ಸೀಮಾಂತ ಪ್ರದೇಶದಲಿ ಕರಗುವ
ಶಿಲ್ಪವ ಕಂಡೆ ನಾನು
ಸರ್ವದೂರದಲಿ ಹಿಮ ಪ್ರತಿಮೆ
ಯಾತನಾಮಯ ಹಿಮಗಂಧ ಸಂಗೀತ
ಅಗಾಧ ಹಿಮ
ಮಾಯಾ ಮಹಿಮೆ.
ಉದುರುವ ಕಲೆ ಶಿಲ್ಪಕೆ ಸಿದ್ಧಿಸಿತೆಂತು
ಶುಭ್ರವಿಭೋರ ಕಣ ಸ್ಪಂದನ
ರೆಪ್ಪೆ ತೆರವಾದಾಗ
ಹರಡಿದ ವಿಹಗಗಣ
ಇನ್ನೂ ನನಗೆ ಹೊಳೆಯದಿರೆ
ರೆಪ್ಪೆಯಿಲ್ಲದ ದೃಷ್ಟಿಯನೀಗ
ಈ ಹಿಮದಲ್ಲಿ ತುಂಬಿ ಬಿಡಲೆ.
ನೋಡುವವು ಬಹುಶ
ತಳಮಳಿಸುವ ಚಿಟ್ಟೆಯ ಮುಖ ಶೋಧಿಸಿ
ಸೀಸ ಹಣಗಳಲಿ ನೋವಿನ
ಹಿಮಪೂರ್ಣಾಲಯ ಮರೆಸಿ
ಸುರಕ್ಷಿತವಾಗಿ ಅಡಗಿಸಿ ಇನ್ನೂ
ನನ್ನ ಕಣ್ಣಗೊಂಬೆಯಲಿ ತೂಗುವುದು.
ಹಗುರಗಾಳಿಯ ಲಯಕ್ಕೆ
ನನ್ನ ಸಂದರ್ಭೋಚಿತ
ಅಸ್ತಿತ್ವದಿಂದ
ಹೇಗೆ ಕಳೆಯಿತು
ಗ್ರೇಸನ ಪ್ರಾರ್ಥನೆಯ ಚಂದ್ರಹಾಸ
ಸಾಯಂಕಾಲ ಚಂದ್ರೋತ್ಸವದಿಂದ
ನಿನಗೆ ಮೆಚ್ಚಿದ ಒಂದು
ಅಪಾರ ಭಾವ ಸತ್ಯ
ಬಹುಶ…..
ಬಹುಶ ಇನ್ನೂ ಕರಗುವ ಹಿಮಕಣ
ಕಣ್ಣಗೊಂಬೆಯಲ್ಲಿ
ಸರ್ವತ್ರ ಉದುರುವ
ಈ ಹಿಮದಾತಂಕಗಾನ
ದೂರದ ಶಾಪದ ನೋವಿನ ಗೀತ
ನನಗಿದು ಶಾಪ ವ್ಯಾಕುಲ ವರದಾನ
ನಿನ್ನ ಮನದಂತಹ
ನನಗೆಂದೂ ಹೊಂದಿಕೆಯಾಗದ ಕವನ.
*****
ಮೂಲ: ನೀಲಿಮಾ ಮೋಡಕ್
(ಮರಾಠಿ)