ಎಲ್ಲೋ ನೋಡಿದ್ದೇನೆ ಇವರನ್ನು
ಕೇಳಿದ್ದೇನೆ ಮಾತುಗಳನ್ನು
ಯಾರಿವರು?
ಅಟ್ಟದಿಂದ ಬೆಟ್ಟಕ್ಕೆ ಏರಿಸಿ
ಧೊಪ್ಪನೆ ಕೆಡುವವರು
ಕಂಬಿ ಇಲ್ಲದೆ ರೈಲು ಬಿಡುವ
ಅತಿ ಮಾನುಷರು.
ಮಾತಿನಲ್ಲೇ ಮನೆ ಕಟ್ಟಿ
ಮಾತಿನಲ್ಲೇ ಹೊಟ್ಟೆ ಬಟ್ಟೆ
ಮಾತಿನಲ್ಲೇ ಸ್ವರ್ಗ ತೋರಿಸುವ
ಮರುಳು ಮಾನವರು.
ಮಾತಿನಲ್ಲೇ ಸಮಾಧಿ ಕಟ್ಟಿ
ಸಮಾಧಿ ಮೇಲೆ ಗದ್ದುಗೆ
ಗದ್ದುಗೆಯಲ್ಲಿ ವಿರಾಜಿಸುವ
ಗದ್ದಲ ಶೂರರು.
ಅತ್ತಿತ್ತಗಲದೆ ಸುತ್ತ ನೋಡದೆ
ಅಧಿಕಾರದ ಚುಕ್ಕಾಣಿ ಹಿಡಿದು
ಮರದಿಂದ ಮರಕ್ಕೆ ಜಿಗಿಯುವ
ಮರ್ಕಟ ಜಾತಿಯವರು.
ಎಳ್ಳಷ್ಟಿಲ್ಲ ತತ್ತ್ವ ಸಿದ್ಧಾಂತ
ಅರ್ಥವಿಲ್ಲದ ಆದರ, ಆದರ್ಶ
ಅಧಿಕಾರದ ಲಾಲಸೆ ಹಣದ ಮೋಹ
ಗೋರಿಗೋಗುವ ಸಮಯವಾದರೂ
ಬಿಡದ ಕುರ್ಚಿಯ ವ್ಯಾಮೋಹ
ಸ್ವಾರ್ಥ ಸಾಧಕರಿವರು
ಯಾರಿವರು?
*****



















