ಗಚ್ಚು ಮಾಳಿಗೆ ಮೇಲೆ, ಕಲ್ಲು ಹಾಸಿಗೆ ಕೆಳಗೆಲ್ಲ
ಎಡಬಲಕು ಇಹುದು ರಂಜಿಸುವ ರಂಗು ಮಿರುಗುವ ಗೋಡೆ
ಸದ್ದಿಲ್ಲ ! ಕಂಡು ಕಂಡಿಲ್ಲ !! ಬಂದು ಬಂದಿಲ್ಲ !!!
ಯಾವೆಡೆಯಿಂದಿಳಿಯುವಿರಿ ನೀವು? ನಿಮ್ಮ ನಾ ನೋಡೆ

ಮಿಣಿಕೊಮ್ಮೆ, ಇಣಿಕೊಮ್ಮೆ ಮಿಂಚುವಿರಿ
ಕಣವೇನು! ಕ್ಷಣದೊಳ್ ಕಾಣವೀ ಮುಂದಣ ಕಣ್ಣು
ಅಡಗುವಿರಿ, ಓಡುವಿರಿ, ನೀವೇನೋ ಆಡುವಿರಿ?
ಮನೆಯೆಲ್ಲಿ? ಇರವೆಲ್ಲಿ ನಿಮಗೆ? ಇಲ್ಲವೇ ಹಸಿವೆಗಣ್ಣು ?

ಹಿರಿದೊಂದು, ಕಿರಿದೊಂದು ಹಾರುತಿರುವಿರೆನಿತೊ
ಬರಿಗಣ್ಣು ಅರಿಯದಿಹ ಮರಿಮಕ್ಕಳೆನಿತಿಹರೋ!
ನಿಲ್ಲುವಿರಿ, ನಡೆಯುವಿರಿ, ಓಡುವಿರೆನಿತೋ!
ಬಂದಿರೆಲ್ಲಿಂದ ? ಹೋಗುವರಿನ್ನೆಲ್ಲಿಗೆ ? ನೀವೂ ಅರಿಯದವರೊ

ಗಾಳಿಯಲಿ ಹಾರುವಿರಿ; ಗೋಡೆಯ ಹಾಯುವಿರಿ
ನೋವಾಗದೆ ನಿನಗೆ, ತಪ್ಪಿತು ದಾರಿ ನಿಮಗೆ
ಈ ಕೋಣೆ; ಆ ಕೋಣೆ! ಹೇಗೆ ಹೊರಳುವಿರಿ?
ಬಲ್ಲವರು ನೀವಿರಲು ಕೇಳುವುದೇನು ನಾ ತಮಗೆ !
*****