ಚರ್ಮದಾಚೆಗೆ ವರ್ಣದಾಚೆಗೆ
ಶಾಂತಲಿಂಗೇಶ್ವರ ಶಿವಾ
ಜೀರ್ಣ ಕಾಷ್ಟದ ಚೂರ್ಣ ಶಿಲ್ಪದ
ಆಚೆಯಾಚೆಯ ಶುಭ ಶಿವಾ

ಜನನದಾಚೆಗೆ ಮರಣದಾಚೆಗೆ
ಮಾಯವಾದಾ ವರಶಿವಾ
ಆದಿ ಮಧ್ಯಾ ಅಂತ್ಯದಾಚೆಗೆ
ಜಾರಿ ಹೋದಾ ಹರಶಿವಾ

ಶಬ್ದದಾಚೆಗೆ ಅರ್ಥದಾಚೆಗೆ
ಚಾಚಿ ಅಡಗಿದ ಶಿವಶಿವಾ
ನಾನು ನೀನು ಅವನ ಆಚೆಗೆ
ಗೂಢ ಗುಮ್ಮಟ ಗುರುಶಿವಾ

ಆಚೆ ಆಚೆಯ ಬಿಟ್ಟು ಈಚೆಗೆ
ನನ್ನ ಅಪ್ಪಿದೆ ಶಿವಶಿವಾ
ಕೈಯ ಹಿಡಿದೆ ಮಡಿಲು ತುಂಬಿದೆ
ತುತ್ತು ಉಣಿಸಿದೆ ಪ್ರಿಯಶಿವಾ
*****