ಹೇಗೆ ಕಳೆಯಲಿ ತಾಯಿ
ನೀನಿಲ್ಲದ ದಿನಗಳ
ಎಂದೂ ಊಹಿಸಿಕೊಳ್ಳದ
ನನ್ನ ಈ ದಿನಗಳ

ನೀ ತೋರಿದ ಬೆಟ್ಟದ ಗುಡಿ
ನಿನ್ನನ್ನು ಕೇಳಿದೆ
ಮೌನವಾದ ನನ್ನ ನೋಡಿ
ಕಾಡು ಮೌನ ಹೊದ್ದಿದೆ

ನೀ ನುಡಿದ ನೂರು ಹಾಡು
ಗಾಳಿಯಲ್ಲಿ ತೇಲಿದೆ
ಏಕೊ ಏನೊ ರಾಗ ಬದಲು
ಶೋಕ ಗೀತೆ ಹೊಮ್ಮಿದೆ!

ನೀ ಹಚ್ಚಿದ ಹಣತೆ ಒಡೆದು
ಎದೆಯ ಗೂಡು ಕತ್ತಲೆ
ಕತ್ತಲೆಯೆ ಕೋಟಿ ಸೂರ್‍ಯ
ಬದುಕಾಯಿತು ಬೆತ್ತಲೆ

ನೀ ಸವೆದ ಹಾದಿಯಲ್ಲಿ
ನನ್ನ ಪಯಣ ಸಾಗಿದೆ
ಸಾರ್ಥಕ್ಯ ನಿನಗೆ ಮಾತ್ರ
ನನಗೆ ಕವಿತೆ ಮೂಡಿದೆ!
*****