ಕತ್ತಲೆ ಎಷ್ಟಿದ್ದರೆ ಏನು?
ಹಚ್ಚುವೆನು ದೀಪ
ಕಿಟಕಿ ಬಾಗಿಲು ಮುಚ್ಚಿದರೇನು
ಹರಡದೇನು ಧೂಪ //ಪ//

ಮುಳ್ಳುಗಳೆಷ್ಟಿದ್ದರೆ ಏನು
ಅರಳದೇನು ಹೂವು?
ನೋವುಗಳೆಷ್ಟಿದ್ದರೆ ಏನು
ಅರಸಬೇಕೆ ಸಾವು?

ಗದ್ದಲ ಎಷ್ಟಿದ್ದರೆ ಏನು
ಸಂತೆ ಸಾಗದೇನು?
ತಂದ ಭಾರವ ಕಳೆಯದೆ ಇಲ್ಲಿ
ಬಂಡಿ ಹತ್ತಲೇನು?

ಹಲ್ಲಿನ ಪಹರೆ ಇದ್ದರೆ ಏನು
ನುಡಿಯದೆ ನಾಲಿಗೆಯು?
ಸಿಟ್ಟಿಗೆದ್ದರೆ ಹಲ್ಲಿನ ಹಲ್ಲನು
ಮುರಿಸದೆ ಈ ನಾಲಿಗೆಯು?

ಕಿಚ್ಚನು ಯಾರು ಹಾಕಿದರೇನು
ಸಂಕ್ರಾಂತಿ ಅದು ಇನ್ನು!
ಒಳಗಿನ ಕಿಚ್ಚು ಅನ್ಯರ ಸುಡದು
ತಿಳಿಯಲು ತಡವೇನು?
*****