ನೀನು ನೀನೇ ಅಲ್ಲ, ಒಳಿತಿತ್ತು ಹಾಗಿರಲು.
ಒಲವೆ ನೀನೆಂದಿಗೂ ಹೀಗೇ ಇರುವುದಿಲ್ಲ.
ಸಿದ್ಧತೆಯ ಮಾಡು ಬರಲಿರುವ ಕೊನೆ ಎದುರಿಸಲು
ನಿನ್ನ ಸವಿಬಿಂಬವನು ಯಾರಿಗಾದರು ನೀಡು.
ನಿನ್ನ ಗೇಣಿಯೊಳಿರುವ ಚೆಲುವು ನೀ ನಡೆದಾಗ
ಕೊನೆಗೊಳ್ಳುವುದು ಸಲ್ಲ. ನಿನ್ನ ಪ್ರಿಯ ತಳಿಯೇ
ಮುಂದೆ ಈ ಸೌಂದರ್ಯವನ್ನು ತಳೆವುದು, ಆಗ
ಸತ್ತರೂ ಸಹ ನೀನು ನೀನಾಗಿಯೇ ಉಳಿವೆ.
ಚಳಿಗಾಲದಲಿ ಕ್ರೂರ ಬಿರುಗಾಳಿ ಬಡಿಯುವುದು,
ಸಾವಿನ ಅನಂತ ಹಿಮದಾವೇಶವನು ತಡೆದು
ರಕ್ಷಿಸಲು ಗೌರವ ವಿವಾಹ ಸಾಧನವಿರಲು
ಬೀಳಬಿಡುವರು ಯಾರು ಸುಂದರಗೃಹ ಜರಿದು ?
ದುಂದುಗಾರರು ಮಾತ್ರ. ನಿನಗೆ ಇದ್ದನು ತಂದೆ,
ನಿನ್ನ ಮಗನೂ ಹಾಗೆ ಹೇಳಬೇಡವೆ ಮುಂದೆ ?
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 13
O that you were yourself, but love you are