ಒಲೆಗಳು ಬದಲಾಗಿವೆ ಹೊಸ ರೂಪ,
ಆಡಂಬರದ ಬಿಂಕ ಬಿನ್ನಾಣ ಮೈತೆತ್ತು
ಉರಿ ಬದಲಾಗಿದೆಯೇ?
ಜ್ವಾಲೆಗೆ ಹಳದಿ ಕೆಂಪು ಮಿಶ್ರಿತ
ಹೊಳಪು ಕಂದಿದೆಯೇ?
ಕಳೆಕುಂದಿದರೆ
ಬೇಯಿಸುವ ಕೈಗಳು
ಕೆಲಸ ಕಳೆದುಕೊಳ್ಳುತ್ತದೆ
ಕೈಬಳೆಯ ನಿಟ್ಟುಸಿರ ಗಾಳಿಯೂ
ದೀರ್ಘವಾಗುತ್ತದೆ.
ಹಸಿದ ಹೊಟ್ಟೆಗಳು
ಬೆಂಕಿಯುಗುಳುತ್ತವೆ.
ಎಳೆಗೂಸಿನ ಹಾಲು ಸಮ ಉಷ್ಣತೆಯ
ಹೀರದೆ ರೋಗಾಣು ವೈರಾಣುಗಳು
ಪ್ರಾಣ ಹೀರುತ್ತವೆ.
ಹೋಟೆಲ್ಲಿನ ಗಲ್ಲಾ ಪೆಟ್ಟಿಗೆಗೆ
ನುಸಿ ಮುತ್ತುತ್ತವೆ.
ಆಗಲಿ ಬೇಕಾದರೆ ಒಲೆಯ
ನಮೂನೆ ಚಿಮಣಿ ತೊಟ್ಟು
ಧೂಮನಿವಾರಕ ಹೊತ್ತು
ಫ್ಯಾಶನ್ನಿನ ಒವನ್ ಆಗಿ
ಬದಲಾಗದೇ ಇರಲಿ ಉರಿಯ
ಒಡಲು ಅದೇ ಬೆಂಕಿ ಕಡಲು
*****
Latest posts by ನಾಗರೇಖಾ ಗಾಂವಕರ (see all)
- ಕತ್ತಲ ಗೂಡಿನ ದೀಪ - February 27, 2021
- ಮಲ್ಲಿಗೆಯೆಂಬ ಪರಿಮಳ ಸಾಲೆ - February 20, 2021
- ಊರುಗೋಲಿನ ಸುತ್ತ - February 13, 2021