ಅದೇ ಕವಿತೆ
ಹರಿತ ಕತ್ತಿಯಂತೆ
ಸ್ವಾತಿ ಮುತ್ತಿನಂತೆ
ಚಿತ್ತಿ ಮಳೆಯಂತೆ
ಕರಾವಳಿ ಲಗ್ನದಂತೆ
ಬದಲಾಗದ ವ್ಯವಸ್ಥೆಯಂತೆ.
*
ಅದೇ ಕವಿತೆ,
ಅದೇ ಕಪ್ಪಿಟ್ಟ ಮುಖ
ಬಡಿದಾಡೋ ಕೈ ಕಾಲು,
ಉರಿಯುತ್ತಿರುವ ಕಣ್ಣುಗಳು
ಮುಳುಗಡೆಯಾಗಿರುವ ಊರು ಕೇರಿಗಳು
ಈ ಪ್ರಗತಿ ವಾಕರಿಕೆ ಭರಿಸಿದೆ.
*
ಅದೇ… ಜನ.. ದನ..
ಮನ.. ದವನ!
ದಾವನೆಲ!
ಕೋಮುಗಲಭೆ ಓಣಿ ಓಣಿಗೆ-
ಬರೀ ಕಾಗದದ ಗದ್ದೆ
ಮಾತೂ ಮಾರೂದ್ದ
ಉದ್ಧಾರ ತೂತು ಬಿದ್ದ ಗಡಿಗೆ!
*
ಅದೇ ಬಿಟ್ರಿಷರ ಕಾರುಬಾರು
ಹೊಸ ಸೀಸೆಯಲ್ಲಿ, ಹಳೇ ಮದ್ಯದಂತೆ
ಹಳೆ ಗಾಯಕ್ಕೆ ಹೊಸ ಬರೆ
ಹೆಸರು ಬೇರೆ ಬೇರೆ!
ಅದೇ ಕಳೆ ಕಿತ್ತಷ್ಟು, ಸಿಬಿರಿನಷ್ಟು…
ಹಗಲು ಗಂಡರ ವೇದಾಂತ
ರಾತ್ರಿ ಮಿಂಡರ ರಾದ್ಧಾಂತ
ಮಳೆ ಬೆಳೆ ಪುಢಾರಿಯಂತೆ.
*
ಅದೇ ಹಗಲು ರಾತ್ರಿ,
ಬೆದೆ ಬಿದ್ದ ಗೌಡ
ಜೀತಕ್ಕಿರುವ ಹೈದ
ಸೂತಕದಿ ಬಿಚ್ಚದ ಕದಗಳು
ಕೊತ ಕೊತ ಕುದಿವ ಕೊಳೆಗೇರಿಗಳು
ವರಸೆ ಬದಲಿಸಿದ ಮಿಂಡರೀಗ
ಜಾಗತೀಕರಣ, ಖಾಸಗೀಕರಣ
ಉದಾರೀಕರಣದ ತಲೆ ಹಿಡುಕರು!
ಏಡ್ಸ್ ಮಾರಿಗೆ ಶಾಮೀಯಾನವಾದವರು!
ಪ್ರತಿಭೆ, ಮೆರಿಟ್‌ಗೆ, ಏಣಿ ಹಾಕಿ-
ಮೀಸಲಾತಿಗೆ ‘ಕೋ’ ಕೊಟ್ಟ ಬ್ರಹ್ಮಾಚಾರಿಗಳು!
*
ಇನ್ನೂ ಬರಲಿಲ್ಲ ಕಪ್ಪು ಸೂರ್‍ಯ…
ಅರಳಲಿಲ್ಲ ಕಪ್ಪು ಗುಲಾಬೀ…
ಅದೇ ಕವಿತೆ, ಹಣತೆಯಂತೇ…
ಬದಲಾಗದ ಜನತೆಯಂತೇ…
ಮೇವು ತಿಂದು ‘ನಮಲುಗರಿವಾ’… ದನಗಳಂತೇ…
ಅಂದು: ಈಸ್ಟ್ ಇಂಡಿಯಾ ಕಂಪನಿ!
ಇಂದು: ಖಾಸಗಿ ಕಂಪನಿಗಳು!
ಈ ದೇಶದ ಕೀಲಿಕೈ… ಹೊರಗಿನವರೇ…
ಕಾದು ನೋಡಿ…
ಆಳಿಸಿಕೊಳ್ಳಲು ಲಾಯಕ್ಕು!
*****