ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು
ಭಯವೆ, ಒಬ್ಬಂಟಿ ಬದುಕನ್ನೇಕೆ ತೇಯುವೆ ?
ಸಂತಾನ ಭಾಗ್ಯವಿಲ್ಲದೆ ನೀನು ಸತ್ತಂದು
ಜೊತೆ ಕಡಿದ ಹೆಣ್ಣಂತೆ ಈ ಲೋಕ ನರಳದೆ ?
ಉಳಿದ ವಿಧವೆಯರೆಲ್ಲ ತಮ್ಮ ಮಕ್ಕಳ ಕಣ್ಣ
ನೋಟದಲ್ಲೇ ಪತಿಯ ಪ್ರತಿಬಿಂಬ ಕಾಣುವರು ;
‘ನಮಗಿಲ್ಲ ಆ ಭಾಗ್ಯ, ನೀಡದೆಯೆ ತನ್ನನ್ನ
ನಡೆದ’ ಎಂದೀ ನಿನ್ನ ವಿಧವೆ-ಜಗ ಅಳಲುವುದು.
ದುಂದು ಬಳಸಿದ್ದು ಸಹ ದಂಡ ಖಂಡಿತ ಅಲ್ಲ,
ಬೇರೆ ಕೈಸೇರಿ ಲೋಕ ಅದನ್ನು ಸವಿಯುವುದು ;
ಚೆಲುವು ಜೋಪಾನ ಕಾಪಾಡಿ ಉಳಿಯುವುದಲ್ಲ
ಬಳಸದೇ ಉಳಿಸಿದರೆ ಅಳಿಸಿಯೇ ಹೋಗುವುದು.
ತನ್ನನ್ನೆ ಹೀಗೆ ಘಾತಿಸಿಕೊಳ್ಳುವವನಲ್ಲಿ
ಅನ್ಯರನು ಕುರಿತ ಸ್ನೇಹವು ಎಲ್ಲಿ ಮನದಲ್ಲಿ ?
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 9
Is it for fear to wet a widow’s eye