ಲಜ್ಜೆಗೇಡಲ್ಲಿ ಬರಿದೆ ಸತ್ವವನು ತೇಯುವುದು
ರತಿಗೀಳು; ಅತಿಕೀಳು ಕ್ರಿಯೆಗೆ ಹಾಯುವವರೆಗೆ,
ಘಾತಕ ಮೃಗೀಯ ವಂಚಕ ಹೇಯ ಎನಿಸುವುದು,
ಸುಖಿಸಿ ಮುಗಿಯಿತೊ ‘ಇಸ್ಸಿ’ ಎನಿಸುವುದು ಅದೆ ಗಳಿಗೆ ;
ಹುಚ್ಚಿನಲಿ ಬೆನ್ನಟ್ಟಿ ಓಡಿ ಹಾರಿದ ಹೊತ್ತೆ
ಪೆಚ್ಚಾಗಿ ಮತ್ತೆ ಆವೇಶದಲಿ ಹಳಿಯುವುದು-
ಹಿಡಿವಾಗ ಹೇಗೊ ಮುಡಿವಾಗಲೂ ಹಾಗೆಯೇ
ಪಡುವವನ ಹುಚ್ಚಿಗೆಬ್ಬಿಸುವ ಗಾಳ ಇದೆಂದು.
ಪಡೆವಾಗ, ಪಡೆದ ನಂತರ, ಪಡೆವ ಕಾರ್‍ಯದಲಿ
ಅತಿರೇಕ, ಪಡುವಾಗ ಹನಿವ ಪರಮಾನಂದ,
ಪಟ್ಟಾದಮೇಲೆ ಶುರು ಗೋಳು. ಕ್ರಿಯೆಗೂ ಮೊದಲು
ಎಂಥ ಸಂಭ್ರಮ, ಕಡೆಗೆ ಕಳೆದ ಸವಿಸ್ವಪ್ನ. ಇದು
ಲೋಕವೇ ಬಲ್ಲ ಕಥೆ. ಯಾರೂ ತಿಳಿಯರು ಮಾತ್ರ
ನರಕಕೊಯ್ಯುವ ನಾಕದಿಂದ ಕಾಯುವ ಸೂತ್ರ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 129
The expense of spirit in a waste of shame