ಭಾವದ ಬೆನ್ನೇರಿ-
ಆಕಾಶಕೆ ನೆಗೆಯುವೆಯೊ
ಪಾತಾಳಕೆ ಇಳಿಯುವೆಯೊ
ಕಡಲನು ಈಜುವೆಯೊ
ಕಡಲಾಳವ ಸೇರುವೆಯೋ! || ಪ ||

ಭಾವದ ಬೆನ್ನೇರಿ-
ಕೋಗಿಲೆ ಆಗುವೆಯೊ
ನವಿಲಾಗಿ ಕುಣಿಯುವೆಯೊ
ಕವಿತೆಯ ಬರೆಯುವೆಯೊ
ಕತೆಯೇ ಆಗುವೆಯೋ!

ಭಾವದ ಬೆನ್ನೇರಿ-
ಗುರಿಯನು ಕಾಣುವೆಯೊ
ಗರಿಯನು ಪಡೆಯುವೆಯೊ
ಗೆರೆಯನು ಒಡೆಯುವೆಯೊ
ಒರೆಯನು ಸೇರುವೆಯೋ!

ಭಾವದ ಬೆನ್ನೇರಿ-
ಜಗದಗಲ ಹರಿಯುವೆಯೊ
ಯುಗಯುಗವ ಹೀರುವೆಯೊ
ರಾಮಾಯಣ ಬರೆಯುವೆಯೊ
ರಾಮಾಯಣವೆ ಆಗುವೆಯೋ!

ಭಾವದ ಬೆನ್ನೇರಿ-
ಮುಗಿಲಲಿ ತೇಲುವೆಯೊ
ನೆಲದಲಿ ಹರಿಯುವೆಯೊ
ಹಸಿರಾಗಿ ಹೊಮ್ಮುವೆಯೊ
ಉಸಿರಾಗಿ ಮಿಡಿಯುವೆಯೋ!
*****