ಎನ್ನ ಮನ ಪಾತಾಳಕ್ಕೆ ಜಾರುತ್ತಿದೆ
ಕಾಮ ಕ್ರೋಧ ಮೈಲಿಗೆಯಿಂದ ಸೋರುತ್ತಿದೆ
ಮನದ ಅಂಬರ ಪಾಪ‌ಅಂಟಿ ಹರಕಾಗಿದೆ
ಆಧಾರವಿಲ್ಲದೆ ಮನಮಂದಿರ ಮುರಕಾಗಿದೆ

ಯಾವದೋ ಕ್ಷಣಗಳವು ರಕ್ಕಸದಂತೆ ಬಾಚುತ್ತಿವೆ
ಮೇಲಿಂದ ಮೇಲೆ ನುಂಗಲು ಜೀವ್ಹೆ ಚಾಚುತ್ತಿವೆ
ಅನನ್ಯ ಜನುಮಗಳಲ್ಲೂ ಭೋಗಿಸಿ ಭೋಗಿಸಿವೆ
ಈ ತನುವಿಗೆ ಭವದ ಜಾಡ್ಯ ರೋಗಿಸಿವೆ

ಎಂತಹ ಕಠೋರ ವೈರಿ ನನ್ನಲ್ಲೆ ಅಡಗಿ
ನನ್ನನ್ನೊ ಶೂಲಕ್ಕೇರಿಸುವಂತೆ ತನು ನಡಗಿ
ಇನ್ನೊ ಬೇಡ ಕೈ ಮುಗಿವೆ ಮನವೆ ನಿನಗೆ
ನನಗೆ ನನ್ನ ಪಾಡಲಿ ಬಿಡು ಬೇಡುವೆ ನಿನಗೆ

ಸುಖದ ಆಭಾಸ ನನ್ನಲ್ಲಿ ನಿತ್ಯ ಮೂಡಿಸುವೆ
ನನಗೆ ನೀನು ನಿನ್ನಂತೆ ಏಕೆ ಆಡಿಸುವೆ
ಬೇಡೇನಗೆ ಜನುಮ ಮರಣಗಳ ಜಂಜಾಟ
ಮಾಣಿಕ್ಯ ವಿಠಲನಿಗೆ ಮಾಡಬೇಡ ನಿ ಗುಂಜಾಟ
*****