ಕವಿತೆ ಹುಟ್ಟುವ ಸಮಯ
ಗೊತ್ತಿಲ್ಲ
ಕವಿತೆ ಬರೆವುದು ಹೇಗೆ
ಗೊತ್ತಿಲ್ಲ

ಕವಿತೆ ಬೆಳೆವುದು ಎಲ್ಲಿ
ಕವಿತೆ ಅಳಿವುದು ಎಲ್ಲಿ?
ಗೊತ್ತಿಲ್ಲ

ನಾವು ಕವಿಗಳಾದೆವೆ
ಬರೆದ ಕವಿತೆ ಪೂರ್‍ಣವೆ?
ಗೊತ್ತಿಲ್ಲ

ಕವಿತೆ ಹುಟ್ಟಬಲ್ಲದೆ
ಹುಟ್ಟು ಕವಿತೆಯ ಸಾವೆ?
ಗೊತ್ತಿಲ್ಲ

ಕವಿತೆ ತಿಳಿದವರಾರು?
ಕವಿತೆ ಬರೆದವರಾರು?
ಗೊತ್ತಿಲ್ಲ

ಕವಿತೆ ತಿಳಿವುದು ಹೇಗೆ?
ಕವಿತೆ ಬಗೆವುದು ಹೇಗೆ?
ಗೊತ್ತಿಲ್ಲ

ಕವಿತೆ ನುಸುಳುವುದ್ಹೇಗೆ?
ಕವಿತೆ ಮರಳುವುದ್ಹೇಗೆ?
ಗೊತ್ತಿಲ್ಲ

ಕವಿತೆಗೆ ಏನು ಬೇಕು?
ಕವಿತೆಗೆ ಏನು ಬೇಡ?
ಗೊತ್ತಿಲ್ಲ

ಕವಿತೆಗೆ ಅರ್‍ಥ ಬೇಕೆ?
ಕವಿತೆಗೆ ನಾದ ಸಾಕೆ?
ಗೊತ್ತಿಲ್ಲ

ಕವಿತೆಗೆ ಚರಿತೆ ಇದೆಯೆ?
ಕವಿತೆಗೆ ದಿಕ್ಕು ಇದೆಯೆ?
ಗೊತ್ತಿಲ್ಲ

ಕವಿತೆಗೆ ಮಾತು ಬೇಕೆ?
ಆ ಮಾತಿಗಂತ್ಯವಿದೆಯೇ?
ಗೊತ್ತಿಲ್ಲ
*****