ಸ್ಥಾನವಾಗಿತ್ತು. ಆ ತೊಟ್ಟಿ ಯನ್ನು ದಾಟಿದನಂತರ ಪಾರುಪತ್ಯಗಾರನು ಕೈ ಮುಗಿದು, ‘ಸ್ವಾಮಿಯವರು ಒಳಕ್ಕೆ ದಯಮಾಡಿಸಬೇಕು. ಈ ನಡು ಮನೆಯನ್ನು ದಾಟಿ ಮುಂದೆ ಹೋದರೆ ಇನ್ನೊಂದು ಸಣ್ಣ ತೊಟ್ಟಿ ಇದೆ. ಅದರ ಬಲಗಡೆಯ ಕೋಣೆಯಲ್ಲಿ ಶ್ರೀಗಳವರು ಇದ್ದಾರೆ. ಇಲ್ಲಿಂದ ಮುಂದಕ್ಕೆ ನಾನು ಬರಲು ನನಗೆ ಅಪ್ಪಣೆಯಿಲ್ಲ’ ಎಂದು ಹೇಳಿ ಹಿಂದೆ ನಿಂತುಬಿಟ್ಟನು. ಮುಂದೆ ಸ್ವಲ್ಪ ಕತ್ತಲಾಗಿತ್ತು. ನಡುಮನೆಯನ್ನು ಕಷ್ಟ ಪಟ್ಟು ಕೊಂಡು ದಾಟಿದನಂತರ ಮುಂದೆ ತೊಟ್ಟಿಯಲ್ಲಿ ಸ್ವಲ್ಪ ಬೆಳಕು ಕಂಡು ಬಂತು. ರಂಗಣ್ಣ ಆ ತೊಟ್ಟಿಯನ್ನು ಪ್ರವೇಶಿಸಿ ಬಲಗಡೆಯ ಕೊಟಡಿಯ ಬಳಿಗೆ ಬಂದಾಗ ಒಳಗಿದ್ದ ಸ್ವಾಮಿಗಳು ಗೋಚರವಾದರು. ಅವನಿಗೆ ಗುರುತೇ ಸಿಕ್ಕಲಿಲ್ಲ! ತಲೆ ಗಡ್ಡ ಮೀಸೆಗಳನ್ನೆಲ್ಲ ಬೋಳಿಸಿ ಕೊಂಡು ಕಾವಿಯ ಬಟ್ಟೆಯನ್ನು ಉಟ್ಟು, ದಟ್ಟವಾಗಿ ವಿಭೂತಿಯನ್ನು ಧರಿಸಿದ್ದ ಆ ವ್ಯಕ್ತಿ ಹಿಂದೆ ಉಗ್ರಪ್ಪನಾಗಿದ್ದನೆಂದು ಹೇಳುವಂತೆಯೇ ಇರಲಿಲ್ಲ! ಆದರೆ ಆ ಸ್ಥೂಲ ಕಾಯ, ದಪ್ಪ ತಲೆ, ಭಾರಿ ತೋಳುಗಳು – ಅವುಗಳನ್ನು ನೋಡಿದ ಮೇಲೆ ಬೇರೆ ವ್ಯಕ್ತಿಯಲ್ಲವೆಂದು ತೀರ್ಮಾನಿಸಿ ಕೊಂಡನು. ಸ್ವಾಮಿಗಳು ನೆಲದ ಮೇಲೆ ಹಾಸಿದ್ದ ವ್ಯಾಘ್ರಾಜಿನದ ಮೇಲೆ ಕುಳಿತಿದ್ದರು! ಸ್ವಲ್ಪ ದೂರದಲ್ಲಿ ಕಲ್ಲೇಗೌಡ ಮತ್ತು ಕರಿಯಪ್ಪ ಚಾಪೆಯಮೇಲೆ ಕುಳಿತಿದ್ದರು! ರಂಗಣ್ಣನ ಎದೆ ಝಲ್ಲೆಂದಿತು! ಮುಖ ವಿವರ್ಣವಾಯಿತು! ಆದರೆ ಅಲ್ಲಿ ಹೆಚ್ಚಾಗಿ ಬೆಳಕಿರಲಿಲ್ಲವಾದುದರಿಂದ ಅವನಲ್ಲಾದ ಮಾರ್ಪಾಟು ಇತರರಿಗೆ ಕಾಣಿಸಲಿಲ್ಲ. ಒಂದು ಕ್ಷಣ ರಂಗಣ್ಣ ಸ್ತಬ್ದನಾಗಿ ನಿಂತು, ಸ್ವಲ್ಪ ತೊದಲುನುಡಿಯಿಂದ, `ಪೂಜ್ಯ ಸ್ವಾಮಿಗಳಿಗೆ ನಮಸ್ಕಾರ!’ ಎಂದು ಹೇಳಿದನು. ಅ ಮುಖಂಡರ ಕಡೆಗೆ ತಿರುಗಿಕೊಂಡು ‘ನಮಸ್ಕಾರ’ ಎಂದನು. ಅವರು ಸಹ ನಮಸ್ಕಾರ ಮಾಡಿದರು.

ಸ್ವಾಮಿಗಳು ತಮಗೆ ಸಮೀಪದಲ್ಲಿದ್ದ ಮಣೆಯನ್ನು ತೋರಿಸಿ, `ಇಲ್ಲಿ ಕುಳಿತುಕೊಳ್ಳಿ. ನಮ್ಮ ಆಹ್ವಾನವನ್ನು ಮನ್ನಿಸಿ ನೀವು ಈ ದಿನ ಇಲ್ಲಿಗೆ ಬಂದದ್ದು ನನಗೆ ಬಹಳ ಸಂತೋಷ. ಆ ಶಾಂತವೀರೇಶ್ವರನ ಅನುಗ್ರಹಕ್ಕೆ ನೀವು ಪಾತ್ರರಾದಿರಿ’ ಎಂದು ಹೇಳಿದರು. ಸ್ವಾಮಿಗಳೆದುರಿಗೆ ಗರ್ಭಗುಡಿಯಲ್ಲಿ ಲಿಂಗವೊಂದಿತ್ತು. ಆಗತಾನೆ ಪೂಜೆ ಮಾಡಿದ್ದ ಹೂವು ಪತ್ರೆಗಳು ತುಂಬಿದ್ದುವು; ಅಲ್ಲಿ ತೂಗುದೀಪವೊಂದು ಉರಿಯುತ್ತಿತ್ತು ರಂಗಣ್ಣ ಮಣೆಯ ಮೇಲೆ ಕುಳಿತುಕೊಂಡನು. ಪ್ರಯಾಣದ ವಿಷಯ ಮತ್ತು ಉಪಾಹಾರದ ವಿಷಯ ಮಾತನಾಡಿದ ಮೇಲೆ ಸ್ವಾಮಿಗಳು,

`ನಾವು ಕಲ್ಲೇಗೌಡರಿಗೂ ಕರಿಯಪ್ಪ ನವರಿಗೂ ಆಹ್ವಾನ ಕೊಟ್ಟದ್ದೆವು. ಅವರೂ ದೊಡ್ಡ ಮನಸ್ಸು ಮಾಡಿ ಇಲ್ಲಿಗೆ ಬಂದಿದ್ದಾರೆ. ನಮಗೆ ಬಹಳ ಸಂತೋಷವಾಗಿದೆ’ ಎಂದು ಹೇಳಿದರು.

ರಂಗಣ್ಣನಿಗೆ ಮಾತು ಬೆಳೆಸುವುದಕ್ಕೆ ಬುದ್ದಿ ಓಡಲಿಲ್ಲ. ಅವನು ಮೌನವಾಗಿದ್ದನು.

`ಶಾಂತವೀರೇಶ್ವರನ ಸನ್ನಿಧಿಯಲ್ಲಿ ನಾವುಗಳೆಲ್ಲ ಕಲೆತಿದ್ದೇವೆ. ನಾವು ನಿಮಗೆಲ್ಲ ಒಂದು ಮಾತನ್ನು ಹೇಳುತ್ತೇವೆ; ನಡೆಸಿಕೊಡಬೇಕು ಕೋಪ ದ್ವೇಷ ಮೊದಲಾದುವು ಮನುಷ್ಯನಿಗೆ ಶ್ರೇಯಸ್ಕರಗಳಲ್ಲ. ವಿಶ್ವಕಲ್ಯಾಣವಾಗಬೇಕಾದರೆ ಪ್ರೇಮದಿಂದಲೇ ಸಾಧ್ಯ. ಒಂದು ವೇಳೆ ಇತರರು ನಮ್ಮ ಮೇಲೆ ಕೋಪ ಮಾಡಿಕೊಂಡರೂ ನಾವು ಶಾಂತರಾಗಿಯೇ ಇರಬೇಕು-ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ? ಅವರಿಗಾದಡೇನು? ತನಗಾದಡೇನು? ತನುವಿನ ಕೋಪ ತನ್ನ ಹಿರಿಯತನದ ಕೇಡು; ಮನದ ಕೋಪ ತನ್ನ ಅರಿವಿನ ಕೇಡು. ಮನೆಯೊಳಗಣ ಕಿಚ್ಚು ತನ್ನ ಮನೆ ಸುಟ್ಟಲ್ಲದೆ ನೆರೆಮನೆ ಬೇವುದೇ ಕೂಡಲ ಸಂಗಮದೇವಾ – ಎಂದು ಹಿರಿಯ ಅನುಭವಿಗಳೊಬ್ಬರು ಹೇಳಿದ್ದಾರೆ. ಹಿಂದೆ ನಿಮ್ಮ ನಿಮ್ಮ ವ್ಯವಹಾರಗಳಲ್ಲಿ ಕೆಲವು ವಿಷಾದ ಘಟನೆಗಳು ನಡೆದುಹೋದುವು; ಪರಸ್ಪರವಾಗಿ ಮನಸ್ತಾಪಗಳೂ ವೈರವೂ ಬೆಳೆದುಹೋದುವು. ಈಗ ಅವುಗಳನ್ನೆಲ್ಲ ಮರೆತುಬಿಟ್ಟು ನೀವು ನೀವು ಸ್ನೇಹದಿಂದಿರಬೇಕು. ನಮ್ಮ ಮುಖಂಡರಿಗೆ ನಾವು ಹೇಳುತ್ತೇವೆ: ಇನ್ಸ್ಪೆಕ್ಟರು ದೊಡ್ಡ ಮನುಷ್ಯರು. ದೇಶಾಭಿಮಾನದಿಂದ ಕೆಲಸ ಮಾಡುವ ದಕ್ಷರಾದ ಅಧಿಕಾರಿಗಳು ಅವರು ಜಂಬದಿಂದ ಇದ್ದುದು ಉಂಟು. ಆದರೆ ಇಲಾಖೆಯ ಗೌರವವನ್ನು ಎತ್ತಿ ಹಿಡಿಯಬೇಕೆಂದೂ ಇತರ ಇಲಾಖೆಯವರನ್ನು ಮೀರಿಸಿರಬೇಕೆಂದೂ ಹಾಗೆ ವರ್ತಿಸುತ್ತಿದ್ದರು. ಅದನ್ನೆಲ್ಲ ನೋಡಿ ಪೂರ್ವಾಶ್ರಮದಲ್ಲಿ ನಮಗೂ ಬಹಳ ಸಂತೋಷವಾಗುತ್ತಿತ್ತು; ಉಪಾಧ್ಯಾಯರೆಲ್ಲ ಸಂತೋಷ ಪಡುತಿದ್ದರು. ಅವರ ಅಧಿಕಾರ ಕಾಲದಲ್ಲಿ ವಿದ್ಯಾಭಿವೃದ್ಧಿ ಬಹಳ ಚೆನ್ನಾಗಿ ಆಯಿತು. ಉಪಾಧ್ಯಾಯರ ವಿಷಯದಲ್ಲಿ ಬಹಳ ಸಹಾನುಭೂತಿಯಿಂದ ಅವರು ನಡೆದುಕೊಳ್ಳುತ್ತಿದ್ದರು. ಅವರಲ್ಲಿ ಯಾವುದೊಂದು ಕೆಟ್ಟ ನಡತೆಯೂ ಇರಲಿಲ್ಲ. ಅವುಗಳನ್ನೆಲ್ಲ ನೀವು ಸಹ ಮೆಚ್ಚಿಕೊಂಡಿದ್ದೀರಿ. ಆದ್ದರಿಂದ ಈಗ ನೀವಿಬ್ಬರೂ ಅವರಲ್ಲಿ ದ್ವೇಷಮಾಡದೆ ಸ್ನೇಹವನ್ನಿಡಬೇಕು. ಅವರು ಜನಾರ್ದನಪುರವನ್ನು ಬಿಟ್ಟು ಹೊರಡುವಾಗ ಅವರನ್ನು ಗೌರವಿಸಿ ಕಳಿಸಿಕೊಡಬೇಕು, ಏನು ಹೇಳುತ್ತೀರಿ?’

`ಸ್ವಾಮಿಯವರ ಅಪ್ಪಣೆಯಂತೆ ನಾವು ನಡೆದು ಕೊಳ್ಳುತ್ತೇವೆ! ಶಾಂತವೀರೇಶ್ವರನ ಸಾಕ್ಷಿಯಾಗಿ ನಾವು ಅವರ ಮೇಲಿನ ದ್ವೇಷವನ್ನು ತ್ಯಜಿಸಿ ಸ್ನೇಹ ಹಸ್ತವನ್ನು ನೀಡುತ್ತೇವೆ!’ ಎಂದು ಮುಖಂಡರು ಹೇಳಿದರು.

ರಂಗಣ್ಣನು ಅಪ್ರತಿಭನಾದನು. ತನಗೆ ಶತ್ರುಗಳಾಗಿದ್ದ ಆ ಮೂವರು ಆ ಏಕಾಂತ ಗೃಹದಲ್ಲಿ ತನ್ನನ್ನು ಬರಮಾಡಿಕೊಂಡು ಏನು ಅಪಮಾನ ಮಾಡುವರೋ? ಏನು ಕೆಡುಕು ಮಾಡುವರೋ? ಎಂದು ಶಂಕಿಸುತ್ತಿದ್ದಾಗ ಅಲ್ಲಿ ಶಾಂತಿ ಸಂಧಾನಗಳು! ಕಲ್ಲೇಗೌಡ ಮತ್ತು ಕರಿಯಪ್ಪನವರ ಶಪಥ ಪೂರ್ವಕವಾದ ಸ್ನೇಹ ಹಸ್ತ! ಸ್ವಾಮಿಗಳು ಪ್ರಸನ್ನವದನರಾಗಿ `ಶ್ರೇಯೋಸ್ತು!’ ಎಂದು ಹರಸಿದರು. ಬಳಿಕ ರಂಗಣ್ಣನ ಕಡೆಗೆ ತಿರುಗಿಕೊಂಡು,

`ನೀವು ಸಹ ವೈರವನ್ನು ಬಿಟ್ಟಿದ್ದೀರಿ ಎಂದು ಭಾವಿಸುತ್ತೇವೆ. ನಮ್ಮ ಮುಖಂಡರು ಬಹಳ ನೀಚರೆಂದು ದುರಭಿಪ್ರಾಯವಿಟ್ಟು ಕೊಳ್ಳಬೇಡಿ. ಅವರೂ ನಾಡಿನ ಪುರೋಭಿವೃದ್ಧಿಗಾಗಿ ದುಡಿಯುವ ಜನ, ಈ ಮುಖಂಡರನ್ನೆಲ್ಲ ತಪ್ಪುದಾರಿಗೆ ಎಳದವರು ಸರಕಾರದ ಉನ್ನತಾಧಿಕಾರಿ ಗಳಲ್ಲಿ ಕೆಲವರು ಮತ್ತು ಹೊರಗಿನವರು. ಮದರಾಸಿನಲ್ಲಿ ಇಂಗ್ಲಿಷರು ಭೇದೋಪಾಯವನ್ನು ಹೂಡಿ ಕೋಮುವಾರು ವಿಷವನ್ನು ಜನಜೀವನದಲ್ಲಿ ಹರಿಸಿದರು. ನಮ್ಮ ಸೀಮೆಯಲ್ಲಿಯೂ ಅದು ತಲೆದೋರಿತು. ಡಾಕ್ಟರ್ ನಾಯರ್ ಗೀಯ‌ರ್ ಎಂದು ಹೇಳಿಕೊಳ್ಳುವ ಮುಖಂಡರ ಅಪರಾವತಾರಗಳು ಇಲ್ಲಿ ತಲೆಯೆತ್ತಿದರು. ಸಾಲದುದಕ್ಕೆ ನಮ್ಮ ದೊಡ್ಡ ಅಧಿಕಾರಿಗಳೂ ತಮ್ಮ ಕೈವಾಡ ತೋರಿಸಿದರು. ನಮ್ಮ ಮುಖಂಡರನ್ನು ಆಶ್ರಯಿಸಿ, ಸಲಹೆಗಳನ್ನು ಕೊಟ್ಟು, ಸರಕಾರದ ರಹಸ್ಯ ವರ್ತಮಾನಗಳನ್ನೆಲ್ಲ ತಿಳಿಸಿ, ಅಂಕಿ ಅಂಶಗಳನ್ನು ಒದಗಿಸಿ, ಸಭೆಗಳಲ್ಲಿ ದೊಡ್ಡ ಗೊಂದಲವೆಬ್ಬಿಸುವಂತೆ ಚಿತಾವಣೆ ಮಾಡಿದರು. ಹೀಗೆ ಸರಕಾರದ ಅಧಿಕಾರಿಗಳು ತಮ್ಮ ಕೈವಶವಾದುದನ್ನು ನೋಡಿ ಮುಖಂಡರೂ ಸ್ವಾರ್ಥ ಸಾಧಕರಾದರು; ಸರಕಾರವೆಂದರೆ ಗೌರವವೇ ಇಲ್ಲದಂತಾಯಿತು. ಆದ್ದರಿಂದ ನಮ್ಮ ನಾಡಿನ ಜನಜೀವನ ಕೆಳ ಮಟ್ಟಕ್ಕಿಳಿಯಿತು. ಮುಂದೆ ಕೋಮುವಾರು ವಿಷ ಕ್ರಮಕ್ರಮವಾಗಿ ಮಾಯವಾಗುತ್ತದೆ. ಎಲ್ಲರೂ ಅಣ್ಣ ತಮ್ಮಂದಿರಂತೆ ನಡೆದುಕೊಳ್ಳುವ ಕಾಲ ಬರುತ್ತದೆ. ಮಹಾತ್ಮಾ ಗಾಂಧಿಯವರ ತಪಸ್ಸಿನ ಫಲವಾಗಿ ಇಂಗ್ಲಿಷರು ಈ ದೇಶವನ್ನು ಬಿಟ್ಟು ಹೊರಟು ಹೋಗುವುದು ಖಂಡಿತ! ಇನ್ನೆಲ್ಲ ಹತ್ತು ಹದಿನೈದು ವರ್ಷಗಳು ಮಾತ್ರ ಕಾಯಬೇಕು. ಸ್ವಾತಂತ್ರಯುಗ ಕಾಲಿಟ್ಟಾಗ ದೇಶಾಬ್ಯುದಯ ಕಾರ್ಯಗಳಿಗೆ ಎಲ್ಲರೂ ಭುಜಕ್ಕೆ ಭುಜ ಕೊಟ್ಟು ನಿಲ್ಲಬೇಕಾಗುತ್ತದೆ. ಆದ್ದರಿಂದ ನೀವು ಮನಸ್ಸಿನಲ್ಲಿ ವಿಷಾದಪಡದೆ ಈ ಮುಖಂಡರ ಸ್ನೇಹ ಹಸ್ತವನ್ನು ಹಿಡಿಯಬೇಕು ಎಂಬುದು ನಮ್ಮ ಕೋರಿಕೆ. ಏನು ಹೇಳುತ್ತೀರಿ?’

`ಸ್ವಾಮಿಯವರ ಅಪ್ಪಣೆ!’ ಎನ್ನುತ್ತಾ ರಂಗಣ್ಣನು ಮುಖಂಡರ ಸಮೀಪಕ್ಕೆ ಹೋಗಿ ಅವರ ಕೈ ಕುಲುಕಿ, ‘ಕರಿಯಪ್ಪನವರೇ! ಕಲ್ಲೇ ಗೌಡರೇ! ನಾನು ನಿಮ್ಮಗಳ ವಿಚಾರದಲ್ಲಿ ಏನು ಅಪರಾಧ ನಡೆಸಿದ್ದರೂ ನೀವು ಕ್ಷಮಿಸಬೇಕು’ ಎಂದು ಹೇಳಿದನು. ರಂಗಣ್ಣನ ಕಣ್ಣುಗಳು ಹನಿಗೂಡಿದುವು.

`ತಾವೇನೂ ಅಂತಹ ಅಪರಾಧಗಳನ್ನು ನಡೆಸಿಲ್ಲ. ಸ್ವಾರ್ಥಕ್ಕಾಗಿ ತಾವೇನೂ ಮಾಡಲಿಲ್ಲ. ಏನಿದ್ದರೂ ತಪ್ಪುಗಳು ನಮ್ಮ ಕಡೆಯವು’ ಎಂದು ಕಲ್ಲೇಗೌಡರು ಹೇಳಿದರು.

`ಸಾರ್ವಜನಿಕ ಜೀವನದಲ್ಲಿ ನಾವು ನಿಸ್ಪೃಹರಾಗಿರಬೇಕು, ಪ್ರಾಮಾಣಿಕರಾಗಿರಬೇಕು ಎಂಬುದನ್ನು ನಮಗೆ ಕಲಿಸಿಕೊಟ್ಟಿರಿ. ನಾವು ನಿಮಗೆ ಕೃತಜ್ಞರಾಗಿದ್ದೇವೆ!’ ಎಂದು ಕರಿಯಪ್ಪನವರು ಹೇಳಿದರು.

ಸ್ವಾಮಿಗಳು, ‘ಶ್ರೇಯೋಸ್ತು! ಶ್ರೇಯೋಸ್ತು!’ ಎಂದು ಹರಸಿ ಪಾರುಪತ್ಯಗಾರನನ್ನು ಕರೆದರು. ಆತ ಬಂದಮೇಲೆ, ‘ಹಾಲೂ ಹಣ್ಣ ತೆಗೆದುಕೊಂಡು ಬಾ’ ಎಂದು ಅಪ್ಪಣೆ ಮಾಡಿದರು. ಆತ ಹೊರಟು ಹೋದಮೇಲೆ ‘ಈ ಶಾಂತಿ ಸಂಧಾನಕ್ಕಾಗಿಯೇ ನಿಮ್ಮನ್ನು ಈ ಏಕಾಂತ ಸ್ಥಳಕ್ಕೆ ನಾವು ಕರೆಸಿಕೊಂಡೆವು. ನಾವು ಈ ಆಶ್ರಮ ಸ್ವೀಕಾರ ಮಾಡಿದ ಪ್ರಾರಂಭದಲ್ಲಿ ಹೀಗೆ ಶಾಂತಿ ಸಂತೋಷಗಳು ನೆಲಸಿದ್ದು ದೈವಾನುಗ್ರಹ. ಈಗ ನಮ್ಮ ದೇಶ ಒ೦ದು ಪರ್ವ ಕಾಲದಲ್ಲಿದೆ. ನಾವು ಸುಸಂಘಟಿತರಾಗಿ ದ್ವೇಷಾಸೂಯೆಗಳಿಲ್ಲದೆ ಇರಬೇಕು. ಮುಂದೆ ಪ್ರಜಾಧಿಕಾರ ಆಚರಣೆಗೆ ಬಂದಾಗ ದೇಶಾಭ್ಯುದಯವೆನ್ನುವುದು ಮುಖಂಡರನ್ನು ಆಶ್ರಯಿಸಿ ಕೊಂಡಿರುತ್ತದೆ. ಆದ್ದರಿ೦ದ ಮುಖಂಡರು ವಿದ್ಯಾವಂತರಾಗಿ ಲೌಕಿಕ ವಿದ್ಯೆಯಲ್ಲಿ ಸಮರ್ಥರಾಗಿ ನೀತಿಯಲ್ಲಿ ಸನ್ಮಾರ್ಗಿಗಳಾಗಿ ಆಡಳಿತದಲ್ಲಿ ದಕ್ಷರಾಗಿ, ಪ್ರಜೆಗಳಿಗೆ ಆದರ್ಶ ಪ್ರಾಯರಾಗಿರಬೇಕು. ಸರಕಾರದ ಅಧಿಕಾರಿಗಳನ್ನು ಗೌರವದಿಂದ ಕಂಡು, ಯೋಗ್ಯತೆಗೆ ಮನ್ನಣೆ ಕೊಡುತ್ತ, ಸ್ನೇಹದಿಂದ ಒಲಿಸಿಕೊಂಡು ಸುಸೂತ್ರವಾಗಿ ಕೆಲಸಗಳನ್ನು ನಡೆಸಬೇಕು? ಎಂದು ಉಪದೇಶ ಮಾಡಿದರು. ಪಾರುಪತ್ಯಗಾರನು ಹಾಲೂ ಹಣ್ಣು ಸಕ್ಕರೆಗಳನ್ನು ತಂದಿಟ್ಟು ಹೊರಟು ಹೋದನು. ಸ್ವಾಮಿಗಳ ಅಪ್ಪಣೆ ಯಂತೆ ಮೂರು ಲೋಟಗಳಲ್ಲಿ ಹಾಲನ್ನು ಕರಿಯಪ್ಪನವರು ಸುರಿದರು; ಬಾಳೆಯ ಹಣ್ಣುಗಳ ಸಿಪ್ಪೆಗಳನ್ನು ಕಲ್ಲೇಗೌಡರು ಸುಲಿದರು.

‘ನೀವು ಮೂವರೂ ಈ ಫಲಾಹಾರ ಸ್ವೀಕಾರ ಮಾಡಿರಿ’ ಎಂದು ಸ್ವಾಮಿಗಳು ಅಪ್ಪಣೆ ಮಾಡಿದರು. ಅದರಂತೆ ಆ ಮೂವರೂ ತೆಗೆದು ಕೊಂಡರು. ತರುವಾಯ ಸ್ವಾಮಿಗಳೆದ್ದು, ಕರಿಯಪ್ಪನವರೇ! ನೀವೂ ಕಲ್ಲೇಗೌಡರೂ ಇನ್ಸ್ಪೆಕ್ಟರಿಗೆ ಈ ಕ್ಷೇತ್ರವನ್ನೆಲ್ಲ ತೋರಿಸಿಕೊಂಡು ಬನ್ನಿ, ಯೋಗೀಶ್ವರರ ಗುಹೆಯನ್ನೂ ತೋರಿಸಿ ಸ್ಥಳ ಪುರಾಣವನ್ನು ಪರಿಚಯ ಮಾಡಿಕೊಡಿ. ಸಾಯಂಕಾಲ ನಾಲ್ಕು ಗಂಟೆಗೆ ಸಭೆಯನ್ನು ಸೇರಿಸಿ. ನಾವು ಆಗ ಬರುತ್ತೇವೆ. ಬಂದಿರುವ ಅತಿಥಿಗಳಿಗೆಲ್ಲ ಊಟ ಉಪಚಾರಗಳು ತೃಪ್ತಿಕರವಾಗಿ ನಡೆದ ಸಮಾಚಾರವನ್ನು ನಮಗೆ ತಿಳಿಸ ಬೇಕು’ ಎಂದು ಹೇಳಿದರು.

ರಂಗಣ್ಣನು ಉಪಾಯವಾಗಿ ಪೆನ್ಷನ್ ಕಾಗದಗಳ ಪ್ರಸ್ತಾಪ ಮಾಡಿ ಅವುಗಳನ್ನು ಮುಂದಿಟ್ಟು, ‘ಗುಮಾಸ್ತೆ ಶಂಕರಪ್ಪ ಬಂದು ಕಾಣುತ್ತಾನೆ. ತಾವು ದೊಡ್ಡ ಮನಸ್ಸು ಮಾಡಿ ಈ ಕಾಗದಗಳಿಗೆ ರುಜು ಮೊದಲಾದುವನ್ನು ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ಇವೆಲ್ಲ ತಮ್ಮಗಾಗಿ ಅಲ್ಲ. ಸಂಸಾರ ಪೋಷಣೆಗೆ ಒದಗಿದಷ್ಟು ಹಣ ಒದಗಲಿ’ ಎಂದು ಹೇಳಿದನು. ಸ್ವಾಮಿಗಳು, ‘ನೀವು ಬಹಳ ಉಪಾಯಗಾರರು! ನಾನು ನಿಮಗೆ ಸೋತೆ’ ಎಂದು ನಕ್ಕರು ಬಳಿಕ ರಂಗಣ್ಣ ಸ್ವಾಮಿಗಳಿಗೆ ನಮಸ್ಕಾರ ಮಾಡಿ ಹೊರಕ್ಕೆ ಬಂದನು. ಕಲ್ಲೇಗೌಡ ಮತ್ತು ಕರಿಯಪ್ಪ ಸ್ವಾಮಿಗಳಿಗೆ ಅಡ್ಡ ಬಿದ್ದು, ಎದ್ದು, ಕೈ ಮುಗಿದು ಹೊರಕ್ಕೆ ಬಂದರು. ಆ ಕ್ಷೇತ್ರ ಪರಿಚಯವನ್ನು ಮಾಡಿ ಕೊಡುತ್ತ ಯೋಗೀಶ್ವರರ ಗುಹೆ ಮೊದಲಾದುವನ್ನು ರಂಗಣ್ಣನಿಗೆ ತೋರಿಸುತ್ತ ಆ ಮುಖಂಡರು ಜೊತೆಯಲ್ಲಿ ಹೋಗುತ್ತಿದ್ದುದನ್ನು ಶಂಕರಪ್ಪನೂ, ಪೊಲೀಸ್ ಇನ್ಸ್ಪೆಕ್ಟರೂ, ಅಮಲ್ದಾರರೂ ನೋಡಿ ಬೆರಗಾಗಿ ಹೋದರು! ಅವರಿಗೆ ಆ ಮುಖಂಡರು ಅಲ್ಲಿಗೆ ಬಂದಿರುವರೆಂಬುದೇ ತಿಳಿದಿರಲಿಲ್ಲ! ಆ ಮುಖಂಡರು ರಂಗಣ್ಣನಿಗೆ ಪರಮವೈರಿಗಳೆಂಬುದನ್ನು ಅವರೆಲ್ಲ ತಿಳಿದವರಾಗಿದ್ದರು. ಇದೇನು! ಆ ಕ್ಷೇತ್ರ ಮಾಹಾತ್ಮಯೋ! ನೂತನ ಸ್ವಾಮಿಗಳ ತಪಃ ಫಲವೋ! ಹಿಂದೆ ಋಷ್ಯಾಶ್ರಮಗಳಲ್ಲಿ ಕಾಡುಮೃಗಗಳು ಪರಸ್ಪರ ವೈರವನ್ನು ಬಿಟ್ಟರುತಿದ್ದುವೆಂದು ಕೇಳಿದ್ದೆವು. ಈಗ ಪ್ರತ್ಯಕ್ಷವಾಗಿ ಇಲ್ಲಿ ದುರ್ಭರವೈರ ಶಾಂತವಾಗಿ ನಿಕಟ ಸ್ನೇಹ ಕಾಣುತ್ತಿದೆಯಲ್ಲ! ಎಂದು ಆಶ್ಚರ್ಯಚಕಿತರಾದರು.

ಆ ದಿನದ ಔತಣದ ಏರ್ಪಾಟು ಚೆನ್ನಾಗಿತ್ತು. ಚಿರೋಟಿ, ಕೀರು, ಬೋ೦ಡ, ವಾಂಗೀಭಾತು, ಕೇಸರಿಭಾತು, ಆಂಬೊಡೆ, ಹಪ್ಪಳ, ಬೂದು ಗುಂಬಳಕಾಯಿ ಮಜ್ಜಿಗೆಹುಳಿ, ತೊವ್ವೆ, ಕೂಟು, ಪಲ್ಯಗಳು, ಕೋಸುಂಬರಿಗಳು ಇತ್ಯಾದಿ. ದೊಡ್ಡ ದೊಡ್ಡ ಮಣೆಗಳ ಮುಂದೆ ದೊಡ್ಡ ದೊಡ್ಡ ಬಾಳೆಯ ಅಗ್ರದೆಲೆಗಳನ್ನು ಹಾಕಿ ಅಲಂಕಾರ ಪಂಕ್ತಿಗೆ ಬಡಿಸಿದಂತೆ ಬಡಿಸಿದ್ದುದನ್ನು ನೋಡಿ ರಂಗಣ್ಣನು ವಿಸ್ಮಿತನಾದನು. ಊಟಮಾಡುತಿದ್ದಾಗ ರಂಗಣ್ಣನ ಪಕ್ಕದಲ್ಲಿ ಕುಳಿತಿದ್ದ ಅಮಲ್ದಾರರು,

‘ಏನು ರಂಗಣ್ಣನವರೇ! ರಾಜಿ ಆದ ಹಾಗೆ ಕಾಣುತ್ತಿದೆಯಲ್ಲ! ಏನು ಸಮಾಚಾರ?’ ಎಂದು ಕೇಳಿದರು.

ರಂಗಣ್ಣನು ಆ ಬೆಳಗ್ಗೆ ನಡೆದ ಪ್ರಸಂಗವನ್ನು ಚಿಂತನೆ ಮಾಡುತ್ತ ಮಾಡುತ್ತ ಗಂಭೀರಮುದ್ರೆಯನ್ನು ತಾಳಿದ್ದನು. ಹಿಂದೆ ಅವನಲ್ಲಿ ನೆಲಸಿದ್ದ ಅಧಿಕಾರ ರಭಸ ಮನೋವೃತ್ತಿ ಮತ್ತು ಜಂಬ ಕಡಮೆಯಾಗಿದ್ದುವು. ಅವುಗಳ ಪರಿಣಾಮವಾಗಿ,

`ನಾವೆಲ್ಲ ಅತಿಥಿಗಳಾಗಿ ಬಂದಿಲ್ಲವೇ! ಅತಿಥಿಗಳಿಗೆ ಉಪಚಾರ ಹಿಂದೂ ಧರ್ಮದಲ್ಲಿ ಮುಖ್ಯ. ಇದು ಧರ್ಮ ಪೀಠ! ಆದ್ದರಿಂದ ರಾಜಿಯಾಗುವುದು ಸಹಜವಾಗಿದೆಯಲ್ಲವೇ?’ ಎಂದು ಗಂಭೀರವಾಗಿ ಉತ್ತರ ಕೊಟ್ಟನು.

‘ನಿಮ್ಮನ್ನೂ ಅವರನ್ನೂ ಒಟ್ಟಿಗೆ ಕಂಡಾಗ ನಮಗೆಲ್ಲ ಆಶ್ಚರ್ಯವಾಯಿತು!’

`ಹೀಗೆಯೇ! ನಮ್ಮ ಜೀವನಲ್ಲಿ ಅನೇಕ ಆಶ್ಚರ್ಯಗಳು ಕಾಣುತಿರುತ್ತವೆ. ಹೊಸ ಹೊಸ ಅನುಭವಗಳು ಬಂದಹಾಗೆಲ್ಲ ಹೊಸ ಹೊಸ ಸನ್ನಿವೇಶಗಳೊಡನೆ ರಾಜಿಮಾಡಿಕೊಳ್ಳುತ್ತಲೇ ಲೋಕ ಮುಂದುವರಿಯಬೇಕು!’

ಅಮಲ್ದಾರರಿಗೆ ಆ ಮಾತುಗಳಿಂದ ಏನೊಂದೂ ಅಭಿಪ್ರಾಯವಾಗಲಿಲ್ಲ. ಇನ್ನು ಹೆಚ್ಚಾಗಿ ಪ್ರಶ್ನಿಸುತ್ತ ಹೋದರೆ ತಮ್ಮ ಮೌಢ್ಯವೆಲ್ಲಿ ಹೊರಬೀಳುವುದೋ ಎಂದು ಸುಮ್ಮನಾದರು. ಭೋಜನ ಸಮಾರಂಭ ಮುಗಿಯಿತು. ತಾಂಬೂಲಚರ್ವಣಾದಿ ಪ್ರಕರಣಗಳು ಮುಗಿದುವು. ವಿಶ್ರಾಂತಿಗಾಗಿ ತಂತಮ್ಮ ಬಿಡಾರಗಳಿಗೆ ಎಲ್ಲರೂ ಹೊರಟರು.

ಸಾಯಂಕಾಲ ನಾಲ್ಕು ಗಂಟೆಗೆ ಮೊದಲನೆಯ ತೊಟ್ಟಿಯಲ್ಲಿ ಸಭೆ ಸೇರಿತು, ತಾಲ್ಲೂಕಿನ ಮುಖ್ಯಾಧಿಕಾರಿಗಳೂ ಆ ಕ್ಷೇತ್ರವಾಸಿಗಳೂ, ಇತರರೂ ಆ ಸಭೆಯಲ್ಲಿ ನೆರೆದಿದ್ದರು. ಸ್ವಾಮಿಗಳ ಬಲಗಡೆ ರಂಗಣ್ಣ ಕುಳಿತಿದ್ದನು; ಎಡಗಡೆ ಅಮಲ್ದಾರರು ಕುಳಿತಿದ್ದರು. ಮ್ಯಾಜಿಸ್ಟ್ರೇಟರು ರಂಗಣ್ಣನ ಪಕ್ಕದಲ್ಲಿದ್ದರು; ಮುನಸೀಫರು ಅಮಲ್ದಾರರ ಪಕ್ಕದಲ್ಲಿದ್ದರು. ಭಗವದ್ಗೀತೆಯಿಂದ ಕೆಲವು ಶ್ಲೋಕಗಳನ್ನು ಮಠದ ಶಿಷ್ಯರು ಹೇಳಿದ ನಂತರ, ಕರಿಯಪ್ಪನವರು ಎದ್ದು ನಿಂತು ಅತಿಥಿಗಳಿಗೆ ಸ್ವಾಗತವನ್ನು ನೀಡಿ, ಇನ್‌ಸ್ಪೆಕ್ಟರವರಿಗೆ ವರ್ಗವಾಗಿರುವುದರಿಂದ ಅವರನ್ನು ಗೌರವಿಸುವುದಕ್ಕಾಗಿ ಆ ದಿನ ಸಭೆಯನ್ನು ಸೇರಿಸಿರುವುದಾಗಿಯೂ ಮುಖ್ಯ ಅತಿಥಿಗಳಾದ ಇನ್ಸ್ಪೆಕ್ಟರು ಸಲ್ಲಿಸಿರುವ ಸೇವೆಯನ್ನು ಪ್ರಶಂಸೆ ಮಾಡುವುದು ತಮ್ಮ ಕರ್ತವ್ಯವಾಗಿರುವುದೆಂದೂ ಹೇಳಿದರು. ಬಳಿಕ ರಂಗಣ್ಣನ ಗುಣ ಕಥನವಾಯಿತು. ಕರಿಯಪ್ಪ ನವರು ಮಾತನಾಡಿದ ನಂತರ ಅಮಲ್ದಾರರು ಮೊದಲಾದವರು ಮಾತನಾಡಬೇಕೆಂದು ಸ್ವಾಮಿಗಳು ತಿಳಿಸಿದ್ದರಿಂದ ಆಯಾ ಅಧಿಕಾರಿಗಳೂ ಯಥೋಚಿತವಾಗಿ ರಂಗಣ್ಣನನ್ನು ಪ್ರಶಂಸೆಮಾಡಿ ಮಾತನಾಡಿದರು. ಆಮೇಲೆ ಮುಖ್ಯ ಅತಿಥಿಯು ಉತ್ತರರೂಪವಾಗಿ ಭಾಷಣ ಮಾಡಬೇಕಾಯಿತು. ರಂಗಣ್ಣನ ಮನಸ್ಸು ಅಲ್ಲಕಲ್ಲೋಲವಾಗಿದ್ದುದರಿಂದ ಅವನಿಗೆ ಹರ್ಷವೇನೂ ಇರಲಿಲ್ಲ. ಅವನು ಎದ್ದು ನಿಂತು ಕೊಂಡು, `ಪೂಜ್ಯ ಸ್ವಾಮಿಯವರೇ! ಮಹನೀಯರೇ! ಈ ದಿನ ತಾವುಗಳೆಲ್ಲ ಇಲ್ಲಿ ಸೇರಿ ನನಗೆ ಗೌರವವನ್ನು ತೋರಿಸಿದ್ದೀರಿ; ನನ್ನ ಗುಣಕಥನ ಮಾಡಿದ್ದೀರಿ. ಆದರೆ ಅವುಗಳಿಗೆ ನಾನು ಅರ್ಹನಲ್ಲ ಎಂದು ಹೇಳಬೇಕಾಗಿದೆ. ಈ ರೇಂಜಿನಲ್ಲಿ ಸ್ವಲ್ಪ ಸೇವೆ ಸಲ್ಲಿಸಿದ್ದೇನೆ. ಏನಾದರೂ ಒಳ್ಳೆಯ ಫಲಗಳು ದೊರೆತಿದ್ದರೆ, ಉಪಾಧ್ಯಾಯರ ಶ್ರದ್ಧಾಸಕ್ತಿಗಳೂ, ಜನರ ಬೆಂಬಲ ಪ್ರೊತ್ಸಾಹಗಳೂ ಅದಕ್ಕೆ ಕಾರಣಗಳು. ನನ್ನ ಅಧಿಕಾರಾವಧಿಯಲ್ಲಿ ನಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆಂದು ಬಹಿರಂಗವಾಗಿ ಇಲ್ಲಿ ಒಪ್ಪಿ ಕೊಳ್ಳುತ್ತೇನೆ. ಆದರೆ ಉಪಾಧ್ಯಾಯರೂ, ಮಹಾಜನಗಳೂ ವಿಶ್ವಾಸದಿಂದಲೇ ನನ್ನನ್ನು ಕಾಣುತ್ತ ಬಂದರು. ಅವರಿಗೆಲ್ಲ ನಾನು ಬಹಳ ಕೃತಜ್ಞನಾಗಿದ್ದೇನೆ. ಮುಖ್ಯವಾಗಿ ಹೇಳಬೇಕಾದ ಮಾತು ಒಂದಿದೆ. ನಮ್ಮ ದೇಶದಲ್ಲಿ ವಿದ್ಯಾಭ್ಯಾಸ ತಕ್ಕಷ್ಟು ಮುಂದುವರಿದಿಲ್ಲ ; ಸೇಕಡ ಹತ್ತರಷ್ಟು ಕೂಡ ಓದು ಬರೆಹ ಬಲ್ಲವರಿಲ್ಲ. ಈ ದುಃಸ್ಥಿತಿ ಆದಷ್ಟು ಬೇಗ ತೊಲಗಬೇಕು. ಸರಕಾರದವರು ಧಾರಾಳವಾಗಿ ಹಣವನ್ನು ಖರ್ಚು ಮಾಡಬೇಕು; ಮತ್ತು ಆ ಹಣ ಪೋಲಾಗದಂತೆ ದಕ್ಷರಾದ ಉಪಾಧ್ಯಾಯರನ್ನೂ ದಕ್ಷರಾದ ಅಧಿಕಾರಿಗಳನ್ನೂ ನೇಮಿಸಿ ಎಚ್ಚರಿಕೆಯ ಕ್ರಮಗಳನ್ನು ಕೈ ಕೊಳ್ಳಬೇಕು. ಜನಗಳೂ ಮುಖಂಡರೂ ಈ ಮಹತ್ಪ್ರಯತ್ನದಲ್ಲಿ ಸಹಾಯವನ್ನೂ ಸಹಕಾರವನ್ನೂ ನೀಡ ಬೇಕು’ ಎಂದು ಮುಂತಾಗಿ ಹೇಳಿ, ಸ್ವಾಮಿಯವರು ಮಾಡಿದ ಆತಿಥ್ಯವನ್ನು ಹೊಗಳಿ, ಎಲ್ಲರಿಗೂ ಕೃತಜ್ಞತಾ ಪೂರ್ವಕವಾದ ವಂದನೆಗಳನ್ನು ಸಮರ್ಪಣೆ ಮಾಡಿದನು.

ಸ್ವಾಮಿಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ತಮ್ಮ ಪೂರ್ವಾಶ್ರಮದ ವಿಚಾರವನ್ನೇನೂ ಪ್ರಸ್ತಾಪ ಮಾಡಲಿಲ್ಲ. ಚತುರ್ವಿಧ ಪುರುಷಾರ್ಥಗಳನ್ನು ವಿವರಿಸಿ, ಆ ಪುರುಷಾರ್ಥಗಳಲ್ಲಿ ಧರ್ಮವನ್ನು ಮೊದಲಿನಲ್ಲಿ ಹೇಳಿರುವುದರ ಕಾರಣವನ್ನು ತಿಳಿಸಿದರು. ‘ಧರ್ಮದ ತಳಹದಿಯ ಮೇಲೆ ಲೋಕ ನಿಂತಿದೆ. ಧರ್ಮದ ಸ್ವರೂಪವನ್ನು ಎಲ್ಲರೂ ತಿಳಿದು ಕೊಂಡು ಸದ್ಧರ್ಮಿಗಳಾಗಬೇಕು; ಧರ್ಮಾರ್ಜನೆಗಾಗಿ ಅರ್ಥಾರ್ಜನೆ; ಅರ್ಥದ ಮುಂದೆ ಕಾಮವನ್ನು ಹೇಳಿರುವುದಾದರೂ ಮುಂದೆ ಮೋಕ್ಷವನ್ನು ಹೇಳಿರುವುದರಿಂದ ಆ ಕಾಮ ಮೋಕ್ಷಪರವಾಗಿರಬೇಕೆಂದು ಎಲ್ಲರೂ ಗ್ರಹಿಸಬೇಕು’ ಎಂದು ಮುಂತಾಗಿ ಅಧ್ಯಾತ್ಮ ವಿಚಾರಗಳನ್ನು ಕುರಿತು
ಭಾಷಣ ಮಾಡಿದರು. ಬಳಿಕ ರಂಗಣ್ಣನ ವಿದ್ವತ್ತನ್ನೂ ಅವನ ಸೇವಾ ಬುದ್ದಿಯನ್ನೂ ಪ್ರಶಂಸೆಮಾಡಿ ಈಗ ವರ್ಗವಾಗಿ ಬೆಂಗಳೂರಿಗೆ ಹೋಗುವುದಾದರೂ ಆಗಾಗ ಜನಾರ್ದನಪುರದ ಪ್ರಾಂತಕ್ಕೆ ಬರುತ್ತಿರ ಬೇಕೆಂದೂ, ಮಠಕ್ಕೆ ಭೇಟಿ ಕೊಡುತ್ತಿರಬೇಕೆಂದೂ ಹೇಳಿದರು, ಕಲ್ಲೇ ಗೌಡರು ರಂಗಣ್ಣನಿಗೆ ಹೂವಿನ ಹಾರವನ್ನು ಹಾಕಿ ಹಣ್ಣುಗಳನ್ನು ಒಪ್ಪಿಸಿ ಮುಕ್ತಾಯ ಭಾಷಣ ಮಾಡಿದರು. ‘ರಂಗಣ್ಣನವರು ಶೀಘ್ರದಲ್ಲಿಯೇ ದೊಡ್ಡ ಹುದ್ದೆಗೇರಿ ನಮ್ಮ ಪ್ರಾಂತಕ್ಕೆ ಜಿಲ್ಲಾಧಿಕಾರಿಗಳಾಗಿ ಬರಬೇಕೆಂಬುದೇ ನಮ್ಮೆಲ್ಲರ ಹಾರೈಕೆ’ ಎಂದು ಹೇಳಿದಾಗ ಸಭೆಯಲ್ಲಿ ಕರತಾಡನ ಗಳಾದುವು. ಹೀಗೆ ಸಭೆ ಮುಕ್ತಾಯವಾಯಿತು. ಅಮಲ್ದಾರರು ಮೊದಲಾದವರು ತಂತಮ್ಮ ಗಾಡಿಗಳಲ್ಲಿ ಹಿಂದಿರುಗಿದರು. ರಂಗಣ್ಣನು ಮಠದ ಗಾಡಿಯಲ್ಲಿ ಜನಾರ್ದನ ಪುರಕ್ಕೆ ಬಂದು ಸೇರಿದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲಾಲಾಳ ಮನದಾಳ (ಕಾಬೂಲಿವಾಲಾ ನೆನಪಿಸಿ)
Next post ಬಂಡೆದ್ದ ಶಕ್ತಿಗಳು ಸುತ್ತ ಮುತ್ತಿದ ನನ್ನ

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…