ಸತ್ವ ದಯಪಾಲಿಸುವ ಸತ್ಯದಾಭರಣ
ಪಡೆದು ಸೌಂದರ್ಯ ಅದೆಷ್ಟು ಮೆಚ್ಚಾಗುವುದು!
ಸುಂದರ ಗುಲಾಬಿ ಹೂ ಮೊದಲಿಗಿಂತಲು ಚಂದ
ಅದರೊಳಗೆ ಹುದುಗಿದ ಸುಗಂಧ ಬಲದಿಂದ.
ಕಣಗಿಲೆಯ ಹೂವೂ ಗುಲಾಬಿ ಹೂವಿನ ದಟ್ಟ
ಕೆಂಪುಬಣ್ಣವ ಪಡೆದು, ಮುಳ್ಳ ಜೊತೆ ನೇತಾಡಿ
ಬೇಸಿಗೆಯ ಉಸಿರು ಮೊಗ್ಗುಗಳನರಳಿಸಿದಾಗ
ಅತ್ತಿತ್ತ ತಲೆಯಾಡಿ ಹಾಡುವುವು, ಆದರೂ
ಅವುಗಳ ಹಿರಿಮೆಯೆಲ್ಲ ಬರಿಯ ಹೊರಚೆಲುವಷ್ಟೆ,
ಯಾರೂ ಪ್ರೀತಿಸದೆಯೆ ಯಾರೂ ಗೌರವಿಸದೆಯೆ
ಬಾಡಿ ಸಾಯುವುವು ; ಗುಲಾಬಿ ರೀತಿಯೆ ಬೇರೆ
ಅಳಿದ ಮೇಲೂ ಪರಿಮಳದ ತೈಲಕೊದಗುವುದು.
ಪ್ರಿಯ ಚೆಲುವ ಯುವಕನೇ ನೀನೂ ಗುಲಾಬಿಯಂತೆ,
ಅಳಿಯೆ ಗುಣವನು ಭಟ್ಟಿಯಿಳಿಸುವುದು ಈ ಕವಿತೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 54
Oh how much more doth beauty beauteous seem