ನಾವೆಲ್ಲಾ ಟ್ಯೂಬ್‌ಲೈಟುಗಳು
ವಿವಿಧ ಕಂಪೆನಿಗಳ ಲ್ಯಾಬುಗಳಲ್ಲಿ
ಹಲವಾರು ‘ಅಗ್ನಿ ಪರೀಕ್ಷೆ’ಗಳಿಗೆ ಒಳಗಾಗಿ
ಅತ್ಯುತ್ತಮವೆನಿಸಿಕೊಂಡು ಹೊರ ಬಂದವರು
ನಾವು… ಟ್ಯೂಬ್‍ಲೈಟುಗಳು.
ಒಮ್ಮೆ ಖರ್ಚು ಮಾಡಿ ಹಾಕಿಸಿದರಾಯಿತು
ವರ್ಷಗಳು, ದಶಕಗಳು ಕಳೆದರೂ
ಬರ್‍ನ್ ಆಗುವ ಚಿಂತೆಯಿಲ್ಲ.
ಮಾಮೂಲಿ ಬಲ್ಬುಗಳಿಗಿಂತ ಕಡಿಮೆ
ವಿದ್ಯುತ್ ಬಳಸುತ್ತೇವೆ ಮತ್ತು
ಎಷ್ಟೋ ಹೆಚ್ಚು ಬೆಳಕನ್ನು ನೀಡುತ್ತೇವೆ.
ನಾವು… ಟ್ಯೂಬ್‌ಲೈಟುಗಳು.
ಅರಮನೆಯಾಗಲಿ, ಸೆರಮನೆಯಾಗಲಿ
ರಾಜ ಬೀದಿಯಾಗಲಿ, ಕೊಳೆಗೇರಿಯಾಗಲಿ
ಎಲ್ಲೆಡೆ ಸೇವೆಗೆ ನಾವು ಸದಾ ಸಿದ್ಧ.
ಹಾಗೆ ನೋಡ ಹೋದರೆ ಕಾರ್ಯ ಸ್ಥಳ
ಆರಿಸಿಕೊಳ್ಳಲು ನಾವು ಸ್ವತಂತ್ರರಲ್ಲ ಬಿಡಿ.
ಕಾಡೇನು, ನಾಡೇನು ಎಲ್ಲೆಡೆ ದುಡಿಯುವವರು
ನಾವು… ಟ್ಯೂಬ್‌ಲೈಟುಗಳು.
ನಾವೆಷ್ಟು ಹೊಗಳಿಕೊಂಡರೂ ನೀವು
ನಮ್ಮನ್ನು ತೆಗಳದೆ ಬಿಡುವುದಿಲ್ಲ.
ಸಂಜೆ ನಾವು ಬೇಗ ಹತ್ತದಿದ್ದರೆ
ಅದು ನಮ್ಮ ತಪ್ಪೇ? ನಾವೆಷ್ಟು
ಒಳ್ಳೆಯ ಗುಣಮಟ್ಟದವರಾದರೇನು?
ನಮ್ಮ ವ್ಯವಸ್ಥೆಯೇ ಹಾಗಿದೆಯಲ್ಲ
“ವೋಲೇಜಿ”ಲ್ಲದೆ ನಮಗೇನು ಬೆಲೆ?
ಎಷ್ಟಾದರೂ ನಾವು…. ಟ್ಯೂಬ್‌ಲೈಟುಗಳು.
*****
೦೮-೦೮-೧೯೮೮