ಮಾತೃವಚನ
ನನ್ನ ದೊರೆಯೆ ಸವಿಗಾರ ಸ್ವಾಮಿ ಈ ನಿನ್ನ ಕೆಲಸವನ್ನೇ
ಗೊನೆಗೊಳಿಸಲೆಂದು ಜಡಜಲಧಿತಳಕೆ ಮುಟ್ಟಿದೆನು ಮೂಲವನ್ನೇ
ಸುಳ್ಳನ್ನು ಮತ್ತೆ ಅಜ್ಞಾನನರಕ ಬೆರಳೊತ್ತಿ ಮುಟ್ಟಿಬಿಟ್ಟೆ
ಗಾಢಾಂಧಕಾರ ವಿಸ್ಮೃತಿಯ ಪರಮಗುಹೆಯಲ್ಲಿ ಪಾದವಿಟ್ಟೆ
ನಿನ್ನ ನೆನೆವು ನನ್ನೆದೆಯೊಳಿತ್ತದರ ಕರೆಯೆ ಹಾರಿ ಸಾರಿ
ನಿನ್ನತ್ತ ಬಂತು; ಹಾ ದೊರೆಯೆ ಎತ್ತೆತ್ತು ನಿನ್ನ ವೈರಿ
ಜಯಮತ್ತರಂತೆ ತೋರುತ್ತಲಿಹರು ಜಗದೊಡೆಯನೀಗ ಸತ್ಯ
ನೀನಿರದ ಬಾಳು ಅದು ಒಂದು ಸಾವು ಅದು ನರಕ ನಿತ್ಯನಿತ್ಯ
ಆಸೆಯನ್ನು ತಳ್ಳಿ ಸಂಶಯವೆ ಪಟ್ಟವನ್ನು ಕಟ್ಟಿಕೊಂಡು ಮತ್ತೆ
ಹುಸಿಬಂಡು ಪುಂಡು ಶರಣತೆಯ ನೂಕಿ, ನಂಬುಗೆಯ ತೀರಹತ್ತಿ
ಉಪಕಾರ ಸ್ಮೃತಿಯು ಹುಟ್ಟಿಲ್ಲವಿನ್ನು ಕಗ್ಗುರುಡು ಕಾಮ
ಕೊಲೆಗಡಕ ಬುದ್ದಿ ಬರುತಿಹುದು ನೋಡ ದುರ್ಬಲದ ತಪ್ಪಹೊಂದಿ
ಆ ನಿನ್ನ ಮಧುರತಮ ಪ್ರೇಮಧರ್ಮ ಬಾಯ್ಗಟ್ಟಿ ಉಸಿರುಗಟ್ಟಿ
ಉಮ್ಮಳಿಸುತಿಹುದು ಹಾ ದೊರೆಯೆ ನೀನೆ ಆಪಗೆಯ ಪಟ್ಟಗಟ್ಟಿ;
ಬಿಡುವಿಯೇನು? ಆ ಅನೃತವನ್ನು ಆ ವಿಕೃತಿಯನ್ನು ಮತ್ತೆ,
ಸಂತಾಪ ತಾಪ ಸಂತತಿಯನೆಲ್ಲ ಆ ಮಹಾವಿಜಯದತ್ತೆ.
ಹಾ ದೊರೆಯೆ ಆಜ್ಞೆಯನು ಕೊಟ್ಟು ನೋಡು ಕಟ್ಟಿಟ್ಟ ವಿಜಯವಹುದು
ನಾ ಬಲ್ಲೆ, ನಮಗೆ ಯೋಗ್ಯತೆಯು ಇಲ್ಲ ಜಗ ಸಿದ್ಧವಿಲ್ಲ; ಅಹುದು
ಕಡುಕಟ್ಟಿ ನಂಬುಗೆಯ ತುಟ್ಟತುದಿಯ ಮುಟ್ಟೊಮ್ಮೆ ಕೂಗಿಕೊಳುವೆ,
ದೊರೆ ಹೈ ಹಸಾದ ಜಗ ರಕ್ಷಿಸಯ್ಯ ಅದು ನಿನ್ನ ಅರುಳಿನಳವೆ.
ಇದು ಏನೆ ಇರಲಿ, ಇದು ಹೇಗು ಇರಲಿ, ತೋರಯ್ಯ ಕರುಣೆದೋರು.
ಉದ್ದಾರವಹುದು ಜಗವಮೃತವಹುದು ಭವಜಲಧಿ ದಾಟಿ ಪಾರು.
ಪಾತಾಳದಿಂದ ಎದೆಯಾಳದಿಂದ ಜೀವಾಳದಿಂದ ಒಂದು
ನಿನ್ನತ್ತ ನುಗ್ಗಿ ಹೊರಹೊಮ್ಮಿ ಹಿಗ್ಗಿ ಪ್ರಾರ್ಥನೆಯು ತಾನೆ ಬಂದು
ನಿನ್ನನ್ನು ಕಂಡೆ ಕಡುಕಾಂತಿಯಲ್ಲಿ ನೀನಾಗ ನನಗೆ ಅಂದೆ
ಎದೆಗೆಡಿಸಿಕೊಳ್ಳದಿರು, ಧೀರಳಾಗು, ಇಗೊ ನಂಬು ಬಂದೆಬಂದೆ.
*****