ಗಿಡಿಗಿಡಿ ಗಿಡಿಗಿಡಿ ಗಿಡಿಗೆಂವ್
ಬುಡುಬುಡು ಬುಡುಬುಡು ಬುಡುಗೆಂವ್
ಬುಡುಬುಡ್ಕಿ ನುಡಿಯೊಂದ ಕೇಳಾರಿ ||ಪಲ್ಲ||

ಕಾಲೊಂದ ಬಂದೇತಿ ಗುರುಕಾಲ ಶುಭಕಾಲ
ಮುಂದೀನ ಇಸವೀಯು ಬಲುಜೋರ
ನಿಮದೆಲ್ಲ ಕಾರ್‍ಭಾರ ಮನಿಮುಂದ ದರಭಾರ
ಮನಿಯಾಗ ಸರಕಾರ ಜೋರ್‍ದಾರ ||೧||

ಹೆಂಡತಿ ಹುಕಮತ್ತು ನೋಡತಿ ಮಸಲತ್ತು
ನಿನವೈರಿ ಸಬಕಾರ ಸುಣಗಾರ
ದೀಡ್ದಮಡಿ ಕೊಟ್ಟರ ದೀಡಾಳು ಬಂಗಾರ
ಕೊಡದೋರ ಮನೆದೇವ್ರು ಸಮಗಾರ ||೨||

ಈಟೆಲ್ಲ ದಿನಮಾನ ಕಾಟಿತ್ತ ಘಾಟಿತ್ತ
ಕಿಟಿಕಿಟಿ ಶನಿಕಾಟ ಕಾಡಿತ್ತ
ಇನ್ಭಾರಿ ಬಲುಭಾರಿ ನೋಡರಿ ಮಕಮಾರಿ
ಸುಳ್ಳಂದ್ರ ಬುಡಬುಡಕಿ ಮ್ಯಾಲಾಣೀ ||೩||

ಪಡಿಹುಗ್ಗಿ ವಲಿಮ್ಯಾಗ ಕೊಡಹೊನ್ನು ತಲಿಮ್ಯಾಗ
ಮಂಚಕ್ಕ ಮಾರಂಭಿ ಬರತಾಳ
ನಿಮವೈರಿ ಚಂಡ್ರಾಮಿ ಚೂರ್ಚೂರು ಆಗ್ತಾಳ
ಗಂಡ್ರಾಮಿ ಗೂರ್ಗೂರಿ ಸಾಯ್ತಾಳ ||೪||

ಬುಡಬುಡಿಕಿ ಮಾತಂದ್ರ ಸುಳ್ಳಂದ್ರ ಸಾಯ್ತೀರಿ
ಇನತನ ಹುಸಿವೊಂದು ಹುಟ್ಟಿಲ್ಲ
ಕೆಟ್ಟದ್ದು ಸಾಯ್ತೇತೆ ಸತ್ಯದ್ದು ಬರತೇತೆ
ಕಲಿಹೆಂಗ್ಸು ಕುಣಿಯಾಗ ಕೊಳಿತೇತೆ ||೫||
*****