ಹಗಲಲ್ಲೇ ಮುಗಿಲು ಕಪ್ಪಾಗಿ
ಕತ್ತಲಾವರಿಸಿದ ಹಾಗೆ ಈ ಕುರ್ಚಿ
ಸಿಕ್ಕಿದವರಿಗೆ ಸೀರುಂಡೆಯಾದಾಗ
ಕುರ್ಚಿಯ ಕಣ್ಣಿಗೆ ಹುಣ್ಣುಹತ್ತಿ
ಜನರ ಮೇಲೆ ಝಳಪಿಸುವ
ಕುರುಡು ಕತ್ತಿ.

ಕೆಲವರು-
ಸುಪ್ಪತ್ತಿಗೆಯ ಸುಕುಮಾರಸ್ವಾಮಿಗಳು
ಆಕ್ಷತೆಯೂ ಕಲ್ಲು, ಹೂವೆಂಬುದು ಹಾವು
ಕರುಳಲ್ಲಿ ಮುರಿದ ಮುಳ್ಳುಗಳ ನೋಡದ
ರಾಜ ಸುಖ ಆದೀತು ಹೇಗೆ
ನಿಜದ ಸುಖ?

ಇನ್ನು ಕೆಲವರು-
ತೆಂಗಿನಕಾಯಿ ಧೂಪ ದೀಪ ಧುರೀಣರು
ದಕ್ಕದೆ ಹೋದಾಗ ಹುಳಿದ್ರಾಕ್ಷಿ ನರಿರಾಯರು
ಸರ್ವಸಂಗ ಪರಿತ್ಯಾಗಿಯ ಫೋಜಿನಲ್ಲೇ
ಹೊಟ್ಟೆಯೊಳಗಿನ ಉರಿ ಬಾಯಿಗೆ ತರುತ್ತಾರೆ;
ಸಿನಿಕ ಸಾಮ್ರಾಜ್ಯದ ಸಿಂಹಾಸನದಲ್ಲಿ ಕೂತು
ಕ್ಷಣಿಕ ತತ್ವದ ವಿರಾಗಿಯಾಗುತ್ತಾರೆ;

ಕುರ್ಚಿಯೆಂದರೆ ಕಿರೀಟವಲ್ಲ ಒಳತೋಟಿ
ಬಟ್ಟೆಗೆ ಬೇಕಾದ ನೂಲಿನ ರಾಟಿ
ಚಿಟ್ಟೆ ಚಿತ್ತಾರ ಬಿಡಿಸುವ ಬದಲು
ಹಾವಿನ ಬಾಯ ಕಪ್ಪೆಯಾದರೆ
ಹುಣ್ಣಿಮಯೇ ಅಮಾವಾಸ್ಯೆ.

ಕಾಣಬೇಕು ಕುರ್ಚಿಯ ಕಣ್ಣಿಗೆ-
ರೆಕ್ಕೆಸುಟ್ಟ ಕನಸುಗಳಲ್ಲಿ
ಸೀದ ರೊಟ್ಟಿಯ ಬದುಕು;
ಹೂಬಿಟ್ಟ ಮೂಳೆಗಳಲ್ಲಿ ಧಗ್ಗನೆ
ಹಬ್ಬಿದ ಕಾಳ್ಗಿಚ್ಚು;
ಬೂದಿಯಲ್ಲಿ ಬಿದ್ದ ದಳಗಳು
ನಡುಗುತ್ತಿರುವ ನಾಳೆಗಳು.

ಆಗಬಾರದು ಕುರ್ಚಿಯಲ್ಲಿ ಕೂತವರು
ಕುರ್ಚಿಗಿಂತ ಕುಬ್ಜರು.
ಕೂತರೂ ಕೂರದಂತೆ
ಅತ್ತಿತ್ತ ಹಾರದಂತೆ
ತಳದ ತಳಮಳಕ್ಕೆ ತಣ್ಣೀರು ಎರಚದಂತೆ
ಕಣ್ಣೀರು ಒರೆಸುವ ಕರುಳಾದರೆ
ಕುರ್ಚಿಯಾಗುತ್ತದೆ ಹೃದಯ
ಪ್ರಜಾಪ್ರಭುತ್ವಕ್ಕೆ ಅಭಯ.
*****