ನಾನಾಗ ಪಿ. ಯು. ಸಿ ಓದಿ ರಜೆಯಲ್ಲಿ ಊರಿಗೆ ಬಂದಿದ್ಡೆ. ಇದ್ದಕ್ಕಿದ್ದಂತೆ ಪಕ್ಕದ ಮನೆಯ ಯುವಕ ಓಡಿಬಂದು, ಚಂದ್ರಣ್ಣ ನಮ್ಮ ತಾಯಿಗೆ ದೆವ್ವ ಬಡಿದು ಕೊಂಡಿದೆ. ಬೇಗ ಬಂದು ಬಿಡಿಸಬೇಕು ಎಂದು ಹೆದರಿಕೆ ಧ್ವನಿಯಿಂದ ಹೇಳಿದ. ಏಕೆಂದರೆ, ಆಗ ನಾನು ಒಲ್ಲದ ದೇವರ, ಇಲ್ಲದ ಮಾಟಗಾರನಾಗಿದ್ದೆ. ಇಂಥಹ ಸಣ್ಣ – ಪುಟ್ಟ ಕೇಸುಗಳು ನನ್ನ ಬಳಿ ಬರುತ್ತಿದ್ದವು. ನಾನು ಆಗಲೇ ಮನಶಾಸ್ತ್ರವ ಅಧ್ಯಯನ ಮಾಡಿ, ಮಾನಸಿಕ ಕ್ಷೋಭೆ ಬಂದಾಗ ಏನಾಗುತ್ತದೆ? ಮನಸ್ಸು ಶಾಂತವಾಗಿದ್ದಾಗ ಏನಾಗುತ್ತದೆ? ಎಂಬ ಸತ್ಯವನ್ನು ಅರಿತುಕೊಂಡಿದ್ದೆ. ಹೀಗಾಗಿ ಅವರ ಮನೆಗೆ ಹೋದೆ.

ಇನ್ಮೇಲೆ ಮನೆಯಲ್ಲಿ ಆ ಯುವಕನ ತಾಯಿ “ಹಾ … ಆ ಹೂ .. ಊ” ಎಂದು ಕಿರುಚಾಡುತ್ತಿದ್ದರು. ನಾನು ಹಿತ್ತಲು ಮನೆಯ ಸತ್ಯವ್ವ, ನನಗೆ ಒಂದು ಮಣ ಅನ್ನ ಮಾಡಿ ಊಟಕ್ಕಿಡಬೇಕು” ಎಂದು ಕಿರುಚಾಡುತ್ತಿದ್ದರು, ಮನೆ ಎಲ್ಲಾ ತುಂಬಿದ ಶಬ್ದ ಮಾಲಿನ್ಯದಿಂದ ತಾಯಿಗೆ ಏನೋ ಆಗಬಹುದೆಂಬ ಭಯ ಮಕ್ಕಳಲ್ಲಿ ಹುಟ್ಟಿತ್ತು. “ನನ್ನನ್ನು ಗುರುತಿಸಿದ ಆ ತಾಯಿ, ಗುರುತಿಸಲಾರದಂತೆ, ನಾಟಕವಾಡಿದ್ದು, ನನಗೆ ತಿಳಿಯಿತು. ಯಾವ ಮಂತ್ರವಾದಿಯನ್ನು ಕರೆಸಿದರೂ… ಏನು ಮಾಡಕ್ಕಾಗಲ್ಲ. ಈ ಮನೆಯಲ್ಲಿ ನಾನು ಗೂಟ ಹೊಡ್ಕೊಂಡು ಕುಂತಿದ್ದಿನಿ.” ಎಂದು ಅಬ್ಬರಿಸುತ್ತಿದ್ದರು. ನಾನು ಯಾವ ಮಂತ್ರವಾದಿಯಲ್ಲ, ಮಾಟಗಾರನಲ್ಲ. ಒಂದು ರೀತಿ ಮನಸ್ಸನ್ನು ಅಧ್ಯಯನ ಮಾಡುವ ವ್ಯಕ್ತಿ ಎಂದೆ. ತಡಮಾಡದೇ ಆ ಯುವಕನಿಗೆ ಒಂದು ಬಾರುಕೋಲು ಕೊಡು ಇಲ್ಲಿ.. ಎಂದು ಹೇಳಿದೆ. “ಹೇಗಾದರೂ ಮಾಡಿ ಓಡಿಸಿಬಿಡು ಚಂದ್ರಣ್ಣ” ಎಂದ. ನಾನು ಆ ಬಾರುಕೋಲನ್ನು ಮೇಲಕ್ಕೆ ಎತ್ತಿ, ಆ ದೆವ್ವ ಬಡಿದುಕೊಂಡಿದೆ ಎಂದು ಹೇಳುವ ಆ ತಾಯಿಗೆ ಚಟಾರ್ … ಚಟಾರ್ … ಎಂದು ಎರಡು ಏಟು ಕೊಟ್ಟು, ಆಮೇಲೆ ಗಾಳಿಯಲ್ಲಿ ಎರಡು ಏಟನ್ನು ಧಬಾಯಿಸಿದೆ. ಶಬ್ದ ಭಯಂಕರವಾಗಿ ಎದೆ ಗುಂಡಿಗೆಯನ್ನು ನಡುಗಿಸಿದಂತಾಯಿತು. ಶಬ್ದವನ್ನು ಕೇಳಿದ ಆ ದೆವ್ವದ ಭ್ರಮೆಯೊಳಗಿದ್ದ ಆ ತಾಯಿ ಹಾ .. ಆ . ಹೂ .. ಊ . ಎಂದು ಹಾರಾಡುತ್ತಾ, ಧ್ವನಿಯನ್ನು ನಿಧಾನವಾಗಿ ಕ್ಷೀಣಿಸುತ್ತಾ, ಅಂಗಾಂಗಗಳಲ್ಲಿ ಶಕ್ತಿಯನ್ನು ನಿಧಾನವಾಗಿ ಕುಗ್ಗಿಸಿಕೊಳ್ಳುತ್ತಾ, ಉಸಿರು ಹಾಕಿಕೊಂಡು ಮಲಗಿಬಿಟ್ಟರು.

“ಎನ್ ಆಯಿತು ನಮ್ ತಾಯಿಗೆ ಸತ್ತೋಗಿಬಿಟ್ರಾ?” ಎಂದು ಆ ಯುವಕ ಹೆದರಿಕೊಂಡು ಕೇಳಿದ. “ಇಲ್ಲ ಏನೂ ಆಗಿಲ್ಲ. ಒಂದು ಚರಿಗೆ ನೀರು ಕೊಡ್ರಿ ಇಲ್ಲಿ ಎಲ್ಲಾ ಸರಿ ಹೋಗುತ್ತೆ” ಎಂದು ಹೇಳಿ, ತರಿಸಿಕೊಂಡು ಹ್ರಾಂ … ಹ್ರೂಂ.. ಎಂದು ಸುಳ್ಳು ನಟನೆ ಮಾಡುತ್ತಾ… ಅವರ ಮುಖ ಮತ್ತು ದೇಹದ ಮೇಲೆ ಸಿಂಪಡಿಸಿದೆ.
ನಿಧಾನವಾಗಿ ಆ ಯಮ್ಮಾ… ಎದ್ದು, ಕುಳಿತುಕೊಂಡು “ನನಗೇನಾಗಿತ್ತು? ಚಂದ್ರಣ ಯಾವಾಗ್ ಬಂದೆ ನೀನು? ಚಾ…. ಮಾಡಿ ಕೊಡ್ತಿನಿ ಕುಂತ್ಕೋ….” ಎಂದು ಒಳಗೆ ಹೋದರು. ಈ ಎಲ್ಲಾ ದೃಶ್ಯಗಳನ್ನು ನೋಡಿ, ಖುಷಿಗೊಂಡ ಮನೆಯವರು, ನನಗೆ ಧನ್ಯತೆಯನ್ನು ಹೇಳಿ ನಮಸ್ಕರಿಸಿದರು. “ಹ್ಯಾಗಿದೆಲ್ಲಾ… ನಮ್ಮಮ್ಮನ ಮೈ ಒಳಗೆ ಬಂದ ದೆವ್ವನ್ನ ಓಡಿಸಿದ್ರಿ… ಚಂದ್ರಣ್ಣ?” ಎಂದು ಕೇಳಿದರು. ನಾನು ಅದಕ್ಕೆ ಲೋಕಾಭಿರಾಮವಾಗಿ ನಕ್ಕು, ಅದೆಲ್ಲಾ ನನ್ನ ಅಘೋರವಾದ ಮಂತ್ರ ಶಕ್ತಿಯಿಂದ ಎಂದು ಹೇಳಿ, ಅವರಿಗೆ ಸುಮ್ಮನಿರಿಸಿ, ಮನೆಗೆ ಬಂದೆ. ನನ್ನ ಯಾವ ಮಂತ್ರ ಶಕ್ತಿಯಿಂದಲೋ… ದೇವಶಕ್ತಿಯಿಂದಲೋ…. ತಪಶ್ಯಕ್ತಿಯಿಂದಲೋ… ಅಲ್ಲವೇ ಅಲ್ಲ. ನಾನವರಿಗೆ ಹೇಳಿದ್ದು ನೆಪ ಮಾತ್ರಕ್ಕೆ. ಸತ್ಯ ಹೇಳಬೇಕೆಂದರೆ, ಇದೆಲ್ಲವೂ ಮನಶಾಸ್ತ್ರಕ್ಕೆ ಸಂಬಂಧಿಸಿದ ವಿಷಯ. ಅಶಕ್ತ ಮನಸ್ಸಿನೊಳಗೆ ಯಾವುದಾದರೂ ಒಂದು ಸಮಸ್ಯಾತ್ಮಕ ಆವಾಹನೆಯು ಉದ್ರೇಕಗೊಂಡಾಗ, ಮನಸ್ಸು ಸಂಚಯಿತಗೊಳ್ಳುತ್ತದೆ. ಆಗ ಹೇಗೇಗೋ… ಮಾತಾಡಬೇಕು, ಹ್ಯಾಗ್ಯಾಗೋ ಉಚ್ಚರಿಸಬೇಕು ಎಂದೆನಿಸುತ್ತದೆ. ದೇಹದಲ್ಲಿರುವ ಶಕ್ತಿ‌ಎಲ್ಲಾ ಒಂದೆಡೆ ಸೇರಿ ಏನೆಲ್ಲಾ ಪ್ರದರ್ಶನ ಕಾರ್ಯವನ್ನು ಮಾಡಿಸಲು ಪ್ರಯತ್ನಿಸುತ್ತದೆ. ಇದೆಲ್ಲಾ ಮಾನಸಿಕ ಭ್ರಮೆಯ ವಾಸ್ತವಿಕ ಪರಿಸ್ಥಿತಿಯಾಗಿದೆ.

ಇಂಥಹ ಸಂದರ್ಭದಲ್ಲಿ ಮಾನಸಿಕ ಸ್ಥಿರತೆಯನ್ನು ಕಂಡು ಭ್ರಮೆಗೊಳಗಾಗಿದ್ದ ವ್ಯಕ್ತಿಗೆ ಬೇರೊಬ್ಬ ವ್ಯಕ್ತಿಯಿಂದ ಶಬ್ಬವಾಗಲೀ, ಪೆಟ್ಟಾಗಲೀ ಬಿದ್ದಾಗ ಚಂಚಲಗೊಂಡ ಮತ್ತು ಅಸ್ಥಿರಗೊಂಡ ಮನಸ್ಸು ಸುಸ್ಥಿರಗೊಂಡು ಏಕತಾನತೆಗೆ ಬರುತ್ತದೆ. ಮಾನಸಿಕ ಭ್ರಮೆಗೆ ಒಳಗಾಗಿದ್ದ ಆ ಹೆಂಗಸು / ಗಂಡಸು ನೋಡಿರದ ದೆವ್ವದ ಕಲ್ಪನೆಯನ್ನು ಆಹ್ವಾನಿಸಿಕೊಂಡು, ದೆವ್ವದಂತೆ ಭ್ರಮಾಲೋಕನದಲ್ಲಿದ್ದಾಗ, ಅದನ್ನು ಏಕದಂ ಜಾಗೃತಗೊಳಿಸಲು ಏಟು ಕೊಟ್ಟಾಗ ಆ ಮನಸ್ಸು ಆಗ ಸುಸ್ಥಿರಗೊಂಡು ಮಾಮೂಲಿನಂತೆ ಆಗುತ್ತದೆ. ಇದು ನನ್ನ ದೃಷ್ಟಿಯಲ್ಲಿ ದೆವ್ವ ಬಿಡಿಸುವ ಕ್ರಿಯೆ, ಎಂದು ಹೇಳಬಹುದು. ನಾನು ತಿಳಿದುಕೊಂಡ ಸತ್ಯ ಇಷ್ಟೆ. ಇದರಲ್ಲಿ ಯಾವ ಮಂತ್ರವೂ ಇಲ್ಲ. ತಂತ್ರವೂ ಇಲ್ಲ. ಮಣ್ಣಂಗಟ್ಟಿಯೂ ಇಲ್ಲ.
*****

ಅನುಭವಿಸುವುದು
ಅನುಭವವಾದರೆ,
ಆ ಅನುಭವವನ್ನು ಆನಂದಿಸುವುದು
ಅನುಭಾವವಾಗುತ್ತದೆ.