ಸ್ವಪ್ನ ಮಂಟಪ – ೩

ಸ್ವಪ್ನ ಮಂಟಪ – ೩

ಮಂಜುಳ ಮೊದಲ ದಿನವೇ ತರಗತಿ ತೆಗೆದುಕೊಂಡಳು. ಮಕ್ಕಳಿಗೆ ಪಾಠ ಮಾಡುವಾಗ ಆಕೆಗೆ ಆದ ಆನಂದ ಅಸಾಧಾರಣವಾದದ್ದು. ಏನೋ ಸಾರ್ಥಕತೆಯ ಸಂತೋಷ ಸಂಭ್ರಮ! ಎಲ್ಲರ ಮನಸೂ ಮಗುವೇ ಆಗಿದ್ದರೆ ಅದೆಷ್ಟು ಚನ್ನ! ಮುಗ್ಧ ಕುತೂಹಲಾಸಕ್ತಿಗಳ ನೆಲೆಯಾದ ಮಗುಮನಸ್ಸಿಗೇ ಮತ್ತೊಂದು ಹೋಲಿಕೆಯಿಲ್ಲ!

ಮಂಜುಳ ತರಗತಿ ಮುಗಿಸಿ ಮನೆಗೆ ಹೊರಡುವ ವೇಳೆಗೆ ಲಕ್ಷ್ಮಿ ಹೊರಗೆ ಕಾಯುತ್ತಾ ನಿಂತಿದ್ದಳು. ಏಳನೇ ತರಗತಿ ಓದುತ್ತಿದ್ದ ಆಕೆ ತನ್ನ ಶಾಲೆ ಮುಗಿಸಿ ಬಂದಿದ್ದಳು. ಲಕ್ಷ್ಮಿಯ ಜೊತೆಗೂಡಿ ಮನೆಯ ಕಡೆಗೆ ಹೊರಟ ಮೇಡಂ ಮಂಜುಳಾ ಅನೇಕರ ಆಕರ್ಷಣೆಯ ಕೇಂದ್ರವಾದಳು. ಬೆಳಗ್ಗೆ ಶಾಲೆಗೆ ಬರುವಾಗ ಗಮನಿಸದೆ ಇದ್ದ ಜನರೂ ಈಗ ಗಮನಿಸತೊಡಗಿದರು. ಅನೇಕರಿಗಂತೂ ಆಕೆ ವಿಶ್ವಸುಂದರಿಯೇ ಅವತಾರವೆತ್ತಿದಂತೆ ಕಾಣಿಸಿದಳು. ಒಬ್ಬೊಬ್ಬರದು ಒಂದೊಂದು ದೃಷ್ಟಿ ಮಂಜುಳಾಗೆ ಮಾತ್ರ ಒಂದೇ ದೃಷ್ಟಿ – ದಾರಿ ನೋಡಿಕೊಂಡು ನೆಟ್ಟಗೆ ಮನೆಗೆ ಹೋಗುವುದು.

ಮನೆಗೆ ಬಂದಾಗ ಶಿವಕುಮಾರ್ ಇರಲಿಲ್ಲ. ಆತನಿಗೆ ತನ್ನ ಮೊದಲ ದಿನದ ಅನುಭವವನ್ನು ಹೇಳಿ ಹಗುರವಾಗಬೇಕೆಂದುಕೊಂಡು ಬಂದ ಮಂಜುಳಾಗೆ ನಿರಾಶೆಯಾಯಿತಾದರೂ ತೋರ್ಪಡಿಸಿಕೊಳ್ಳಲಿಲ್ಲ. ಆದರೆ ಸಂಪೂರ್ಣ ಅದುಮಿಟ್ಟುಕೊಳ್ಳಲೂ ಆಗಲಿಲ್ಲ. ಲಕ್ಷ್ಮಿಯನ್ನು ಕೇಳಿದಳು.

‘ಹೊಲಕ್ಕೆ, ಇಲ್ಲ ಬೆಟ್ಟಕ್ಕೆ, ಅಷ್ಟೆ’ – ಲಕ್ಷ್ಮಿ ಹೇಳಿದಳು. ಇದನ್ನು ಕೇಳಿಸಿಕೊಂಡ ಕರಿಯಮ್ಮ ‘ಅಯ್ಯೋ ಅದೇನಂತ ಹೇಳಲಿ ಅವ್ನ್ ಕತೆ! ಊರಿಗೆ ಬಂದ ಅಂದ್ರೆ ಬೆಟ್ಟಾನೆ ಅವನ ಮನೆ. ಆ ಕೋಟೆ ಗೋಡೆ ನೋಡ್ಕಂಡ್ ಕುಂತ್ಕಂಡ ಅಂದ್ರೆ ಬೇರೆ ಯಾತ್ರುದೂ ಬ್ಯಾಡ ಅವ್ನಿಗೆ’ ಎಂದು ತನ್ನ ಮಗನ ಸ್ವಭಾವಕ್ಕೆ ಒಂದು ಸಣ್ಣ ವ್ಯಾಖ್ಯಾನವನ್ನೇ ಕೊಟ್ಟಳು. ಅಷ್ಟರಲ್ಲಿ ಸಿದ್ದಣ್ಣ ‘ಮೇಡಮ್ನಾರ್‍ಗೆ ಒಸಿ ಕಾಪಿಗೀಪಿ ಮಾಡ್ಕೊಡು. ಪಟ್ಟಣದೋರ್‍ಗೆ ಈಟೊತ್ನಾಗ ಕಾಪಿ ಕುಡ್ದು ಅಭ್ಯಾಸ ಆಗಿರ್‍ತೈತೆ’ ಎಂದು ಸೂಚಿಸಿದ. ಆನಂತರ ಮಂಜುಳಾ ಕಡೆ ತಿರುಗಿ ‘ನೀವ್ಯಾತ್ರುದು ಮನಸ್ಸಾಗಿಟ್ಕಬ್ಯಾಡ್ರಿ, ಕಾಪಿಗೀಪಿ ಬೇಕಾದ್ರೆ ಕೇಳ್ಬಿಡ್ರಿ.’ ಎಂದು ಹೇಳಿದ. ಮಂಜುಳಾ ‘ನಂಗೇನ್ ಸಂಕೋಚಾನ? ಇದು ನಮ್ಮನೆ ಥರಾನೇ ಆಗ್ಬಿಟ್ಟಿದೆ’ ಎಂದಳು.

ಕರಿಯಮ್ಮ ಕೂಡಲೆ ಮಾತು ಜೋಡಿಸಿದಳು – ‘ಹಂಗೇ ಇರ್‍ಬೇಕು ಕಣಮ್ಮ. ನಿಮ್ಮನೆ ಅಂಬ್ತಾನೇ ತಿಳ್ಕೊಂಡು ಇನ್ನೂ ಒಂದೆರಡ್ ದಿನ ಇಲ್ಲೇ ಇರು. ಆಮೇಲ್ ಬಾಡಿಗೆ ಮನೆ ಕತೆ ಇದ್ದೇ ಇರ್‍ತೈತೆ.’

ಮಂಜುಳಾಗೆ ಏನು ಹೇಳಬೇಕೆಂದು ಗೊತ್ತಾಗಲಿಲ್ಲ. ಕೂಡಲೆ ‘ಇಲ್ಲ’ ಎನ್ನಲಾಗದು. ‘ಹೌದು’ ಎನ್ನಲೂ ಆಗದು. ಮೌನ ವಹಿಸಿದಳು. ಆದರೆ ಲಕ್ಷ್ಮಿ ಬಿಡಲಿಲ್ಲ. ಮತ್ತೆ ಊರಿಗೆ ಹೋಗಿ ಎಲ್ಲ ಲಗೇಜು ತರುವವರೆಗೆ ಇದೇ ಮನೆಯಲ್ಲಿ ಇರಬೇಕೆಂದು ತನ್ನದೇ ರೀತಿಯಲ್ಲಿ ಒತ್ತಾಯಿಸಿದಳು.

ಮಂಜುಳಾ ನಸುನಗುತ್ತಾ ಒಳಮನೆಗೆ ಹೋದಳು. ಬರುವಾಗ ಬಟ್ಟೆ ಬದಲಾಯಿಸಿದ್ದಳು. ಲಕ್ಷ್ಮಿಗೆ ಆಶ್ಚರ್ಯವಾಯಿತು. ‘ಇದೇನು! ಬೆಳಗ್ಗೆ ಒಂದು ಸೀರೆ! ಸಾಯಂಕಾಲ ಒಂದು ಸೀರೆ! ಇನ್ನು ರಾತ್ರಿಗೆ ಹೇಗೊ’ ಎಂದುಕೊಂಡಳು. ಮಂಜುಳಾ ಸೋಪು ತೆಗೆದುಕೊಂಡು ಬಚ್ಚಲ ಕಡೆ ಹೋದಾಗ ತಾನೂ ಹೋದಳು. ಆಕೆ ಮುಖ ತೊಳೆಯುವುದನ್ನೇ ನೋಡಿದಳು. ಮುಖ ತೊಳೆದು ಆಕೆ ವಾಪಸ್ ಹೋದಮೇಲೆ ತಾನು ಬಚ್ಚಲಿಗೆ ಹೋದಳು. ಅಲ್ಲಿ ಬಿದ್ದಿದ್ದ ಸೋಪಿನ ನೊರೆಯನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿಕೊಂಡಳು. ಚನ್ನಾಗಿ ಉಜ್ಜಿ ತೊಳೆದುಕೊಂಡಳು. ಇದೆಲ್ಲ ಒಂದು ಹೊಸ ಅನುಭವವೆನ್ನಿಸಿತು! ಮುಖ ತೊಳೆದ ಕೂಡಲೇ ‘ಎಂದೂ ಇಲ್ಲದ ಸಿಂಗಾರ ಇವತ್ತೇನು’ ಎಂದು ಅಮ್ಮ ಅಂದುಬಿಟ್ಟರೆ ಎಂದು ಅಳುಕಾಗಿ ತನ್ನ ಲಂಗದಲ್ಲೇ ಒರೆಸಿಕೊಂಡಳು. ಆನಂತರ ಮಂಜುಳಾ ಇರುವ ಕಡೆ ಬಂದಳು. ಮಂಜುಳಾ ತಲೆ ಬಾಚುತ್ತಿದ್ದಳು. ಲಕ್ಷ್ಮಿ ಅದನ್ನೇ ದಿಟ್ಟಿಸುತ್ತಿರುವುದನ್ನು ಗಮನಿಸಿದ ಮಂಜುಳಾ ‘ಹೋಗಿ ಮುಖ ತೊಳ್ಕೊಂಡ್ ಬಾ ಲಕ್ಷ್ಮಿ, ನೀನೂ ತಲೆ ಬಾಚ್‌ಕೊಳ್ಳೀವಂತೆ’ ಎಂದಾಗ ಲಕ್ಷ್ಮಿ ಚಂಗನೆ ಹೊರಟಳು. ತಾನು ಆಗಲೇ ತೊಳೆದಿದ್ದನ್ನು ಹೇಳುವಂತಿಲ್ಲವಲ್ಲ!

ಹಾಗೆ ನೋಡಿದರೆ ಲಕ್ಷ್ಮಿಗೆ ಸೋಪಿನ ಪರಿಚಯ ಇರಲಿಲ್ಲವೆಂದೇನೂ ಅಲ್ಲ. ತನ್ನ ಅಣ್ಣ ದಿನಾ ಬೆಳಿಗ್ಗೆ ಸ್ಯಾಂಡಲ್ ಸೋಪಿನಲ್ಲೇ ಮುಖ ತೊಳೆಯುತ್ತಿದ್ದ. ತನ್ನಲ್ಲೇ ಜೋಪಾನ ಮಾಡಿಕೊಳ್ಳುತ್ತಿದ್ದ. ಈ ರೀತಿಯ ಸೋಪಿನಲ್ಲಿ ಮುಖ ತೊಳೆಯುವ ಅಧಿಕಾರ ಗಂಡಸರಿಗೆ ಮಾತ್ರವೇ ಇರಬಹುದೆಂದು ಭಾವಿಸಿದ ಲಕ್ಷ್ಮಿ ತಾನು ಎಂದೂ ಅವನನ್ನು ಕೇಳಿರಲಿಲ್ಲ. ಬಯಸಿರಲಿಲ್ಲ. ಈಗ ಮಂಜುಳಾ ಸ್ಯಾಂಡಲ್ ಸೋಪಿನಲ್ಲಿ ಮುಖ ತೊಳೆದದ್ದು ನೋಡಿ ಆಕರ್ಷಣೆ ಉಂಟಾಗಿತ್ತು. ಮುಖ ತೊಳೆದುಕೊಂಡು ಬರಲು ಹೇಳಿದಾಗ ಸೋಪನ್ನು ಕೇಳಲೇ ಎನ್ನಿಸಿದರೂ ಬಾಯಿ ಬರಲಿಲ್ಲ. ತಾನು ನೊರೆಯಲ್ಲಿ ಮುಖ ತೊಳೆದದ್ದನ್ನು ಹೇಳುವಂತೆಯೂ ಇಲ್ಲ. ಮತ್ತೆ ಮುಖ ತೊಳೆಯಬೇಕಾಗಿ ಬಂದಾಗ ಸೋಪನ್ನು ಬಳಸುವ ಅಪೇಕ್ಷೆ ಉಂಟಾದದ್ದಂತೂ ನಿಜ.

ಲಕ್ಷ್ಮಿ ಗೂಡಿನಲ್ಲಿ ಹುಡುಕಿದಳು. ಸೀಗೇಕಾಯಿ ಪುಡಿ, ಬಟ್ಟೆ ಸಾಬೂನು ಮುಂತಾದವನ್ನು ಆ ಗೂಡಿನಲ್ಲಿ ಇಟ್ಟಿದ್ದರು. ಎಲ್ಲಾ ತಡಕಿ ಬಟ್ಟೆ ಒಗೆಯುವ ಸಾಬೂನನ್ನು ತೆಗೆದುಕೊಂಡಳು. ಸೀದಾ ಬಚ್ಚಲಿಗೆ ಹೋಗಿ ಬಟ್ಟೆ ಒಗೆಯುವ ಸಾಬೂನಿನಿಂದಲೇ ಮುಖ ತೊಳೆದುಕೊಂಡಳು. ಅದು ಮೂಗಿಗೇರಿ ಕೆಮ್ಮತೊಡಗಿದಳು. ಇದನ್ನು ಕೇಳಿಸಿಕೊಂಡ ಮಂಜುಳಾ ಬಂದು ನೋಡುತ್ತಾಳೆ. ಲಕ್ಷ್ಮಿ ಬಟ್ಟೆ ಸಾಬೂನಲ್ಲಿ ಮುಖ ತೊಳೆಯುತ್ತಿದ್ದಾಳೆ. ಆಕೆಗೆ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ತಾನು ಸೋಪಿನಲ್ಲಿ ಮುಖ ತೊಳೆದದ್ದರ ಪರಿಣಾಮವಿದೆಂದು ಗೊತ್ತಾಗಲು ತಡವಾಗಲಿಲ್ಲ. ತಾನೇ ಒಂದು ಸೋಪು ಕೊಡಿಸಬೇಕೆಂದು ಮನಸ್ಸಿನಲ್ಲಿ ತೀರ್ಮಾನಿಸಿಕೊಂಡು ಲಕ್ಷ್ಮಿ ಯನ್ನು ಒಳಗೆ ಕರೆದೊಯ್ದಳು. ಬೆಳಗ್ಗೆ ಮಾಡಿದಂತೆ ತಾನೇ ಪೌಡರ್ ಹಚ್ಚಿದಳು. ಇಲ್ಲದಿದ್ರೆ ಲಕ್ಷ್ಮಿ ಬೂದಿಯನ್ನೇ ಹಚ್ಚಿಕೊಂಡಾಳೆಂದು ಅನುಮಾನವಾಯಿತು.

ಇವರಿಬ್ಬರು ಮುಖ ತೊಳೆದು ಸಿದ್ಧವಾಗುವ ವೇಳೆಗೆ ಕಾಫಿ ಸಿದ್ಧವಾಗಿತ್ತು. ಎಲ್ಲರೂ ಕಾಫಿ ಕುಡಿದರು.

ಹೊತ್ತು ಮುಳುಗಿ ಎಷ್ಟೋ ಹೊತ್ತಾದ ಮೇಲೆ ಶಿವಕುಮಾರ್‌ ಬಂದ. ಅವನ ಬರವಿಗಾಗಿಯೇ ಕಾಯುತ್ತಿದ್ದ ಮಂಜುಳಾ ಮುಗುಳ್ನಕ್ಕಾಗ ತಾನೂ ಬಲವಂತವಾಗಿ ನಸುನಕ್ಕು ಸೀದಾ ಒಳಗೆ ಹೋದ.

‘ಇಷ್ಟು ಹೊತ್ತು ಎಲ್ಲಿದ್ದೆ?’ – ಸಿದ್ದಣ್ಣ ಕೇಳಿದ.
‘ಸ್ನೇಹಿತರು ಇದಾರಲ್ಲ’ – ಎಂದ ಶಿವಕುಮಾರ್.

ಹೆಚ್ಚು ಮಾತಾಡಲಿಲ್ಲ. ಮಂಜುಳಾ ಮಾತನಾಡಲು ಪ್ರಯತ್ನಿಸಿದಳಾದರೂ ಆತ ಉತ್ತೇಜಕವಾಗಿ ಕಾಣದೆ ಇದ್ದುದರಿಂದ ಸುಮ್ಮನಾದಳು. ಸಿದ್ದಣ್ಣನೇ ತಮ್ಮ ವ್ಯವಸಾಯ, ಊರಿನ ರಾಜಕೀಯ, ಅದೂ ಇದು ಹೇಳುತ್ತಾ ಹೋದರು. ಮಂಜುಳಾ ಆಸಕ್ತಿಯಿಂದ ಕೇಳಿಸಿಕೊಂಡಳು. ಶಿವಕುಮಾರ್‌ ಮಾತ್ರ ಈ ಮಾತುಕತೆಯಲ್ಲಿ ಭಾಗವಹಿಸಲಿಲ್ಲ.

ಊಟಕ್ಕೆ ಕೂತಾಗಲೂ ಅಷ್ಟೆ. ಶಿವಕುಮಾರ್ ತನ್ನ ಪಾಡಿಗೆ ತಾನು ಮೌನವಾಗಿ ಊಟ ಮಾಡತೊಡಗಿದ. ಇದನ್ನು ಗಮನಿಸಿದ ಕರಿಯಮ್ಮ ಕೇಳಿದಳು.

‘ಯಾಕೊ ಇವತ್ತು ಮಂಕು ಬಡ್ದಂಗ್ ಕುಂತಿದ್ದೀಯಾ?’

‘ಇಲ್ವಲ್ಲ. ನಂಗೇನಾಗಿದೆ? ಸರ್‍ಯಾಗೇ ಇದ್ದೀನಿ.’

ಆಗ ಸಿದ್ದಣ್ಣ ‘ಏನ್ ಸರ್‍ಯಾಗಿದ್ದೀಯ? ಮನೆ ಒಳಗೆ ಬಂದಾಗಿಂದ ಮೂಗ್ ಬಸಣ್ಣನ ಥರಾ ಕುಂತಿದ್ದೀಯ’ ಎಂದು ಹೇಳಿ ಆನಂತರ ಮಂಜುಳಾಗೆ – ‘ಇವ್ನ್ ಯಾವಾಗ್ಲೂ ಹಿಂಗೇ. ಒಂದೊಂದ್ಸಾರಿ ಚಿಗರೆ ಮರಿ ಥರಾ ಇರ್‍ತಾನೆ. ಒಂದೊಂದ್ ಸಾರಿ ಕೋಣ ಕೆಸರಾಗ್ ಬಿದ್ದಂಗಿರ್‍ತಾನೆ’ ಎಂದು ವಿವರಿಸಿದ.

ಮಂಜುಳಾಗೆ ಈ ಹೋಲಿಕೆಯಿಂದ ನಗು ಬಂತಾದರೂ ನಗಲಿಲ್ಲ. ತಡೆದುಕೊಂಡಳು. ಮತ್ತೆ ಸಿದ್ದಣ್ಣನೇ ಮಾತು ಮುಂದುವರೆಸಿದ.

‘ನೋಡೋ ಕುಮಾರ, ನಾಳೆ ಮೇಡಮ್ಮಾರ ಬೆಟ್ಟಕ್ಕೆ ಕರ್‍ಕಂಡೋಗಿ ಎಲ್ಲಾ ತೋರಿಸ್ಕಂಡ್ ಬಾ. ಹಂಗೇ ನಿಮ್ಮಮ್ಮನ್ನೂ ಲಕ್ಷ್ಮೀನೂ ಜೊತೇಲ್ ಕರ್‍ಕಂಡ್ ಹೋಗು.’

ಮೊದಲಾಗಿದ್ದರೆ ತಾನೇ ಉತ್ಸಾಹದಿಂದ ಕರೆದೊಯ್ಯುತ್ತಿದ್ದ ಶಿವಕುಮಾರನಿಗೆ ಇವತ್ತು ಅಷ್ಟು ಉತ್ಸಾಹವಿರಲಿಲ್ಲ. ತನ್ನ ಚರಿತ್ರೆಯ ಪ್ರೇಮವನ್ನು ಮಂಜುಳಾ ಪ್ರೇಮ ಕೊಚ್ಚಿಹಾಕುವಂತಹ ಭಾವನೆ ಮೂಡಿಸಿದ ಇಂದಿನ ‘ಕೋಟೆ ಅನುಭವ’ ಅವನನ್ನು ಕಾಡಿಸಿತು. ಹೀಗಾಗಿ ಮೌನ ವಹಿಸಿದ. ಈತನ ಮೌನವನ್ನು ಮಂಜುಳಾಗೆ ತಡೆದುಕೊಳ್ಳಲು ಆಗಲಿಲ್ಲ.

‘ಅವ್ರಿಗೆ ಇಷ್ಟ ಇಲ್ದಿದ್ರೆ ಸುಮ್ನೆ ಯಾಕ್ ಒತ್ತಾಯ ಮಾಡ್ತೀರಿ’ ಎಂದು ಸಿದ್ದಣ್ಣನಿಗೆ ಹೇಳಿಯೇ ಬಿಟ್ಟಳು.

ತಕ್ಷಣ ಶಿವಕುಮಾರ್ ‘ಛೇ! ಛೇ! ಹಾಗೇನಿಲ್ಲ. ಕರ್‍ಕೊಂಡ್ ಹೋಗ್ತಿನಿ. ಖಂಡಿತ ಕರ್‍ಕೊಂಡ್ ಹೋಗ್ತಿನಿ’ ಎಂದ.

‘ಕರ್‍ಕೊಂಡ್ ಹೋಗೋದಾದ್ರೆ ಮನಃಪೂರ್ವಕವಾಗಿ ಕರ್‍ಕಂಡ್ ಹೋಗಿ’ ಎಂದಳು ಮಂಜುಳಾ.

ಶಿವಕುಮಾರ್ ಕೂಡ ಹಾಗೇ ಉತ್ತರಿಸಿದ. ‘ಮನಸ್ಸಿಲ್ಲದೆ ನಾನು ಯಾವ ಕೆಲ್ಸಾನೂ ಮಾಡೊಲ್ಲ, ದ್ವಂದ್ವ ಅಂದ್ರೆ ನನಗೆ ಆಗಲ್ಲ.’

‘ಆದ್ರೆ ಜೀವನದಲ್ಲಿ ಎಷ್ಟೋ ಸಾರಿ ದ್ವಂದ್ವಗಳು ಬರುತ್ವೆ, ಅವನ್ನು ಮೀರೋದೇ ಬದುಕಿನ ಸಂಘರ್ಷ’ – ಎಂದಳು ಮಂಜುಳಾ.

‘ಇರಬಹುದು. ಆದ್ರೆ ದ್ವಂದ್ವ ತಲೆ ಹಾಕಿದ್ರೆ ನನಗಾಗಲ್ಲ.’

‘ಆಗಲ್ಲ ಅಂದ್ರೆ ಅದು ಬಿಡಲ್ಲ. ಬಂದೇ ಬರುತ್ತೆ.’

‘ಬರುತ್ತೆ ಅಂತ ಬಾಗಿಲು ತೆಗೆದು ಕಾಯ್ಬೇಕೇನು?’

‘ಛೇ! ಛೇ! ನೀವು ತಪ್ಪು ತಿಳ್ಕೋಳ್ತಿದ್ದೀರಿ. ದ್ವಂದ್ವ ನಮ್ಮ ಸ್ಥಿರವಾದ ನೆಲೆ ಆಗಬಾರದು. ಆದರೆ ದ್ವಂದ್ವದ ಕ್ಷಣಗಳು ಜೀವನದಲ್ಲಿ ಬಂದೇಬರುತ್ವೆ. ಈ ದ್ವಂದ್ವಗಳನ್ನ ಮೀರಿ ಬೆಳೆಯೋದು ಬದುಕು ಅನ್ನೋದು ನನ್ನ ಅಭಿಪ್ರಾಯ.’

ಇವರಿಬ್ಬರ ಮಾತನ್ನು ನೋಡುತ್ತಾ ಕೂತಿದ್ದ ಸಿದ್ದಣ್ಣ ‘ನೀವೇನ್ ಮಾತಾಡ್ತಾ ಇದ್ದೀರ? ನಮ್ಮನ್ನ ಬಯ್ಯಂಬ್ತಿಲ್ಲ ತಾನೆ?’ ಎಂದು ನಕ್ಕ.

‘ಛೇ! ಛೇ! ಎಲ್ಲಾದ್ರೂ ಉಂಟಾ? ಹೀಗೇ ಚರ್ಚೆ ಮಾಡ್ತಾ ಇದ್ವಿ ಅಷ್ಟೆ’ ಎಂದಳು ಮಂಜುಳ. ‘ಓ ಚರೀಚೆ ಅಂದ್ರೆ ಹಿಂಗಿರ್‌ತೈತಾ?’ ಇವೆಲ್ಲ ನಂಗೊಂದೂ ಗೊತ್ತಾಗಕಿಲ್ಲ, ಆದ್ಸರಿ, ಕೋಟೆ ತೋರ್‍ಸಾಕೆ ಈಟೆಲ್ಲ ಚರೀಚೆ ಆಗ್ಬೇಕಾ?’ ಎಂದು ಕೇಳಿದ ಸಿದ್ದಣ್ಣ.

‘ಅದೇನೊ ನಿಮ್ಮ ಮಗನ್ನೆ ಕೇಳಿ’ ಎಂದಳು ಮಂಜುಳ.

‘ಕೇಳೋದು ಬೇಡ ಹೇಳೋದು ಬೇಡ. ನಾಳೆ ಅವರ ಸ್ಕೂಲ್ ಮುಗುದ್ ಕೂಡ್ಲೆ ಕೋಟೆ ಹತ್ರ ಕರ್‍ಕಂಡ್ ಹೋಗ್ತಿನಿ. ಸರೀನಾ?’ ಎಂದು ಕೈತೊಳೆದುಕೊಂಡು ಮೇಲೆದ್ದ.

‘ಆಟೇಳಾಕೆ ಈಟೆಲ್ಲಾ ಮಾತಾಡ್ಬೇಕಾ? ಬಿಡ್‌ ಬಿಡು’ ಎಂದ ಸಿದ್ದಣ್ಣ.

ಯಾರೂ ಮಾತಾಡಲಿಲ್ಲ.

ಹಳ್ಳಿಯಲ್ಲಿ ಊಟವಾಯಿತೆಂದರೆ ಮನೆ ಮುಂದಿನ ಹಟ್ಟಿಗೆ ಬಂದು ಕೂತುಕೊಂಡು ಅಡಿಕೆಲೆ ಜಗಿಯುತ್ತ ಅದೂ ಇದೂ ಮಾತನಾಡುವುದು ಬೆಳದಿಂಗಳು ಇದ್ದರಂತೂ ಅದರ ಬೆಳಕಲ್ಲಿ ಹರಟೆ ಹೊಡೆಯುವುದು, ಕತೆ ಹೇಳುವುದು, ಲೋಕಾನುಭವವನ್ನು ಅಳೆದು ಸುರಿಯುವುದು ಇದ್ದೇ ಇರುತ್ತದೆ.

ಕರಿಯಮ್ಮ ಹಟ್ಟಿಯಲ್ಲಿ (ಅಂದರೆ ಮನೆಮುಂದಲ ಅಂಗಳದಲ್ಲಿ) ಚಾಪೆ ಹಾಸಿ ಅಡಿಕೆಲೆ ತಂದಿಟ್ಟಳು. ಸಿದ್ದಣ್ಣ ಮಂಜುಳಾಳನ್ನು ಕರೆದು ಕೂಡಿಸಿಕೊಂಡ. ಶಿವಕುಮಾರ್ ಬರಲಿಲ್ಲ. ಲಕ್ಷ್ಮಿ ಬಂದು ಕೂತಳು. ಕರಿಯಮ್ಮ ಸ್ವಲ್ಪ ದೂರದಲ್ಲೇ ಕೂತಳು.

‘ಅಡಿಕೆಲೆ ಹಾಕ್ಕಳ್ರಮ್ಮ’ – ಸಿದ್ದಣ್ಣ ಹೇಳಿದ.

‘ನಂಗೇನಂಥ ಅಭ್ಯಾಸ ಇಲ್ಲ’ – ಮಂಜುಳ ಉತ್ತರಿಸಿದಳು.

‘ಅಬ್ಬೆಸ ಇಲ್ದಿದ್ರೇನಂತೆ ಓಸಿ ಹಂಗ್ ಹಾಕ್ಕಳ್ರಮ್ಮ, ಏನೂ ಆಗಾಕಿಲ್ಲ’ ಎಂದ. ಮಂಜುಳ ಅಡಿಕೆಲೆ ತೆಗೆದುಕೊಂಡಳು.

‘ಅಂದಂಗೆ, ನಿಮ್ಮಪ್ಪ ಅಮ್ಮ….?’ – ಸಿದ್ದಣ್ಣ ಕೇಳತೊಡಗಿದ.

‘ಇಲ್ಲ…. ಈಗ ಅವ್ರು ಬದ್ಕಿಲ್ಲ?’ – ಮಂಜುಳ ಮೆಲುದನಿಯಲ್ಲಿ ನೋವಿನಿಂದ ಹೇಳಿದಳು. ಸಿದ್ದಣ್ಣನಿಗೆ ಕೆಟ್ಟದ್ದೆನಿಸಿತು.

‘ಛೆ! ಛೆ! ಹಿಂಗಾಗ್ಬಾರದಿತ್ತು.’

ಸ್ವಲ್ಪ ಕಾಲ ಮೌನ.

‘ಮತ್ತೆ ಇನ್ ಯಾರವ್ರೆ ನಿಮ್ ಕಡೆ?’ – ಸಿದ್ದಣ್ಣ ಮತ್ತೆ ಕೇಳಿದ.

‘ನಮ್ಮಣ್ಣ ಇದಾರೆ. ನಾನು ಅವರ ಮನೇಲೇ ಬೆಳೆದೆ. ಅವರಿಗೂ ಹೆಂಡ್ತಿ ಮಕ್ಕಳು ಇದಾರಲ್ಲ, ನನ್ ಕಾಲ್ ಮೇಲೆ ನಾನ್ ನಿಂತ್ಕಳ್ಬೇಕು ಅಂತ ಕೆಲ್ಸಕ್ ಸೇರ್‍ಕೊಂಡೆ.’ – ಮಂಜುಳ ಸಹಜ ದನಿಯಲ್ಲಿ ಉತ್ತರಿಸಿದಳು.

‘ಒಳ್ಳೆ ಕೆಲ್ಸ ಮಾಡಿದ್ರಿ ಬಿಡ್ರಮ್ಮ. ಈಗಿನ್ ಕಾಲ್ದಾಗೆ ಈ ಗಂಡ್ಮಕ್ಕಳನ್ನ ನಂಬಾಕಾಗಲ್ಲ. ಯಾವಾಗೇನಾಗ್‌ ತೈತೊ ಏನ್ಕತೆಯೊ! ಎರಡು ಹೊತ್ತು ಊಟಕ್ ಹುಟ್ಟಿಸ್ಕಂಡ್ರೆ ಸಾಕು. ನಮ್ ಪಾಡಿಗೆ ನಾವಿರಬಹುದು.’

‘ಎಲ್ರೂ ಹಾಗಿರಲ್ಲವಲ್ಲ?’

‘ಅದೂ ಸರೀನೆ. ಆದ್ರೆ ನಮ್ ಕಾಲ್ ಮೇಲೆ ನಾವು ನಿಲ್ಬೇಕು ಆನ್ನಾದಂತೂ ಸರಿಕಣಮ್ಮ. ನಮ್ಮ ಈ ಲಕ್ಷ್ಮೀನೂ ಚಂದಾಗ್ ಓದುಸ್ಬೇಕು.’

‘ನನಗೆ ಬಿಡುವಾದಾಗೆಲ್ಲ ಮನೇಲಿ ಪಾಠ ಹೇಳ್ಕೊಟ್ಟು ತಯಾರ್ ಮಾಡ್ತೀನಿ.’ ಎಂದು ಮಂಜುಳ ತಾನಾಗಿಯೇ ಹೇಳಿದಾಗ ಸಿದ್ದಣ್ಣನಿಗೆ ಎಲ್ಲಿಲ್ಲದ ಸಂತೋಷವಾಯಿತು.

‘ಆಟ್ ಮಾಡಿದ್ರೆ ಅವಳುದ್ಧಾರ ಆಗ್ಬಿಡ್ತಾಳೆ ಕಣ್ರಮ್ಮ’ ಎಂದು ಅದೇ ಭಾವದಲ್ಲಿ ಹೇಳಿದ.

ಆಗ ಕರಿಯಮ್ಮ ‘ಇನ್ನೂ ಅವ್ರ್ ಬಂದು ಒಂದಿನಾನೂ ಮುಗ್ದಿಲ್ಲ. ಆಗ್ಲೆ ಒಂದ್ ಕೆಲ್ಸ ವಯ್ಸಿ ಬಿಟ್ರಲ್ಲ’ ಎಂದು ನಗುತ್ತ ಹೇಳಿದಳು.

ಮಂಜುಳ ‘ಹಾಗ್ಯಾಕ್ ತಿಳ್ಕೊತೀರಾ? ಲಕ್ಷ್ಮೀನ ನಮ್ಮ ಹುಡುಗಿ ಅಂತ ತಿಳ್ಕೊಂಡಿದ್ದೀನಿ. ಬೇರೆ ಅಂತ ಭಾವಿಸಿಲ್ಲ’ ಎಂದಳು.

ಸಿದ್ದಣ್ಣ ಮತ್ತು ಕರಿಯಮ್ಮ ನಿಜಕ್ಕೂ ಆನಂದಪಟ್ಟರು.

ಒಳಗೆ ಕೂತು ಇವರ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದರೂ ಶಿವಕುಮಾರ್‌ ನಡುವೆ ಬಾಯಿ ಹಾಕಲಿಲ್ಲ. ಅವನಿಗೆ ಅದೇನೊ ಅಲ್ಲೋಲ ಕಲ್ಲೋಲವಾದ ಅನುಭವ. ಇವರೊಂದಿಗೆ ಬೆರಯಲಾಗದ ಬಿರುಕು. ಆದರೆ ಅದು ಶಾಶ್ವತವಲ್ಲ. ತಕ್ಷಣಕ್ಕೆ ಉಂಟಾದ ಉದ್ವಿಗ್ನತೆಯ ಫಲ. ತನ್ನಷ್ಟಕ್ಕೆ ತಾನು ಕೂತುಕೊಂಡರೂ ಹೊರಗಿನ ಮಾತಿನ ಮೇಲೇ ನಿಗಾ ಇಟ್ಟಿದ್ದ ಶಿವಕುಮಾರನಿಗೆ ಮಂಜುಳಾ ದನಿ ಮಂಜುಳಕರವಾಗಿದೆ ಎನ್ನಿಸಿತು. ಆಕೆಯ ಮಾತಿನಲ್ಲಿ ವ್ಯಕ್ತವಾಗುತ್ತಿದ್ದ ವ್ಯಕ್ತಿತ್ವ ಎತ್ತರವಾಗಿದೆ ಎಂಬ ಭಾವನೆ ಬಂತು. ಆದರೆ ತಾನು ಅತ್ಯಂತ ಗಾಢವಾಗಿ ಪ್ರೀತಿಸುವ – ಅಲ್ಲ – ಪೂಜಿಸುವ ಬೆಟ್ಟಕ್ಕಿಂತ ಯಾವುದೂ ಎತ್ತರವಾಗಬಾರದೆಂಬ ಒಳ‌ಒತ್ತಡದಲ್ಲಿ ಒದ್ದಾಡುತ್ತಿದ್ದ. ತನ್ನ ಪೂಜಾಭಾವನೆಯನ್ನು ಪ್ರೀತಿ ಪ್ರೇಮಗಳು ಕೊಚ್ಚಿ ಹಾಕಬಾರದು ಎಂದು ಒಳಗುದಿಗೆ ಬಿದ್ದಿದ್ದ. ಅದೇ ಬೇರೆ, ಇದೇ ಬೇರೆ ಎಂಬ ತಿಳುವಳಿಕೆಯಲ್ಲಿ ಎಲ್ಲವೂ ತಿಳಿಯಾಗಬಹುದಿತ್ತು. ಚರಿತ್ರೆಯನ್ನು ಎಷ್ಟು ಗೌರವಿಸಬೇಕೆಂಬ ಔಚಿತ್ಯಪ್ರಜ್ಞೆ ಕೆಲಸ ಮಾಡಿದ್ದರೆ ತಲೆಯೊಳಗೆ ಕೈಹಾಕಿಕೊಂಡು ಕೂತುಕೊಳ್ಳಬೇಕಾಗಿರಲಿಲ್ಲ. ಮೆದುಳನ್ನು ಮೆದ್ದು ಮಂಕಾಗಬೇಕಿರಲಿಲ್ಲ.

ಆದರೇನು ಮಾಡುವುದು? ಶಿವಕುಮಾರನ ಸ್ವಭಾವವೇ ಹೀಗೇ. ಯಾವುದೋ ಒಂದರಲ್ಲಿ ಮುಳುಗಿಹೋಗುವುದು. ಆದರೆ ಬದುಕೆಂದರೆ ಏಕಕಾಲಕ್ಕೆ ಮುಳುಗೇಳುವ ನಿರಂತರ ಪ್ರಕ್ರಿಯೆ.

ಇದ್ದಕ್ಕಿದ್ದಂತ ಮಂಜುಳಾ ಬಗ್ಗೆ ತನ್ನದೇ ಭಾವನೆಗಳನ್ನು ಮೂಡಿಸಿಕೊಂಡು ಒದ್ದಾಡುವ ವಿಚಿತ್ರ ಪರಿಸ್ಥಿತಿ. ಚರಿತ್ರೆ ಬಗೆಗಿನ ಪೂಜ್ಯಭಾವಕ್ಕೆ ಅಪವಿತ್ರ ಸ್ಪರ್ಶವಾದಂತಹ ವಿಚಿತ್ರ ವೇದನೆ. ಒಟ್ಟಿನಲ್ಲಿ ಊರಿಗೇ ವಿಚಿತ್ರವೆನ್ನಿಸುವ ವ್ಯಕ್ತಿತ್ವ ಈತನದು. ತುಂಬಾ ಬುದ್ದಿವಂತನಾದ್ದರಿಂದ ಹೀಗೆ ಆಡುತ್ತಾನೆ ಅನ್ನುವುದು ಊರಿನವರ ನಂಬಿಕೆ. ‘ಯಾರೋ ರ್‍ಯಾಂಕ್ ಪದವೀಧರನಿಗೆ ತನ್ನ ಅತಿ ಬುದ್ದಿವಂತಿಕೆಯ ಕಾರಣಕ್ಕಾಗೇ ಹುಚ್ಚು ಹಿಡಿಯಿತಂತೆ; ಇನ್ನೊಬ್ಬ ಬುದ್ದಿವಂತೆ ಬುದ್ದಿಯ ಭಾರ ತಾಳಲಾರದ ಸತ್ತೇಹೋದಳಂತೆ’ – ಹೀಗೆ ಅನೇಕ ಪ್ರಸಂಗಗಳನ್ನು ಕೇಳಿದ್ದ ಊರವರಿಗೆ ಶಿವಕುಮಾರ್ ಎಂಬ ಬುದ್ದಿವಂತ ಸದ್ಯ ಹಾಗೆಲ್ಲ ಆಗದಿದ್ದರೆ ಸಾಕಿತ್ತು.

ಊರಿಗೆಲ್ಲ ಬುದ್ದಿವಂತನೆಂಬ ಖ್ಯಾತಿ ಪಡೆದಿದ್ದ ಶಿವಕುಮಾರನನ್ನು ಮಂಜುಳಾಳ ಬುದ್ದಿವಂತಿಕೆಯೂ ಅವ್ಯಕ್ತವಾಗಿ ಕಾಡಿಸುತ್ತಿರಬಹುದು. ಯಾಕಂದರೆ ಒಂದೇ ದಿನದಲ್ಲಿ ಮಂಜುಳಾ ತನ್ನ ದೃಢ ವ್ಯಕ್ತಿತ್ವವನ್ನು ಹೊರಚೆಲ್ಲಿದ್ದಳು. ಆಕೆಯ ಅಷ್ಟಿಷ್ಟು ಮಾತುಗಳಲ್ಲೇ ಇದು ವ್ಯಕ್ತವಾಗಿತ್ತು. ಆಕೆಗಿರುವ ಸ್ವತಂತ್ರ ಅಭಿಪ್ರಾಯಗಳ ಪರಿಚಯ ಸ್ವಲ್ಪವಾದರೂ ಶಿವಕುಮಾರನಿಗೆ ಆಗಿತ್ತು. ಇದೆಲ್ಲವೂ ಸೇರಿ ಆತ ವಿಚಿತ್ರ ಗೊಂದಲಿಗನಾಗುತ್ತಿರಲೂ ಸಾಕು. ಒಟ್ಟಿನಲ್ಲಿ ಆತನ ಮನಸ್ಥಿತಿ ಸಮಾಧಾನಕರವಾಗಿರಲಿಲ್ಲ.

ಹೊರಗೆ ಸಿದ್ದಣ್ಣ ಮಾತಾಡುತ್ತಲೇ ಇದ್ದ. ತನ್ನ ಬೇಸಾಯ ಬೆಳೆ-ಮುಂತಾದ ವಿಚಾರಗಳನ್ನು ಮಂಜುಳಾಗೆ ವಿವರಿಸುತ್ತಿದ್ದ. ಆಕೆ ಆಸಕ್ತಿಯಿಂದ ಕೇಳುತ್ತ ನಡುನಡುವೆ ತನಗೆ ತೋಚಿದ್ದನ್ನು ಹೇಳುತ್ತಿದ್ದಳು. ಇವರ ಮಾತುಕತೆಯಲ್ಲಿ ಭಾಗವಹಿಸಲಾಗದ ಶಿವಕುಮಾರನಿಗೆ ಸುಮ್ಮನಿರಲೂ ಆಗಲಿಲ್ಲ. ಮಂಜುಳಾ ಒಮ್ಮೆಯಾದರೂ ತನ್ನನ್ನು ನೆನಪು ಮಾಡಿಕೊಳ್ಳಲಿಲ್ಲ. ಹೊರಗೆ ಕರೆಯಲಿಲ್ಲ ಎಂದು ಒಳಗೇ ಕುದಿಯುತ್ತ ಕೂತ. ಆದರೆ ಕೂತುಕೊಳ್ಳಲೂ ಸಾಧ್ಯವಾಗಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಮೇಲೆದ್ದ. ಹೊರಬಂದ. ಇವರ ಮಾತನ್ನು ಲೆಕ್ಕಿಸದೆ ಲಕ್ಷ್ಮಿಗೆ ಹೇಳಿದ.

‘ಲಕ್ಷ್ಮಿ, ನಾಳೆ ನಾನು ಬೆಟ್ಟದ ಬುಡದ ಹತ್ರ ಇರ್‍ತೀನಿ. ನೀನೇ ಕರ್‍ಕಂಡ್ ಬಾ’ ಎಂದವನೇ ಮನೆಯಿಂದ ಹೊರಟುಬಿಟ್ಟ. ಸಿದ್ದಣ್ಣ ಸುಮ್ಮನಿರಲಿಲ್ಲ.

‘ನಾಳೆ ವಿಷ್ಯ ಈಗ್ಲೆ ಹೇಳ ಹೋಗ್ತಾ ಇದ್ದೀಯಲ್ಲ – ನಾಳೆತಂಕ ಮನೆಕಡೆ ಬರಾಕಿಲ್ವ?’ ಎಂದು ಛೇಡಿಸಿದ.

‘ಬರ್‍ದೇ ಎಲ್ ಬಿದ್ಕಂತೀನಿ. ಬರ್‍ತೀನಿ’ ಎಂದು ಶಿವಕುಮಾರ ಹೊರಟ.

‘ಅವತ್ತಿನ ಥರಾ ಕೋಟೆ ಮೆಟ್ಟಲು ಮ್ಯಾಲೆ ಮಲೀಕಂಡ್‌ಬಿಟ್ಟೀಯ’ ಎಂದು ಸಿದ್ದಣ್ಣ ಕೂಗಿ ಹೇಳಿದರೂ ಕೇಳಿಸಿಕೊಳ್ಳದವನಂತೆ ಹೋದ. ಅನಂತರ ಸಿದ್ದಣ್ಣ ಮಂಜುಳಾಗೆ ಹೇಳಿದ

‘ಇವನ್ನ ಸಾಮಾನ್ಯ ಅಂದ್ಕಬ್ಯಾಡ್ರಮ್ಮ. ಬಲೇ ಆಸಾಮಿ. ಸುತ್ತಮುತ್ತ ಯಾರೂ ಇಲ್ಲ ಇವ್ನಂಗೆ. ಗೊತ್ತಾ? ಒಂದಿನ ಏನಾತು ಅಂಬ್ತೀರ? ರಾತ್ರಿ ಏಟೊತ್ತಾದ್ರೂ ಮನೇಗ್ ಬರ್‍ಲಿಲ್ಲ. ಅವತ್ತೇ ನಾನ್ ಬ್ಯಾರೆ ಒಸಿ ಬ್ಯಾಸ್ರ ಮಾಡ್ಕಂಡಿದ್ದೆ. ಅಗ್ಲಲ್ಲ ನನ್ನ ದುಡ್ ಕೇಳಬ್ಯಾಡ ಅಂಬ್ತ ರೇಗಿದ್ದೆ. ಅದೆಲ್ಲ ಮನಸ್ಸಾಗಿಟ್ಕಂಡು ಎಲ್ಲೋದ್ನೊ ಅಂಬ್ತ ಲಾಟೀನ್ ತಗಂಡು ಊರೊಗ್ಗಡೆ ಎಲ್ಲಾ ಹುಡುಕ್ದೆ. ಆಮೇಲೆ ಬೆಟ್ಟದ ಕಡೆ ಹೋಗ್ ನೋಡ್ತೀನಿ. ಅಲ್ಲೇ ಬುಡ್ದಾಗೆ ಮಟ್ಟಲು ಮ್ಯಾಲ್ ಮಲೀಕಂಡವ್ನೆ! ಎಬ್ಸಿ ಕರ್‍ಕಂಡ್ ಬಂದ್ ಕೇಳಿದ್ರೆ – ನಿಂಗೇನ್ ಗೊತ್ತು ದೊಡ್ಡೋರ್ ವಿಷ್ಯ? ದೊಡ್ ಮನುಸ್ರಾದೋರೆಲ್ಲ ಹಿಂಗೇ ಹೆಂಗಂದ್ರಂಗ್ ಇರ್‍ತಾ ಇದ್ರು – ಅಂಬ್ತ ಹೇಳ್ಬಿಡಾದ? ಇನ್ನೇನ್ ಮಾಡಾದು, ನನ್ ಮಗಾನೂ ದೊಡ್ಡೋನಾಗ್ತಾ ಅವ್ನೆ ಅಂಬ್ತ ಆನಂದ ಪಟ್ಕಂಡೆ.’ ಮಂಜುಳಾ ಫಕ್ಕನೆ ನಕ್ಕಳು. ಸಿದ್ದಣ್ಣ ಅಚ್ಚರಿಪಟ್ಟು ಕೇಳಿದ.

‘ಯಾಕ್ರಮ್ಮ ಹಂಗ್ ನಗ್ತೀರಾ? ದೊಡ್ಡೋರೆಲ್ಲ ಹಿಂಗೇ ತಾನೆ ಮಾಡ್ತಾ ಇದ್ದದ್ದು?’

‘ಕೆಲವರಿಗೆ ಇಂಥ ಅಭ್ಯಾಸ ಇದ್ದದ್ದು ನಿಜ. ಆದ್ರೆ ಇಂಥ ವಿಚಿತ್ರ ಅಭ್ಯಾಸ ಮಾಡಿದ್ರೆ ಸಾಕು ದೊಡ್ಡೊರಾಗ್ತಾರೇ ಅನ್ನೋದೆಲ್ಲ ತಪ್ಪು.’

– ಮಂಜುಳಾ ಸ್ಪಷ್ಟವಾಗಿ ಹೇಳಿದಳು.

‘ಮತ್ತೆ ಹೆಡ್ ಮಾಸ್ತರೂನೂ ಹೇಳಿದ್ರು…’ – ಸಿದ್ದಣ್ಣ ರಾಗ ಎಳೆದ.

‘ಏನಂತ ಹೇಳಿದ್ರು?’

‘ನಿನ್ನ ಮಗ ಹಿಂಗೆಲ್ಲ ಮಾಡಾದ್ ನೋಡಿದ್ರೆ ಅವ್ನಲ್ಲಿ ಭಾಳ ಶಕ್ತಿ ಇದ್ದಂಗೈತೆ. ಈ ಪರ್‌ಪಂಚದಾಗೆ ದೊಡ್ಡರಾಗಿರೋರೆಲ್ಲ ಹಿಂಗೇ ಏನಾರ ವಿಚಿತ್ರ ಇರ್‍ತಾ ಇತ್ತು – ಅಂಭ್ತ ಹೇಳಿದ್ರು’ ಸಿದ್ದಣ್ಣ ಉತ್ಸಾಹದಿಂದ ಹೇಳಿದ.

‘ಸರಿ ಬಿಡಿ’ ಎಂದು ಮಂಜುಳ ಸುಮ್ಮನಾದಾಗ ಸಿದ್ದಣ್ಣನಿಗೆ ಸಮಾಧಾನವಾಗಲಿಲ್ಲ.

‘ಯಾಕ್ರಮ್ಮ ಹಂಗಂತೀರಿ?’ ಎಂದು ಕೇಳಿದ.

‘ಏನೂ ಇಲ್ವಲ್ಲ? ನಿಮ್ಮ ಮಗನಲ್ಲಿ ದೊಡ್ಡ ಮನುಷ್ಯರ ಲಕ್ಷಣ ಇಲ್ಲ ಅಂತ ಹೇಳೋಕೆ ನಾನ್ಯಾರು? ನಾನು ತುಂಬಾ ಚಿಕ್ಕವಳು. ಇನ್ನೂ ಎಷ್ಟೋ ಕಲೀಬೇಕಾಗಿರೋಳು?’

‘ಯಾಕೋ ನಿಮ್ಮ ಮಾತು ಕೇಳ್ತಾ ಇದ್ರೆ. ನೀವೇ ದೊಡ್ಡರು ಅನ್ನುಸ್ತೈತಲ್ಲ?’ – ಸಿದ್ದಣ್ಣ ಮುಗ್ಧನಾಗಿ ಹೇಳಿದ.

‘ಛೇ! ಛೇ! ಎಲ್ಲಾದ್ರೂ ಉಂಟಾ’ ಎನ್ನುತ್ತ ಮಾತು ಮುಂದುವರಿಸಲು ಇಚ್ಛಿಸದೆ ಮಂಜುಳ ಮೇಲೆದ್ದಳು. ‘ಬಾ ಲಕ್ಷ್ಮಿ, ಇವತ್ತು ಏನೇನ್ ಪಾಠ ಮಾಡಿದ್ರು ಕೇಳ್ತೀನಿ’ ಎಂದು ಕರೆದು ಒಳ ಹೋದಳು.

ಸಿದ್ದಣ್ಣನಿಗೆ ಸಮಾಧಾನವಾಗಲಿಲ್ಲ. ಬೆಪ್ಪಾಗಿ ನೋಡುತ್ತ ಕೂತ.

ಇತ್ತಕಡೆ ಶಿವಕುಮಾರ್ ಬೆಟ್ಟದ ಬಳಿಗೆ ಬಂದ. ಬೆಟ್ಟಕ್ಕೆ ಸ್ವಲ್ಪದೂರದಲ್ಲಿ ಸಣ್ಣ ದಿಬ್ಬದ ಮೇಲೆ ಇದ್ದ ಮಂಟಪದ ಕಡೆ ನೋಡಿದ.

ಆ ಮಂಟಪ ಇವನನ್ನು ಕಾಡಿಸತೊಡಗಿತು. ಅದರ ಬಳಿಗೆ ಹೋಗ ಬೇಕೆಂದುಕೊಂಡ. ಯಾಕೊ ಅಳುಕಾಯಿತು. ಆದರೆ ಬೆಳದಿಂಗಳು ಇದ್ದುದರಿಂದ ಧೈರ್ಯಮಾಡಿ ಬಂದ. ಮಂಟಪದ ಸುತ್ತ ಗಿಡಗಳು ಬೆಳೆದಿವೆ. ಅದರಲ್ಲಿ ಹೂವಿನ ಗಿಡಗಳೇ ಜಾಸ್ತಿ. ಅವುಗಳೇ ಒಂದು ಆವರಣವನ್ನು ನಿರ್ಮಿಸಿವೆ. ಒಂದು ಕಡೆ ಪ್ರವೇಶಕ್ಕೆ ಇದ್ದ ಜಾಗವನ್ನು ಬಿಟ್ಟರೆ ಮಂಟಪದ ಸುತ್ತ ಗಿಡಗಳೇ ತುಂಬಿವೆ. ಒಳಗೆ ಓಡಾಡುವಷ್ಟು ವಿಶಾಲವಾದ ಆವರಣವಿದೆ. ನಡುವೆ ಸಣ್ಣದಿಬ್ಬದ ಮೇಲೆ ಕಂಬಗಳ ಮಂಟಪವಿದೆ. ಬಟಾ ಬಯಲಾಗಿರುವ ಮಂಟಪ, ಗೋಡೆಗಳಿಲ್ಲದ ಮಂಟಪ.

ಮಂಟಪದ ಪ್ರವೇಶಜಾಗದ ಬಳಿಗೆ ಬಂದ ಕೂಡಲೇ ಶಿವಕುಮಾರ್‌ ಕಿವಿಯಲ್ಲಿ ಮಧುರಗಾನದ ಅನುಭವ; ಅದರಲ್ಲಿ ತೇಲುತ್ತಾ ಹೋದಂತೆ ಇದ್ದಕ್ಕಿದ್ದಂತೆ ಕುದುರೆ ಸಪ್ಪಳ, ಕತ್ತಿಗಳ ತಾಕಲಾಟ; ಅಯ್ಯೋ ಎನ್ನುವ ಆಕ್ರಂದನ, ಹೆಣ್ಣಿನ ದುಃಖ ಆವರಿಸಿದ ಯಾತನೆ.

ಶಿವಕುಮಾರ್ ಗೆ ಅಲ್ಲಿ ನಿಲ್ಲಲಾಗದೆ ಹೊರಟುಬಿಟ್ಟ. ಹೋಗುವಾಗ ಅದೇ ಆಕ್ರಂದನ ಅಟ್ಟಿಸಿಕೊಂಡು ಬರುತ್ತಿರುವ ಅನುಭವ.

ಈತ ಮನೆ ತಲುಪುವ ವೇಳೆಗೆ ಎಲ್ಲರೂ ಮಲಗಿದ್ದರು. ಹಜಾರದಲ್ಲಿ ಹಾಸಿದ್ದ ಹಾಸಿಗೆಯ ಬಳಿ ಬಂದು, ಅಂಗಿ ಬಿಚ್ಚಿಟ್ಟು ಮಲಗಿದ. ಇನ್ನೂ ನಿದ್ದೆ ಬಾರದೆ ಇದ್ದ ಸಿದ್ದಣ್ಣ ಈತನನ್ನು ಗಮನಿಸಿದ. ಶಿವಕುಮಾರ್ ಗೆ ನಿದ್ದೆ ಬರಲಿಲ್ಲ. ಎದ್ದು ಕೂತು ತಲೆ ಹಿಡಿದುಕೊಂಡ. ಸಮಾಧಾನ ಮಾಡಿಕೊಳ್ಳಲು ಪ್ರಯತ್ನಿಸಿದ. ಕಡೆಗೆ ವಿಧಿಯಿಲ್ಲದೆ ಮಲಗಿದ. ಮಾರನೇ ದಿನದ ಕೋಟೆ ಭೇಟಿಯನ್ನು ನಿರೀಕ್ಷಿಸಿದ.
* * *

ಸಮಯಕ್ಕೆ ಸರಿಯಾಗಿ ಮಂಜುಳ, ಲಕ್ಷ್ಮಿ ಮತ್ತು ಕರಿಯಮ್ಮ ಬಂದರು. ಬೆಟ್ಟದ ಬುಡದಲ್ಲೇ ಕಾಯುತ್ತ ಕೂತಿದ್ದ ಶಿವಕುಮಾರ್‌ ಸ್ವಲ್ಪ ಉಲ್ಲಾಸವಾಗಿದ್ದ. ಮೊದಲಿನ ಸ್ಥಿತಿಗೆ ಮರಳುತ್ತಿದ್ದ. ಇದನ್ನು ಗುರುತಿಸಿದ ಮಂಜುಳಾಗೆ ಸಂತೋಷವಾಯಿತು. ಯಾಕೆಂದರೆ ಬೆಳಗ್ಗೆ ಮನೆಯಲ್ಲಿ ಈತನನ್ನು ಮಾತನಾಡಿಸಬೇಕೆಂದು ಪ್ರಯತ್ನಿಸಿದರೂ ಈತ ಮುಖಕೊಟ್ಟು ಮಾತಾಡಿರಲಿಲ್ಲ. ಬೆಟ್ಟದ ಬಳಿ ಬರುವುದೇ ಬೇಡವೆನ್ನಿಸಿತ್ತು. ಆದರೆ ಹಾಗೆ ಹೇಳಲು ಮನಸ್ಸಾಗಲಿಲ್ಲ. ಲಕ್ಷ್ಮಿಯ ಉತ್ಸಾಹಕ್ಕೆ ನೀರೆರೆಚುವ ಇಚ್ಛೆಯಿರಲಿಲ್ಲ. ಶಾಲೆಗೆ ಬಂದಾಗ ಬೆಟ್ಟಕ್ಕೆ ಹೋಗುವ ವಿಷಯ ಬಂದಾಗ ಹೆಡ್ ಮಾಸ್ಟರ್ ಪ್ರೋತ್ಸಾಹದ ಮಾತನಾಡಿದ್ದರು. ಇದೊಂದು ಚಿಕ್ಕಬೆಟ್ಟ. ಚಿಕ್ಕ ಕೋಟೆ. ಆದ್ರೆ ಈ ಊರಿಗೆ ಅದೇ ದೊಡ್ಡದು. ಅದ್ರಲ್ಲೂ ನಮ್ಮ ಶಿವಕುಮಾರ ತೋರುಸ್ತಾನೆ ಅಂದ್ಮಲೆ ಇಡೀ ಇತಿಹಾಸ ಕಣ್ಣಿಗೆ ಕಟ್ಟುತ್ತೆ’ ಎಂದಿದ್ದರು.

ಇಲ್ಲಿನ ಇತಿಹಾಸವನ್ನು ಕೇಳುವ ತವಕದಿಂದ ಬಂದಿದ್ದ ಮಂಜುಳಾಗೆ ಶಿವಕುಮಾರನ ಉಲ್ಲಾಸದಿಂದ ಉತ್ಸಾಹ ಹೆಚ್ಚಾಯಿತು. ಬೆಟ್ಟದ ಮೆಟ್ಟಲುಗಳನ್ನು ಹತ್ತುತ್ತ ‘ಈ ಬೆಟ್ಟ, ಕೋಟೆ ಯಾವ ರಾಜನದು?’ ಎಂದು ಕೇಳಿದಳು. ಶಿವಕುಮಾರ್ ‘ಹೇಳ್ತೀನಿ, ಅಷ್ಟು ಆತುರ ಆದ್ರೆ ಏನ್ ಗತಿ’ ಎಂದು ನಗುತ್ತಾ ನೋಡಿದ. ಲಕ್ಷ್ಮಿ ರಪರಪನೆ ನೆಗೆಯುತ್ತ ಮೆಟ್ಟಲು ಹತ್ತತೊಡಗಿದಳು. ‘ಮೊದ್ಲು ನೀವೂ ಆ ಥರಾ ಮಾಡಿ’ ಎಂದ ಶಿವಕುಮಾರ್. ಮಂಜುಳ ತಾನೂ ಲಕ್ಷ್ಮಿಯಂತೆ ಚಂಗನೆ ಮೆಟ್ಟಲುಗಳನ್ನು ಹತ್ತತೊಡಗಿದಳು. ಅವರಿಬ್ಬರಲ್ಲಿ ಸ್ಪರ್ಧೆಯೇರ್ಪಟ್ಟ ರೀತಿಯಲ್ಲಿ ಮೆಟ್ಟಲು ಹತ್ತಿ ವಿಶಾಲವಾದ ಒಂದು ಜಾಗದಲ್ಲಿ ನಿಂತರು.

ಶಿವಕುಮಾರ್‌ ಮತ್ತು ಕರಿಯಮ್ಮ ಅಲ್ಲಿಗೆ ಬಂದರು. ‘ಇಲ್ಲಿಂದ ಊರು ನೋಡಿ’ ಎಂದ. ಮಂಜುಳ ಒಮ್ಮೆ ದಿಟ್ಟಿಸಿದಳು. ಊರನ್ನು, ಸುತ್ತಮುತ್ತಲ ಪ್ರದೇಶವನ್ನು ನೋಡಲು ಇದು ಸರಿಯಾದ ಜಾಗವೆಂದು ಆಗ ಆಕೆಗೆ ಅನುಭವವಾಯಿತು.

ಅನಂತರ ಶಿವಕುಮಾರ್‌ ಹೇಳಿದ : ‘ನೋಡಿ ಈ ಕೋಟೆಯಲ್ಲಿ ಚಂಡೇರಾಯ ಅಂತ ಒಬ್ಬ ರಾಜ ಇದ್ದ. ಅವನದೇ ಸುತ್ತಮುತ್ತಲ ಸಾಮ್ರಾಜ್ಯ. ಅವನು ಅದೆಷ್ಟು ಪ್ರಸಿದ್ಧನಾಗಿದ್ದ ಅಂದ್ರೆ ಅವನ ಎದುರು ಯುದ್ಧ ಮಾಡೋಕೆ ದೊಡ್ಡ ದೊಡ್ಡ ರಾಜರೇ ಹೆದುರ್‍ತಾ ಇದ್ದರು. ಇವನ ಸ್ನೇಹ ಇದ್ರೆ ಸಾಕು ಅಂತ ಇತರೆ ರಾಜರು ಹಾತೊರಿತಾ ಇದ್ರು. ತಂತಮ್ಮ ಹೆಣ್ಣುಮಕ್ಕಳನ್ನ ಈತನಿಗೆ ಕೊಟ್ಟು ಸಂಬಂಧ ಬೆಳೆಸಿದೋರೇ ಜಾಸ್ತಿ. ಅದೋ ಅಲ್ನೋಡಿ, ಅದೇ ಆತನ ಅಂತಃಪುರ, ಅದರಲ್ಲಿ ಹತ್ತಾರು ವಿಶಾಲವಾದ ಕೊಠಡಿಗಳು ಇದ್ವಂತೆ’ ಎಂದು ಒಂದು ಜಾಗವನ್ನು ತೋರಿಸಿದ.

ಪ್ರತ್ಯೇಕವಾಗಿ ಕಟ್ಟಡ ಇದ್ದ ಎಲ್ಲ ಕುರುಹುಗಳೂ ಇದ್ದವು. ಅಲ್ಲಿಗೆ ಕರೆದೊಯ್ದ. ಅನೇಕ ಚಿತ್ತಾರಗಳ ಮಸುಕು ಸೌಂದರ್ಯ ಇನ್ನೂ ಕಣ್ಸೆಳೆಯುತ್ತಿತ್ತು. ಆದರೆ ಭಗ್ನಾವಶೇಷಗಳ ಮೂಲಕ ಅಂತಃಪುರದ ಸುಂದರತೆ ಮತ್ತು ಅಗಾಧತೆಯನ್ನು ಊಹಿಸಿಕೊಳ್ಳಬೇಕಿತ್ತು.

‘ಅಂತಃಪುರಕ್ಕೆ ಈ ಗತಿ ಬರಬಾದ್ದಿತ್ತು.’ ಎಂದಳು ಮಂಜುಳ.

‘ರಾಜನೇ ಇಲ್ಲದ ಮೇಲೆ ಅಂತಃಪುರ ಹೇಗಿದ್ರೇನು?’ ಎಂದ ಶಿವಕುಮಾರ್.

‘ರಾಜ ಇದ್ದಾಗಲೂ ಅಂತಃಪುರದ ಅಂತರಂಗ ಹೀಗೇ ಭಗ್ನವಾಗಿದ್ದಿರಬಹುದು. ಅಲ್ವಾ?’ – ಅಪ್ರಜ್ಞಾಪೂರ್ವಕವಾಗಿ ಮಂಜುಳ ಕೇಳಿದಳು.

‘ಅಂದ್ರೆ? ಏನ್ ನೀವು ಹೇಳ್ತಾ ಇರೋದು? ನಮ್ಮ ಚಂಡೇರಾಯ ಚಂಡಾಳ ಅಲ್ಲ.’ – ಶಿವಕುಮಾರ್ ಗುಡುಗಿದ.

‘ಛೇ! ಛೇ! ನಾನು ಚಂಡಾಳ ಅಂತ ಹೇಳಲಿಲ್ಲ. ರಾಜ ಅಂತ ಹೇಳ್ದೆ, ಅಷ್ಟೆ.’ – ಮಂಜುಳ ಚುರುಕಾಗಿ ಉತ್ತರಿಸಿದಳು.

‘ಹಾಗಂದ್ರೆ?’ – ಶಿವಕುಮಾರ್ ಪ್ರಶ್ನೆ.

ತನ್ನ ಮಾತು ಶಿವಕುಮಾರನಿಗೆ ಆಘಾತವುಂಟುಮಾಡಿದೆಯೆಂದು ಮಂಜುಳಾಗೆ ಗೊತ್ತಾಯಿತು. ಇನ್ನೂ ಕೋಟೆ ಪೂರ್ತ ನೋಡಬೇಕಿತ್ತು. ಆದ್ದರಿಂದ ವಿಷಯ ಬೆಳಸದೆ ‘ರಾಜರ ಅಂತಃಪುರ ಅಲ್ವಾ? ಯಾರಾರು ಏನೇನು ಕನಸು ಕಟ್ಟಿರ್‍ತಾರೋ? ರಾಜರು ಅವರೆಲ್ಲರ ಕನಸಿನ ಕನ್ನಡಿ ನೋಡಿ. ಅಲ್ಲಿ ಕನಸುಗಳ ಪ್ರತಿಬಿಂಬ ಆಗ್ಬೇಕು. ಅದರ ಬದಲು ಕನಸಿಗೇ ಪ್ರತಿಯಾದ ಬಿಂಬ ಇರಬಾರದು’ ಎಂದು ಏನೋ ವ್ಯಾಖ್ಯಾನ ಮಾಡಲು ಹೋಗಿ ಆತನಿಗೆ ಮತ್ತಷ್ಟು ಗೊಂದಲ ಮಾಡಿದಳು. ಆತನು ಸ್ವಲ್ಪ ಬೇಸರದಿಂದ ‘ಕನಸಿನ ವಿಷಯಕ್ಕೆ ಇನ್ನೊಂದು ಮಂಟಪ ಇದೆ. ತೋರುಸ್ತೀನಿ. ಆದ್ರೆ ನೀವು ಅದೇನೇನೋ ಹೇಳ್ತಾ ಇದ್ದೀರಲ್ಲ?’ ಎಂದು ಕೇಳಿದ. ‘ಹಾಗೇನಿಲ್ಲ. ಇದರ ಇತಿಹಾಸ ಕೇಳ್ತಾ ನಂಗೆ ಏನೇನೋ ಅನ್ನುಸ್ತಾ ಇದೆ ನೋಡಿ. ಅದಕ್ಕೆ ಮಾತು ಎಲ್ಲೆಲ್ಲೋ ಹೋಗ್ತಾ ಇದೆ. ಎಲ್ಲಾ ಈ ಕೋಟೆ ಪ್ರಭಾವ’ ಎಂದು ಮಂಜುಳಾ ಸಮಾಧಾನಿಸಿದಾಗ ಶಿವಕುಮಾರ್ ‘ಸರಿಯಾಗಿ ಹೇಳಿದಿರಿ, ಈ ಕೋಟೆ ಮಹಿಮೇನೇ ಇದು. ಇಲ್ಲಿ ಬಂದ್ರೆ ಯಾವುದೋ ಲೋಕಕ್ಕೆ ಬಂದಹಾಗೆ ಅನ್ಸುತ್ತೆ, ಬನ್ನಿ. ಅಲ್ಲಿ ರಾಣಿ ಕೊಳ ತೋರುಸ್ತೀನಿ’ ಎಂದು ಉತ್ಸಾಹದಿಂದ ಕರೆದೊಯ್ದ.

‘ರಾಣಿಕೊಳ’ ವಿಶಾಲವಾಗಿತ್ತು. ಈಗ ಅದರಲ್ಲಿ ಅಷ್ಟೇನೂ ನೀರಿರಲಿಲ್ಲ. ಇದ್ದ ನೀರೂ ಶುದ್ಧವಾಗಿರಲಿಲ್ಲ. ಆದರೂ ಅದರಲ್ಲಿ ರಾಣಿಯರು ಸ್ನಾನ ಮಾಡುತ್ತಿದ್ದರು ಎಂಬ ವಿಷಯವೇ ಅನೇಕರಿಗೆ ರೋಮಾಂಚನವುಂಟು ಮಾಡುತ್ತಿತ್ತು. ಮಳೆ ಚೆನ್ನಾಗಿ ಬಂದಾಗ ತುಂಬಿರುತ್ತಿದ್ದ ಈ ರಾಣಿಕೊಳದಲ್ಲಿ ಅನೇಕ ಯುವಕರು ಈಜಾಡಿ ಆನಂದಪಟ್ಟಿದ್ದರು. ಶಿವಕುಮಾರನೂ ಇದಕ್ಕೆ ಹೊರತಾಗಿರಲಿಲ್ಲ. ಈತನಿಗಾದರೆ ಚರಿತ್ರೆಯ ವಿವರಗಳು ಗೊತ್ತಿದ್ದವು. ಈಜುವಾಗಲೂ ಅದೇ ನೆನಪು, ಉಳಿದವರಿಗೆ ಗೊತ್ತಿದ್ದದ್ದು ರಾಣಿಯರ ಸ್ನಾನಸ್ಥಾನ ಎಂಬಷ್ಟು ಮಾತ್ರವಾದ್ದರಿಂದ ಅವರಿಗೆ ಅಷ್ಟೇ ಆನಂದ. ಶಿವಕುಮಾರನಿಗಾದರೂ ಒಬ್ಬೊಬ್ಬ ರಾಣಿಯೂ ಹೇಗೆ ಈಜಾಡಿರಬೇಕೆಂಬ ಕಲ್ಪನೆ! ಕ್ಷಣಕ್ಷಣಕ್ಕೂ ಅದೇ ಯೋಚನೆ!

ಮಂಜುಳಾಗೆ ಎಲ್ಲವನ್ನೂ ವಿವರಿಸಿದ. ಆದರೆ ತಾನು ಸ್ನಾನ ಮಾಡಿದ್ದನ್ನು ಮಾತ್ರ ಹೇಳಲಿಲ್ಲ. ಆಗ ಲಕ್ಷ್ಮಿ ಸುಮ್ಮನಿರಲಿಲ್ಲ.

‘ನಮ್ಮಣ್ಣನೂ ರಾಣಿಕೊಳದಾಗೆ ಈಜ್ ಹೊಡವ್ನೆ ಮೇಡಮ್ನೋರೆ’ ಎಂದು ಹೇಳಿಯೇಬಿಟ್ಟಳು.

‘ಹೌದಾ!’ ಎಂದು ಮಂಜುಳ ಅಚ್ಚರಿಯಿಂದ ಕೇಳಿದಾಗ ಶಿವಕುಮಾರ್ ‘ಯಾವಾಗ್ಲೋ ಒಂದೆರಡು ಸಾರಿ ಅಷ್ಟೆ’ ಎಂದು ಮುಜುಗರ ಪಟ್ಟ, ಮಂಜುಳ ಸುಮ್ಮನಿರದೆ ‘ಪರವಾಗಿಲ್ಲ, ನೀವೂ ರಸಿಕರು!’ ಎಂದು ಸಹಜವಾಗಿ ಹೇಳಿಬಿಟ್ಟಳು. ‘ಛೇ! ಛೇ! ಹಾಗೇನಿಲ್ಲ’ ಎಂದು ಆತ ನಿಜಕ್ಕೂ ನಾಚಿಕೆಯಲ್ಲಿ ನೆನೆದ. ಏನು ಮಾತಾಡಬೇಕೆಂದು ತಿಳಿಯದೆ ಮುಂದಡಿಯಿಟ್ಟ.

ಮೌನವಾಗಿ ಹೋಗುತ್ತಿರುವ ಶಿವಕುಮಾರನನ್ನು ಇವರೆಲ್ಲ ಹಿಂಬಾಲಿಸಿದರು. ಯಾರೂ ಮಾತನಾಡಲಿಲ್ಲ. ಮಂಜುಳಾಗೆ ಮೌನವನ್ನು ತಡೆಯಲು ಆಗಲಿಲ್ಲ. ಒಂದು ಜಾಗದ ಕಡೆ ನೋಡಿ, ನಿಂತು ಕೇಳಿದಳು.

‘ಈ ಜಾಗ ಏನಾಗಿತ್ತು?’

‘ಆಸ್ಥಾನವಾಗಿತ್ತು.’ – ಶಿವಕುಮಾರ್ ಚುಟುಕಾಗಿ ಉತ್ತರಿಸಿದ.

‘ಆಸ್ಥಾನದಲ್ಲಿ ಯಾರಾದ್ರು ಕವಿಗಳು ಇದ್ರಾ?’

‘ಯಾರೊ ನಿಮ್ಮಂಥೋರು ಇದ್ದಿರಬೇಕು.’

ಶಿವಕುಮಾರನ ಮಾತು ಕೇಳಿ ಮಂಜುಳ ಫಕ್ಕನೆ ನಕ್ಕಳು. ಇವಳ ನಗೆಯಿಂದ ಪ್ರೇರಿತನಾಗಿ ಆತನೂ ನಗತೊಡಗಿದ. ಬಿಗಿ ವಾತಾವರಣ ತಿಳಿಯಾಯಿತು.

ಬೆಟ್ಟದ ಮೇಲೆಲ್ಲ ನೋಡಿಕೊಂಡು ಕೆಳಗಡೆ ಬಂದರು. ಶಿವ ಕುಮಾರ್‌ ಹೇಳಿದ: ‘ಇನ್ನು ಆ ಸ್ವಪ್ನ ಮಂಟಪ ನೋಡಿದ್ರೆ ಮುಗೀತು.’

‘ಅದಕ್ಕೆ ಸ್ವಪ್ನ ಮಂಟಪ ಅಂತ ಯಾಕೆ ಹೆಸರು ಬಂತು?’ ಮಂಜುಳ ಕೇಳಿದಳು.

‘ಅದು ರಾಜನ ರಾಣಿಯರು ಬಂದು ನಿಂತು ಸುತ್ತೆಲ್ಲ ನೋಡಿ ಆನಂದ ಅನುಭವಿಸ್ತ ಇದ್ದ ಜಾಗ. ಅದ್ರಲ್ಲೂ ಕಿರಿಯರಾಣಿ ಅಲ್ಲಿಗೆ ಬಂದು ನಿಂತರೆ ಅವಳಿಗೆ ಅದೇನೇನೋ ಸ್ವಪ್ನಗಳು ಬೀಳ್ತಾ ಇದ್ದವು ಅಂತ ಹೇಳ್ತಾರೆ. ಆಕೆಯ ಹೆಸರೇ ಸ್ವಪ್ನ ಸುಂದರಿ ಅಂತ ಇದ್ದದ್ದರಿಂದ ‘ಸ್ವಪ್ನ ಮಂಟಪ’ ಅಂತ ಹೆಸರು ಬಂದಿರಬಹುದು ಅಂತ ನನ್ನ ಅಭಿಪ್ರಾಯ’ – ಶಿವಕುಮಾರ್‌ ವಿವರಿಸಿದ.

‘ಅಲ್ಲ ಕುಮಾರ್?’ -ಮಂಜುಳಾ ಮಾತನಾಡತೊಡಗಿದಳು – ‘ಬೇರೆ ರಾಣಿಯರೂ ಇಲ್ಲಿಗೆ ಬರ್‍ತಿದ್ರು ಅಂದ್ರಿ. ಅವರನ್ನೆಲ್ಲ ಬಿಟ್ಟು ಸ್ವಪ್ನ ಸುಂದರಿ ಹೆಸರಿನಿಂದ ಈ ಮಂಟಪಕ್ಕೆ ಸ್ವಪ್ನ ಮಂಟಪ ಅಂತ ಕರೀತಿರಬಹುದು ಅನ್ನೋ ಅಭಿಪ್ರಾಯ ಹೇಗೆ ಸರಿ?’

‘ನನ್ನ ಅಭಿಪ್ರಾಯಕ್ಕೆ ಆಧಾರ ಇದೆ ಮಂಜುಳ ಅದನ್ನ ಆಮೇಲ್ ಹೇಳ್ತೇನೆ. ಈಗ ಮೊದಲು ಮಂಟಪ ನೋಡೋಣ ಬನ್ನಿ.’ ಎಂದು ಶಿವಕುಮಾರ್ ಹೊರಟ. ಎಲ್ಲರೂ ಜೊತೆಗೂಡಿದರು. ಮುಂದೆ ಶಿವಕುಮಾರ್‌ ಹಿಂದೆ ಇವರು, ನಡುವೆ ಮೌನ.

ಮಂಜುಳ ತನಗೆ ಅರಿವಿಲ್ಲದಂತೆ ‘ಕುಮಾರ್’ ಎಂದಷ್ಟೇ ಕರೆದದ್ದು, ಶಿವಕುಮಾರನೂ ‘ಮಂಜುಳಾ ಅವರೆ’ ಅನ್ನೋ ಬದಲು ‘ಮಂಜುಳ’ ಎಂದಷ್ಟೇ ಕರೆದದ್ದು ಇಬ್ಬರಲ್ಲೂ ವಿಚಿತ್ರ ಸುಖ ಸ್ಪರ್ಶ ಮಾಡಿಸಿತ್ತು. ಅದನ್ನೇ ಮೆಲುಕು ಹಾಕುತ್ತಾ ಮಂಟಪದ ಬಳಿ ಬಂದರು.

ಮುಂದೆ ಹೋಗುತ್ತಿದ್ದ ಶಿವಕುಮಾರ್ ಸ್ವಪ್ನ ಮಂಟಪದ ಆವರಣವನ್ನು ಪ್ರವೇಶ ಮಾಡಿದ. ಮಂಟಪದ ಮಧ್ಯಭಾಗಕ್ಕೆ ಬಂದು ನಿಂತು ಸುತ್ತಮುತ್ತ ನೋಡಿದ.

ಸ್ವಲ್ಪ ದೂರದಲ್ಲಿದ್ದ ಮಂಜುಳ ಖುಷಿಯಾಗಿ ಹೆಜ್ಜೆ ಹಾಕುತ್ತ ಮಂಟಪದ ಆವರಣದ ಪ್ರವೇಶಕ್ಕೆ ಬಂದಳು. ಇನ್ನೇನು ಹೆಜ್ಜೆಯಿಡ ಬೇಕು, ಶಿವಕುಮಾರನ ತಾಯಿ ಕೂಗಿಕೊಂಡಳು.

‘ಹೋಗ್ಬೇಡ, ಹೋಗ್ಬೇಡಮ್ಮ ಒಳೀಕೆ.’

ಮಂಜುಳ ಅಚ್ಚರಿಯಿಂದ ತಿರುಗಿ ನೋಡಿದಳು. ಕರಿಯಮ್ಮ ಮತ್ತೆ ಹೇಳುತ್ತಿದ್ದಳು. ‘ಶಿವಕುಮಾರ, ನೀನಾದ್ರು ಹೊರೀಕ್ ಬಾರೊ. ಆಯಮ್ಮ ಬೇಕಾದ್ರೆ ಎಲ್ಲಾ ನೋಡಿ ಹೊರೀಕ್ ಬಂದ್‌ಮ್ಯಾಲೆ ನೀನ್ ಹೋಗೀವಿಂತೆ.’

ಆಗ ಶಿವಕುಮಾರ್ ಅಲ್ಲಿಂದಲೇ ಕೂಗಿ ಹೇಳಿದ – ‘ಮಂಜುಳ, ಒಳ್ಗಡೆ ಬರ್‍ಬೇಡಿ ಅಲ್ಲೇ ನಿಂತ್ಕೊಳ್ಳಿ’

ಮಂಜುಳಾಗೆ ಅರ್ಥವೇ ಆಗಲಿಲ್ಲ. ಇವರು ಯಾಕೆ ಹೀಗೆ ಹೇಳುತ್ತಿರಬಹುದೆಂದು ಯೋಚಿಸುವ ವೇಳೆಗೆ ಕರಿಯಮ್ಮ ಓಡಿ ಬಂದು ಮಂಜುಳಾ ಕೈ ಹಿಡಿದು ಪ್ರವೇಶಗೊಳ್ಳುವುದನ್ನು ತಡೆದಳು. ಆನಂತರ ಶಿವಕುಮಾರ್ ಅವಳ ಬಳಿಗೆ ಬಂದ. ಅವಳ ಪ್ರವೇಶವನ್ನು ತಡೆಯಲು ಮಂಟಪದ ಹಜಾರದಿಂದ ಎಗರಿದವನು ಅದೇ ರಭಸದಲ್ಲಿ ಬಂದು ‘ಸದ್ಯ ಒಳ್ಗಡೆ ಬರಿಲ್ಲವಲ್ಲ! ಹಾಗೇನಾದ್ರು ಬಂದಿದ್ರೆ ನಮ್ಮಮ್ಮ ಸುಮ್ನೆ ಇರ್‍ತಿರ್‍ಲಿಲ್ಲ’ ಎಂದು ನಗುತ್ತಾ ಹೇಳಿದ.

‘ಸಾಕ್ ಸುಮ್ನಿರೊ. ಹಿಂದೆ ಮುಂದೆ ನೋಡ್ದೆ ಒಳೀಕ್ ಹೋಗ್ಬಿಟ್ಟ ಮಹಾರಾಜ! ಮೊದ್ಲು ಎಲ್ಲಾ ವಿಷ್ಯ ಹೇಳ್ಬೇಕು. ಇಲ್ದಿದ್ರೆ ಹೆಂಗ್ ಗೊತ್ತಾಗ್ತೈತೆ ಮೇಡಮ್ಮನಿಗೆ. ಹೇಳು ಮತ್ತೆ’ ಎಂದು ಕರಿಯಮ್ಮ ಬೇಸರದಿಂದ ತರಾಟೆಗೆ ತೆಗೆದುಕೊಂಡಳು.

ಮಂಜುಳಾಗೆ ಏನೊಂದೂ ತಿಳಿಯಲಿಲ್ಲ. ತಬ್ಬಿಬ್ಬಾದಂತೆ ನಿಂತಳು. ಆಮೇಲೆ ಶಿವಕುಮಾರನೇ ಹೇಳಿದ –

‘ಹೋಗಿ ಮಂಜುಳ, ನೀವು ಈಗ ಒಳ್ಗಡೆ ಹೋಗಿ ಎಲ್ಲಾ ನೋಡ್ಕಂಡ್ ಬನ್ನಿ. ಆಮೇಲೆ ನಾನ್ ಹೋಗ್ತಿನಿ.’

‘ಇದೆಲ್ಲ ಏನ್ ಕುಮಾರ್? ನಂಗೊಂದೂ ಅರ್ಥ ಆಗ್ತಿಲ್ಲ?’ – ಮಂಜುಳ ಕೇಳಿದಳು.

‘ಇದೆಲ್ಲ ಹೀಗೇನೆ ಮಂಜುಳ, ಗಂಡ ಹೆಂಡ್ತಿ ಅಲ್ದೆ ಇರೋರು ಇದರ ಒಳಗಡೆ ಒಟ್ಟಿಗೆ ಹೋಗಬಾರದು.’

‘ಯಾಕೆ?’

‘ಯಾಕೆ ಅಂದ್ರೆ ಏನ್ ಹೇಳಲಿ? ಈ ಸ್ವಪ್ನಮಂಟಪದ್ದೇ ಒಂದು ಚರಿತ್ರೆ ಇದೆ.’

‘ಚರಿತ್ರೆನೊ, ಐತಿಹ್ಯಾನೊ.’

‘ಏನೋ ಒಂದು, ಒಟ್ನಲ್ಲಿ ನೀವು ಒಳ್ಗಡೆ ಇದ್ದಾಗ ನಾನ್ ಬರೋಹಾಗಿಲ್ಲ. ನಾನ್ ಇದ್ದಾಗ ನೀವು ಬರೋಹಾಗಿಲ್ಲ.’

‘ಅದನ್ನೇ ನಾನ್ ಕೇಳಿದ್ದು, ಯಾಕೆ ಈ ನಿರ್ಬಂಧ ಅಂತ?’

‘ಅದನ್ನ ಆಮೇಲ್ ಹೇಳ್ತೀನಿ. ಇನ್ನೇನ್ ಹೊತ್ತು ಮುಳುಗುತ್ತೆ. ಬೇಗ ನೋಡ್ ಬಂದ್ಬಿಡಿ.’

ಶಿವಕುಮಾರ್ ಇಷ್ಟು ಹೇಳಿದ ಮೇಲೆ ಒತ್ತಾಯಿಸುವುದು ಸರಿಯಲ್ಲವೆಂದು ಭಾವಿಸಿ ಮಂಜುಳ ಒಬ್ಬಳೇ ಒಳಹೋದಳು. ಕರಿಯಮ್ಮ, ಲಕ್ಷ್ಮಿ ಹಿಂಬಾಲಿಸಿದರು. ಮಂಜುಳ ಮಂಟಪ ಮಧ್ಯದಲ್ಲಿ ನಿಂತು ಶಿವಕುಮಾರನ ಕಡೆ ನೋಡಿದಳು. ಆತ ಹೊರಗೆ ದೂರದಲ್ಲಿ ಕೂತಿದ್ದ.

ಯಾಕೆ ಈ ನಿರ್ಬಂಧ ಎಂಬ ಪ್ರಶ್ನೆ ಆಕೆಯನ್ನು ಕಾಡಿಸತೊಡಗಿತು. ಹೇಗಿದ್ದರೂ ಆಮೇಲೆ ಹೇಳುತ್ತಾರೆಂದು ಸಮಾಧಾನಿಸಿ ಕೊಂಡು ಮಂಟಪದ ಆವರಣದಿಂದ ಹೊರಬಂದಳು. ಹೊರ ಬರುತ್ತಿದ್ದಂತೆಯೇ ಒಂದು ಹೆಣ್ಣಿನ ವಿಕಟ ನಗು ಕೇಳಿಸಿತು. ಮಂಜುಳ ತಬ್ಬಿಬ್ಬಾದಳು. ಅತ್ತಿತ್ತ ನೋಡಿದಳು. ಶಿವಕುಮಾರನ ಕಡೆ ನೋಡಿದಳು. ಯಾರೂ ಕಾಣಲಿಲ್ಲ. ಆತನ ಮುಖದಲ್ಲಿ ಆತುರ ಕಾಣುತ್ತಿತ್ತು.

‘ಬೇಗ ಬನ್ನಿ ಹೆದ್ರಿಕೋಬೇಡಿ.’ ಎಂದು ಒತ್ತಾಯಪೂರ್ವಕವಾಗಿ ಕರೆದ.

ಮಂಜುಳ ಹಿಂದುಹಿಂದಕ್ಕೆ ನೋಡುತ್ತಲೇ ಬಂದಳು.

ಈಗ ನಗೆ ನಿಂತಿತ್ತು.

ಶಿವಕುಮಾರನ ಬಳಿಗೆ ಬರುವ ವೇಳೆಗೆ ಮತ್ತೊಮ್ಮೆ ನಗು ಕೇಳಿಸಿ ಬೆಚ್ಚಿದಳು. ಹಿಂತಿರುಗಿ ನೋಡಿದಳು.

ಮಂಟಪದ ಆವರಣದೊಳಗಿನ ಮರಗಿಡಗಳ ಮರೆಯಿಂದ ಒಬ್ಬ ಯುವತಿ ಕಾಣಿಸಿಕೊಂಡಳು!

ಆ ಯುವತಿಯ ತಲೆ ಕೆದರಿತ್ತು. ಸೀರೆ ಹರಿದಿತ್ತು. ಮುಖದ ತುಂಬ ಯಾತನೆ ತುಂಬಿತ್ತು. ಸಂಕಟವೇ ಸ್ಫೋಟಗೊಂಡು ನಗುವಾದಂಥ ಭಾವ ನೆಲೆಸಿತ್ತು! ಕಂಕುಳಲ್ಲಿ ಹಳೇ ಸೀರೆಯಲ್ಲಿ ಸುತ್ತಿದ ಒಂದು ಗಂಟು ಇತ್ತು!

ಮಂಜುಳ ಆ ಯುವತಿಯ ಕಡೆಗೆ ನೋಡುತ್ತಿದ್ದಂತೆ ಆಕೆ ಈಕೆಯನ್ನು ನುಂಗುವಂತೆ ನೋಡುತ್ತ, ಕಂಕುಳಲ್ಲಿದ್ದ ಗಂಟನ್ನು ಮುಟ್ಟಿ ಮುಟ್ಟಿ ದಿಟ್ಟಿಸುತ್ತ, ಸೀದಾ ಮಂಟಪದ ಮಧ್ಯಭಾಗಕ್ಕೆ ಬಂದು ನಿಂತಳು.

‘ಈಕೆ ಯಾರು?’ ಮಂಜುಳ ಕೇಳಿದಳು.

‘ಆಕೆ ಒಬ್ಬ ಹುಚ್ಚಿ.’ – ಶಿವಕುಮಾರ್ ಉತ್ತರಿಸಿದ.

‘ಸುಳ್ಳು! ಸುಳ್ಳು! – ಆ ಯುವತಿ ಕಿರುಚಿದಳು – ‘ನಾನು ರಾಜಕುಮಾರಿ! ಈ ಮಂಟಪ, ಆ ಕೋಟೆ ಎಲ್ಲಾ ನಂದೇ!’

ಮಂಜುಳಾ ಶಿವಕುಮಾರನ ಮುಖ ನೋಡಿದಳು. ಆತ ‘ಆಕೆ ಹುಚ್ಚಿ ಮಂಜುಳಾ ಅವರೆ. ಆಕೆ ವಿಷಯ ಎಲ್ಲಾ ನಮ್ಮಮ್ಮ ಹೇಳ್ತಾರೆ. ಬನ್ನಿ’ ಎಂದು ಒತ್ತಾಯಿಸಿದ.

ಆ ಯುವತಿ ‘ನಾನು ಹುಚ್ಚಿ ಅಲ್ಲ. ರಾಜಕುಮಾರಿ! ನಾನೇ ರಾಜಕುಮಾರಿ’ ಎಂದು ಕೂಗುತ್ತಿದ್ದಳು.

ಇವರು ಊರಕಡೆಗೆ ಹೋಗುತ್ತಿದ್ದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಡನಾಟ
Next post ವಿಧವೆಯೊಬ್ಬಳ ಕಣ್ಣು ಒದ್ದೆಯಾದೀತೆಂದು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…