ಗೆಳೆಯ ರಹೀಮನ ಮನೆಯಲ್ಲಿ
ಕುಟ್ಟಿದ ಮೆಹಂದಿಗೆ ಹಪಾಹಪಿಸಿ
ಕಾಡಿ ಬೇಡಿ ಇಸಿದುಕೊಳ್ಳುತ್ತಿದ್ದೆ.
ಕೈಬಣ್ಣ ಕೆಂಪಗಾದಷ್ಟು
ಗುಲಾಬಿ ಅರಳುತ್ತಿತ್ತು ಮನದಲ್ಲಿ.
ಪತ್ರ ಹೊತ್ತು ತರುವ ಇಸೂಬಸಾಬ್
ಬಂದಾಗಲೆಲ್ಲಾ ಚಾ ಕುಡಿದೇ
ಹೋಗುತ್ತಿದ್ದ..
ಅಂಗಳದ ತುಂಬೆಲ್ಲಾ
ಅತ್ತರಿನ ಪರಿಮಳ ಬಿಟ್ಟು.
ರಮಜಾನ್ ದಿನದ ಸಿರ್‍ಕುರಮಾ
ಘಮಘಮಲು ನಮ್ಮನೆಯಲ್ಲೂ
ತುಂಬಿಕೊಳ್ಳುತ್ತಿತ್ತು.
ಬಂಡಿಹಬ್ಬದ ಬೆಂಡು ಬತ್ತಾಸು,
ಕಜ್ಜಾಯಗಳೆಲ್ಲ
ಅವರ ತಿಂಡಿಡಬ್ಬ ತುಂಬಿಕೊಳ್ಳುತ್ತಿತ್ತು.
ದೊಡ್ಡವರಾದೆವು ನೋಡಿ
ಮನೆ ಜೋಪಡಿಗಳಿಲ್ಲ ಈಗ
ಬರಿಯ ಬಂಗೆಲೆಗಳೆದ್ದಿವೆ.
ಮನೆಮುಂದಿನ ಗಿಡಮರಗಳಲ್ಲಿ
ಹೆಣಗಳು ನೇತಾಡುತ್ತಿವೆ
ಹಿತ್ತಲ ಕೆರೆಯಲ್ಲಿ ಕೊಳೆತ ಶವದ
ವಾಸನೆಗೆ ನೈದಿಲೆಗಳು ಕಮರಿವೆ.
ನಿತ್ಯ ಹುಟ್ಟುವ ಸೂರ್ಯ ಇಂದು
ಪೂರ್ವಕ್ಕೆ ಏಳುತ್ತಾನೆ
ಆಂಜನೇಯನಿಗೆ ಅಡ್ಡ ಬಿದ್ದರೆ
ಆಯಸ್ಸು ಮಿಗುತ್ತದೆ.
ಅಮ್ಮ ಚಿಕ್ಕಂದಿನಲ್ಲಿ ಹೇಳಿದ್ದು
ಸುಳ್ಳಾಗುತ್ತಿದೆ-
ಬತ್ತಿ ಬೆಳಗಲು ಹೋದವ ಹೆಣವಾದದ್ದು ಕೇಳಿ.
ಗಂಟೆ ಜಾಗಟೆ, ಜಾ ನಮಾಜ್ ಎಲ್ಲೆಂದರಲ್ಲಿ
ಉರಿದು ಹೋದವು. ಕೆಂಡ ಇಂಗಳವಾದವು
ಆ ಕೈಗಳೆಲ್ಲ
ಈಗ ಕತ್ತಿ ತಲವಾರಗಳನ್ನೆ ತೊಟ್ಟಿವೆ.
ರಹೀಮನ ಮನೆಯ ಸಿರಕುರಮಾ
ನಮ್ಮನೆಯ ಬೆಂಡು ಬತ್ತಾಸು ಪರಸ್ಪರ
ಮಾತು ಬಿಟ್ಟಿವೆ, ತಪಶೀಲು ಜಾರಿಯಾಗಿದೆ.
*****