ನಡೆವ ಹಾದಿಯಲಿ ಇಡುವ ಹೆಜ್ಜೆಯಲಿ
ಬೆಳಕು ಮೂಡುತಿರಲಿ
ಕೆಂಪು ಪಯಣ ಬಿರುಬಿಸಿಲಿನಲ್ಲೂ
ದಣಿವನ್ನು ಕಾಣದಿರಲಿ

ಹೆಜ್ಜೆ ಹೆಜ್ಜೆ ಹತ್ಹೆಜ್ಜೆ ಕೂಡಲಿ
ಧ್ವನಿಽ ಒಂದೆ ಇರಲಿ
ದಾರಿ ನೂರು ಎಡಬಲದಿ ಸೆಳೆದರೂ
ದಿಕ್ಕು ತಪ್ಪದಿರಲಿ

ಭೂತದರಿವಿದೆ ಚರಿತೆ ಕಟ್ಟುವ
ವರ್‍ತಮಾನವಿದೆ ಕೈಯಲಿ
ಕೈಯ ಬಾವುಟವು ಮುಗಿಲಿಗೇರುವ
ನಾಳೆ ನಮ್ಮದಿದೆ ನಿಜದಲಿ

ಬನ್ನಿ ಬನ್ನಿ ಓ ಬೆವರ ಬಂಧುಗಳೆ
ಕೆಂಪು ಗೀತೆ ಹಾಡಿ
ಉಕ್ಕಿ ಸಮುದ್ರ ಬುವಿಗೆ ರಾಚಲಿ
ಕಳಚಲೆಲ್ಲ ಬೇಡಿ
*****