ವಿಧಿಯ ದುರ್ಲಕ್ಷ್ಯಕ್ಕೆ ಜನದ ನಿರ್ಲಕ್ಷ್ಯಕ್ಕೆ
ತುತ್ತಾಗಿ ಕುಳಿತು ನಾನೊಬ್ಬನೇ ದುಃಖಿಸುವೆ
ನನ್ನೀ ಅನಾಥತೆಗೆ. ಕಿವಿಸತ್ತ ಸ್ವರ್ಗಕ್ಕೆ
ಮೊರೆಯಿಡುವೆ ಒಂದೆ ಸಮ. ಬರಿವ್ಯರ್ಥ ಚೀರಿಡುವೆ
ನನ್ನ ಬಾಳನು ನಾನೆ ಶಪಿಸಿ, ಭರವಸೆ ಸುರಿವ
ಯಾರ ಬಾಳನೊ ಬಯಸಿ. ಅವನ ಮೋಹಕ ಮಾಟ,
ಆತ್ಮೀಯರೊಡನಾಟ, ಇವನ ಕಲೆ, ಅವಗಿರುವ
ಅವಕಾಶಗಳ ನೆನೆದು ಇರುವ ಸುಖವೂ ಕಾಟ.
ಆತ್ಮಧಿಕ್ಕಾರಕ್ಕೆ ಸಿಕ್ಕ ಈ ಹೊತ್ತಲ್ಲಿ
ನಿನ್ನ ನೆನಪಾಯಿತೋ, ಅಹ ! ಪ್ರಭಾತದಲ್ಲಿ
ಬುವಿ ಜಿಗಿದು ಮುಗಿಲೇರಿ ದಿವದ ಬಾಗಿಲಿನಲ್ಲಿ
ಹಾಡಿ ಬಾನಾಡಿ ನಲಿಯುವುದು ಮನ ಖುಷಿಯಲ್ಲಿ.
ನಿನ್ನ ಪ್ರೇಮದ ಮಧುರ ಸ್ಮೃತಿಗರಳಿ ಭಾಗ್ಯಗಳು
ಅವರೆದುರು ಚಕ್ರವರ್ತಿಯ ಬಾಳು ಬರಿಧೂಳು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 29
When, in disgrace with fortune and men’s eyes