ಗಾಳಿಗೆ ತೂಗಾಡುವ
ಬಿದಿರ ಚಿಂತೆ ಇಂತು
ಗಾಳಿಯನೇ ಆಡಿಸುವ ಬಾಳಾಗುವುದೆಂತು?

ಸಿಕ್ಕಿಬಿದ್ದೆ ಮೆಳೆಯಲಿ
ಮೈಯೆಲ್ಲಾ ಮುಳ್ಳು
ಬಾ ಎನ್ನದ, ಕೋ ಎನ್ನದ ಬಾಳಿದು ಹಸಿ ಸುಳ್ಳು

ಪಾದ ಹುಗಿದು ಮಣ್ಣಲಿ
ಕನಸಾಡಿದೆ ಕಣ್ಣಲಿ
ಕಾಯುತಿರುವೆ ಕಡಿವವನಿಗೆ ಬಾಳಾಗಲು ನಿಜದಲಿ

ಕಡಿದುರುಳಲು ‘ನಾನು’,
ಭೂಮಿ ಮತ್ತು ಬಾನು
ಆಲಿಂಗಿಸಿ ನನ್ನೊಳಗೇ ಹರಿಯದೇನು ಜೇನು?

ಏಳು ಕಣ್ಣು ಮೂಡಿ
ಒಳಸೇರಿದ ಗಾಳಿ
ಏಳು ಸ್ವರಗಳಾಗಿ, ಹಾಡಾಗುವ ಮೋಡಿ

ಕೊಳಲಾಗುವ ಆಸೆಗೆ
ಬಿದಿರಾದವ ನಾನು
ಬಿದಿರ ಕೊಳಲು ಮಾಡಿ, ಹಾಡ ನುಡಿಸು ನೀನು
*****