ಮಂಥನ – ೩

swirling-light-1209350_960_720Unsplashಗುಡು ಗುಡು ಸದ್ದು ನಡುವೆ ಛಟಾರ್ ಎಂಬ ಸಿಡಿಲಿನ ಸದ್ದಿಗೆ ಜೊತೆಯಾಗಿ ಪಳ್ಳನೆ ಮಿಂಚುವ ಬೆಳಕು ಪಟಪಟ ಹನಿಗಳ ಸಿಡಿತ ಜೋರಾಗಿ ಭರ್ ಅಂತಾ ಮಳೆ ಅರಂಭವಾಯ್ತು. ಕಿಟಕಿಯಿಂದಲೇ ಸಿಡಿಯುತ್ತಿದ್ದ ಮಳೆ ಹನಿಗೆ ಮೊಗವೊಡ್ಡಿ ರಸ್ತೆಯುದ್ದಕ್ಕೂ ದೃಷ್ಟಿ ಹರಿಸಿದಳು. ಕಣ್ಣು ಸೋತವೇ ವಿನಃ ಅನುವಿನ ಸುಳಿವಿಲ್ಲ. ಮಳೆ ಬರೋ ಸೂಚನೆ ಗೊತ್ತಾದ ಕೂಡಲೇ ಮನೆ ಸೇರ್ಕೊಬಾರದೆ ಮಗಳು. ಸ್ವಲ್ಪವೂ ಜವಾಬ್ದಾರಿ ಇಲ್ಲಾ. ಇನ್ನು ಅವರು ಬಂದರೆ ಕೂಗಾಡುವುದಂತೂ ಗ್ಯಾರಂಟಿ. ಇತ್ತ ಮಗಳಿಗೂ ಹೇಳುವಂತಿಲ್ಲ. ಅತ್ತ ಗಂಡನಿಗೂ ಹೇಳುವಂತಿಲ್ಲ. ಅನುವಿಗಾದರೂ ಅರ್ಥವಾಗಬಾರದೆ ತನ್ನ ಪರಿಸ್ಥಿತಿ. ಅಪ್ಪ ಬರೋಕೆ ಮುಂಚೆ ಮನೆ ಸೇರೋದು ಬಿಟ್ಟು ಎಲ್ಲಿ ಹೋದಳು. ಆಫೀಸಿನಿಂದ ೨೦ ನಿಮಿಷ ಸಾಕು ಕೈನೀಲಿ ಬರೋಕೆ. ಬಸ್ ಕಾಯೋಕೆ ಆಗಲ್ಲ ಅಂತ ಹಟಮಾಡಿ ಸ್ಕೂಟರ್ ತಗೊಂಡಿದ್ದಾಳೆ. ಈ ಮಳೇಲಿ ಬರುವಾಗ ಎಲ್ಲಾದ್ರು ಸ್ಕಿಡ್ ಆದ್ರೆ. ಅಯ್ಯೋ ದೇವರೆ ಅವಳು ಲೇಟಾಗಿ ಬಂದ್ರೂ ಪರವಾಗಿಲ್ಲ. ಇವತ್ತು ಅವರು ಏನು ಅಂದ್ರೂ ಚಿಂತೆ ಇಲ್ಲಾ ಅವಳಿಗೆ ಮಾತ್ರ ಏನೂ ಆಗದೇ ಇರಲಿ. ಮನಸ್ಸಿನಲ್ಲಿಯೇ ದೇವರನ್ನು ಬೇಡಿಕೊಂಡಳು ನೀಲ.

ಹೆಚ್ಚು ನಿಲ್ಲಲಾರದೆ ಮಳೆಯ ಆರ್ಭಟಕ್ಕೆ ಹೆದರಿ ಕಿಟಕಿ ಮುಚ್ಚಿ ಒಳಬಂದು ಕುಳಿತಳು. ಮನಸ್ಸು ಆತಂಕಗೊಂಡಿತ್ತು. ಯಾವತ್ತೂ ಹೀಗೆ ತಡ ಮಾಡಿದವಳಲ್ಲ. ಐದೂವರೆಗೆ ಮನೆ ತಲುಪಿಬಿಡುತ್ತಿದ್ದಳು. ಈಗಾಗ್ಲೇ ಆರಾಯ್ತು, ಈ ಮಳೆ ಬೇರೆ. ಮೋಡಕ್ಕೆ ಕತ್ತಲೆ ಅವಚಿಕೊಂಡು ಬಿಟ್ಟಿದೆ. ಮಳೆ ಜೋರಾಯ್ತು, ಅಂತ ಎಲ್ಲಿ ಮರದ ಕೆಳಗೆ ನಿಂತಿರುತ್ತಾಳೋ. ಸಿಡಿಲು ಬೇರೆ ಬಡಿತಾ ಇದೆ. ಮಳೆ ಸಿಡಿಲು ಇದ್ದಾಗ ಮರದ ಕೆಳಗೆ ನಿಲ್ಲಬೇಡ ಅಂತ ಸಾವಿರ ಹೇಳಿದ್ದೀನಿ. ನಾ ಹೇಳಿದ್ದನ್ನೇ ಕೇಳ್ತಾಳಾ ಅವಳು. ಅವಳದೆ ಅವಳಿಗೆ. ಅಪ್ಪನ ಪ್ರೀತಿಯೂ ಇಲ್ಲವಲ್ಲ ಅಂತ ನಾನು ಕೊಟ್ಟ ಸಲಿಗೆ. ಪ್ರೀತಿ ಜಾಸ್ತಿ ಆಗಿದೆ. ಬರ್ಲಿ ಇವತ್ತು. ಹೀಗೆ ಯೋಚಿಸುತ್ತಾ ಕೂತ್ರೆ ನನ್ನ ತಲೆ ಕೆಡೋದಂತೂ ಗ್ಯಾರಂಟಿ. ಎಷ್ಟು ಹೊತ್ತಿಗಾದ್ರೂ ಬರಲಿ ಆಂದುಕೊಳ್ಳುತ್ತಾ ಪುಸ್ತಕ ಹಿಡಿದು ಕುಳಿತಳು. ಓದುತ್ತಾ ಓದುತ್ತಾ ಪುಸ್ತಕದಲ್ಲಿ ಮುಳುಗಿ ಹೋದಳು.

ಪುಸ್ತಕ ಓದುತ್ತ ಮೈಮರೆತಿದ್ದವಳಿಗೆ ಫೋನ್ ಕಿರುಗುಟ್ಟಿ ಎಚ್ಚರಿಸಿತು. ಸಮಯ ನೋಡಿದಳು. ಅಗ್ಲೆ ಏಳು ಗಂಟೆಯಾಗಿದೆ. ಅನು ಇನ್ನು ಬಂದಿಲ್ಲವಲ್ಲ ಎಂದುಕೊಳ್ಳುತ್ತಲೇ ಫೋನೆತ್ತಿಕೊಂಡಳು.

“ಹಲೋ ಆಂಟಿ. ಅನು ಇದ್ದಾಳಾ” ಅನುವಿನ ಗಳತಿಯ ಪ್ರಶ್ನೆ.

ಮಗಳದ್ದೇ ಇರಬೇಕು ಎಂದುಕೊಂಡಿದ್ದವಳಿಗೆ ಕೊಂಚ ನಿರಾಶೆಯಾಗಿ “ಇಲ್ಲಮ್ಮ ಇನ್ನೂ ಬಂದಿಲ್ಲ” ಉತ್ತರಿಸಿದಳು ನೀಲಾ. “ಸರಿ ಅವಳು ಬಂದ ಮೇಲೆ ಮಾಡ್ತೀನಿ” ಎಂದಳು.

ಕರೆಗಂಟೆ ಸದ್ದಾಯಿತು. ಫೋನಿಟ್ಬು ಲಗುಬಗೆಯಿಂದ ಬಂದು ಬಾಗಿಲು ತರೆದಳು. ಒಳ ಬಂದ ಜಗದೀಶ ಒಳಗೆಲ್ಲ ಒಮ್ಮೆ ಕಣ್ಣಾಡಿಸಿ “ಎಲ್ಲೆ ನಿನ್ನ ಮಗಳು ಇನ್ನೂ – ಬಂದಿಲ್ವ. ನೀನು ಹೀಗೆ ಅವಳನ್ನು ಹೋದ ದಾರಿಗೆ ಬಿಟ್ಕೊಂಡು ಬಾ. ಒಂದು ದಿನ ಯಾವನ ಜೊತೆನಾದ್ರೂ ಓಡಿಹೋಗ್ತಾಳೆ. ಅಗ ನೋಡುವಿಯಂತೆ” ವ್ಯಂಗ್ಯವಾಗಿ ಇರಿದ ಪತಿಯ ಮಾತುಗಳಿಂದ ಘಾಸಿಗೊಳಗಾದಳು. “ಯಾಕ್ರಿ ಹಾಗಂತೀರಾ” ಧ್ವನಿಯಲ್ಲಿ ನೋವು ಇಣುಕಿತು.

ಅವಳ ಮಾತಿಗೆ ಉತ್ತರ ಕೊಡುವ ಗೋಜಿಗ್ಹೋಗದೆ ರೂಮಿಗೆ ನಡೆದುಬಿಟ್ಟ. ಗಂಡ ಹೋದ ದಿಕ್ಕಿನಲ್ಲೇ ನೋಡುತ್ತ ನಿಟ್ಟುಸಿರು ಬಿಟ್ಟಳು.

ಫೋನು ಹೊಡೆದುಕೊಂಡಿತು. ತಕ್ಷಣವೇ ರಿಸೀವರ್ ಎತ್ತಿ ಹಲೋ ಎಂದಳು.

‘ಅಮ್ಮನಾ. ಅಮ್ಮ ನಾನು ಈವತ್ತು ಮನೆಗೆ ಬರಲ್ಲ. ಸುಶಿ ಮನೇಲಿ ಇವತ್ತು ಯಾರೂ ಇಲ್ವಂತೆ. ಒಬ್ಳೆ, ನನ್ನ ಜೊತೆಯಲ್ಲಿ ಇರು ಅಂತಾ ಪೋನ್ ಮಾಡಿದಳು. ಹಾಗಾಗಿ ಅವಳ ಮನೆಗೆ ಬಂದಿದ್ದೀನಿ. ಅಲ್ಲಿಂದಲೇ ಅಫೀಸಿಗೆ ಹೋಗ್ತೀನಿ. ಸರಿನಾ.”

ಅಲ್ವೆ ಅನು. ಅಲ್ಲಿಗೆ ಹೋಗ್ತಿದ್ದೀನಿ ಅಂತಾ ಅಫೀಸಿನಿಂದಲೇ ಫೋನ್ ಮಾಡೋಕೆ ಏನಾಗಿತ್ತು. ಈಗಾಗ್ಲೆ ಎಂಟು ಗಂಟೆ. ನೀನಿನ್ನೂ ಬಂದಿಲ್ವಲ್ಲ ಅಂತಾ ಯೋಚ್ನೆ ಅಗಿತ್ತು. ನೀನು ಯಾವಾಗ ಜವಾಬ್ದಾರಿ ಕಲಿಯೋದು. ಅವರು ಬೇರೆ ನೀನು ಬಂದಿಲ್ಲ ಅಂತಾ ಏನೇನೋ ಮಾತಾಡಿದರು. ನಿನ್ನಿಂದ ನಾನು ಅವರತ್ರ ಮಾತು ಕೇಳೋ ಹಾಗೆ ಆಯ್ತು” ಸಿಟ್ಟಿನಿಂದ ಪ್ರಾರಂಭವಾದ ಮಾತು ಅಳುವಿನಲ್ಲಿ ಮುಕ್ತಾಯವಾಗಿತ್ತು.

“ಏನಂದ್ರೂ ನಿನ್ನ ಗಂಡ, ಬರೀ ಬೈಯೋಕೆ ಮಾತ್ರ ನನ್ನ ನೆನಪಾಗುತ್ತೇನೂ. ನಾನೇನು ಚಿಕ್ಕ ಮಗು ಅಲ್ಲಾ ಹೊತ್ತಾಗಿದೆ ಅಂದ್ರೆ ಎಲ್ಲೋ ಹೋಗಿರ್ತೀನಿ ಅಂತಾ ತಿಳ್ಕೊ. ನೀನೂ ಒಂದೊಂದ್ಸಲ ನಿನ್ನ ಗಂಡನ ಥರಾನೇ ಅಡ್ತೀಯಾ. ನಿಮ್ಮ ಮನೆಗೆ ಬರೋಕೇ ಬೇಸರ.”

“ಏನೇ ಫೋನಿನಲ್ಲೇ ಎಲ್ಲಾ ಮಾತಾಡ್ತಾ ಇದ್ದೀಯಲ್ಲ” ಆತಂಕಗೊಂಡಳು.

“ಸುಶ್ಮಿತಾಗೂ ಗೊತ್ತು ಬಿಡು ನಮ್ಮನೆ ವಿಷಯ ಎಲ್ಲ” ನೀರಸವಾಗಿ ನುಡಿದು ಫೋನಿಟ್ಟು ಬಿಟ್ಟಾಗ ಕಣ್ಣುಗಳಿಂದ ಧುಮುಕುತ್ತಿದ್ದ ಕಣ್ಣೀರನ್ನು ಒರೆಸಿಕೊಳ್ಳುತ್ತಾ ನಿಧಾನವಾಗಿ ರಿಸೀವರನ್ನು ಸ್ವಸ್ಥಾನದಲ್ಲಿಟ್ಟು ರೂಮಿನತ್ತ ನಡೆದಳು.

ಜಗದೀಶ ಆಗಲೇ ಗೊರಕೆ ಹೊಡೆಯುತ್ತಿದ್ದ. ಊಟ ಮಾಡದೆ ಮಲಗಿಬಿಟ್ಟರಲ್ಲ ಅಂತ ಆಂದುಕೊಂಡರೂ ಮೂಗಿನ ತನಕ ಕುಡಿದು ಬಂದಿರುವಾಗ ಹಸಿವಿಗೆ ಜಾಗವೆಲ್ಲಿ. ಏಳಿಸಿ ಪ್ರಯೋಜನವಿಲ್ಲವೆಂದು ಭಾವಿಸಿ, ಅವನ ಪಕ್ಕದಲ್ಲಿ ಉರುಳಿಕೊಂಡಳು. ನಿದ್ರೆ ಮಾತ್ರ ಹತ್ತಿರ ಸುಳಿಯಲಿಲ್ಲ. ಮಗಳಿಗೆ ಮನೆ ಅಂದರೆ ಬೇಸರ. ಅಪ್ಪನಿಗೆ ಮಗಳು ಅಂದ್ರೆ ಬೇಸರ. ಇವರಿಬ್ಬರ ನಡುವೆ ಸಿಲುಕಿ ಒದ್ದಾಡುವ ತಾನು. ಅದೆಷ್ಟು ದಿನಗಳವರೆಗೂ ಈ ಅಸಹನೀಯ ಬದುಕು. ಯಾವಾಗ ತನಗೊಂದಿಷ್ಟು ನೆಮ್ಮದಿ ಅನ್ನುವುದು ಸಿಗುವುದೋ, ಅಂತೂ ದುರದೃಷ್ಟವನ್ನು ಹೊತ್ತು ತಂದಿರುವವಳಿಗೆ ಅದೃಷ್ಟವೆನ್ನುವುದಿದೆಯೋ. ಹಣೆಬರಹ. ನಾನು ಅಂದುಕೊಳ್ಳುವುದೊಂದೂ ಆಗದು. ಯೋಚಿಸುತ್ತಲೇ ನಿದ್ದೆ ಹೋದಳು.

ಬಾಗಿಲಿಗೆ ನೀರು ಹಾಕಿ ರಂಗೋಲಿ ಇಡುತ್ತ ಇದ್ದವಳಿಗೆ ಮಗಳ ಕೈನೆಟಿಕ್ ಸದ್ದಾಗಿ ಅಚ್ಚರಿಯಿಂದ
“ಏನೇ ಅಲ್ಲಿಂದಲೇ ಅಫೀಸಿಗೆ ಹೋಗ್ತೀನಿ ಅಂದಿದ್ದೆ.

“ಹೂಂ. ಅಲ್ಲಿಂದಲೇ ಹೋಗೋಣ ಅಂತಾ ಇದ್ದೆ. ಅದ್ರೆ ರಾತ್ರಿ ನಿನ್ಗಂಡ ಏನೇನೋ ಮಾತಾಡಿದರು ಅಂದ್ಯಲ್ಲ. ಅದಕ್ಕೆ ಸೀದಾ ಇಲ್ಲಿಗೆ ಬಂದೆ. ಮತ್ತೂ ಏನೇನೋ ಮಾತನಾಡುವುದು ಬೇಡ ಅಂತಾ” ಕೈನೆಟಿಕ್ ಅನ್ನು ಒಳತರುತ್ತಾ ವ್ಯಂಗ್ಯವಾಗಿ ನುಡಿದಳು ಅನು.

“ಸರಿ ಒಳಗಡೆ ನಡಿ. ರಾತ್ರಿ ನೀನು ಮನೆಗೆ ಬಂದಿಲ್ಲ ಅಂತ ಅವರಿಗೆ ಗೊತ್ತಿಲ್ಲ. ನೀನೂ ಸುಮ್ಮನಿದ್ದು ಬಿಡು. ಅವರಿಗೆ ಗೊತ್ತಾಗುವುದೇ ಬೇಡ.”

ತಾಯಿಯ ಮಾತಿಗೆ ಮತ್ತೇನೋ ಹೇಳಲಿದ್ದವಳು ಅಕೆಯ ಮುಖ ನೋಡಿದವಳೇ ಸುಮ್ಮನಾಗಿಬಿಟ್ಟಳು. ಈ ಅಮ್ಮನಿಗಾಗಿ ನಾನೆಲ್ಲ ಸಹಿಸಬೇಕಾಗಿದೆ. ಇಲ್ದಿದ್ರೆ ಈ ಹಾಳು ಮನೇನಾ ಶಾಶ್ವತವಾಗಿ ತೊರೆದು ಹೋಗಿಬಿಡಬಹುದಿತ್ತು. ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾ ಬಚ್ಚಲುಮನೆಗೆ ಹೋಗಿ ಬಾಗಿಲು ಹಾಕಿಕೊಂಡಳು.

ಸ್ನಾನ ಮುಗಿಸಿ ಬಂದವಳು ಪೇಪರ್ ಓದುತ್ತಾ ಕುಳಿತಿದ್ದ ತಂದೆಯನ್ನು ನೋಡಿ ತಲೆ ತಗ್ಗಿಸಿ ತನ್ನ ರೂಮಿಗೆ ನಡೆದುಬಿಟ್ಟಳು. ಅರೆಕ್ಷಣ ಏನೂ ಮಾಡಲು ತೋಚದೆ ಸುಮ್ಮನೆ ನಿಂತುಬಿಟ್ಟಳು.

ಯಾಕೆ, ಯಾಕೆ ತನಗೆ ಹೀಗೆ ಅನಿಸುತ್ತಿದೆ. ಇದು ನನ್ನ ಭ್ರಮೆನಾ ಅಥವಾ ನಿಜಾನಾ, ಯಾರ ಹತ್ರ ಹೇಳಿಕೊಳ್ಳುವುದು, ಯಾರಾದ್ರೂ ನಂಬ್ತಾರಾ, ನಾನು ಹೇಳುವುದಾದರೂ ಹೇಗೆ? ಅಯ್ಯೋ, ಮುಖ ಕಿವಿಚಿಕೊಂಡಳು.

“ಅಮ್ಮ ತಿಂಡಿಗೆ ಬಾ. ಅಮೇಲೆ ಲೇಟಾಯ್ತು ಅಂತಾ ತಿನ್ನದೇ ಹೋಗಿಬಿಡ್ತೀಯ.” ನೀಲಾ ಒಳಗಿನಿಂದ ಕೂಗಿದಾಗ ಗಡಬಡಿಸಿ ಎದ್ದು ಸೀರೆ ಉಟ್ಟು ಹೊರಬಂದಳು.

ಹೊರಬಂದ ಅನುವನ್ನೇ ಕಣ್ಣರಳಿಸಿ ನೋಡಿದ ಜಗದೀಶ, “ರಾತ್ರೆ ಯಾಕೆ ಲೇಟಾಯ್ತು?” ಯಾರಿಗೋ ಎಂಬಂತೆ ನುಡಿದ.

“ಅದೂ… ಅದೂ…” ತೊದಲಿದಳು.

ಹೊರ ಓಡಿಬಂದ ನೀಲಾ. “ಆಫೀಸಿನಲ್ಲಿ ಕೆಲ್ಸ ಜಾಸ್ತಿ ಇತ್ತಂತೆ. ಅದಕ್ಕೆ ಲೇಟಾಗಿದ್ದು, ನೀನು ಹೋಗಿ ತಿಂಡಿ ತಿನ್ನು.” ಮಗಳಿಗೆ ನುಡಿದು. “ನಿಮ್ಗೂ ಇಲ್ಲಿಗೇ ತಂದುಬಿಡಲೇ?” ಮಾತು ಮರೆಸಲೆತ್ನಿಸಿದಳು.

“ನಾನೂ ಅಲ್ಲಿಗೇ ಬರ್ತೀನಿ” ಎಂದ ಗಂಡನ ಮಾತು ಕೇಳಿ ಸಮಾಧಾನದ ಉಸಿರು ಬಿಟ್ಟು ತಿಂಡಿ ತರಲು ಒಳಹೋದಳು.

ಪಕ್ಕದ ಕುರ್ಚಿ ಎಳೆದು ಜಗದೀಶ ಕುಳಿತೊಡನೆ ಅನುವಿಗೆ ಗಂಟಲಿನಿಂದ ದೋಸೆ ಇಳಿಯದಾಯ್ತು. ತಟ್ಟನೆ ಏಳಲಾರದೆ ಮುಳ್ಳಿನ ಮೇಲೆ ಕುಳಿತಂತೆ ಚಡಪಡಿಸ ತೊಡಗಿದಳು.

“ಇನ್ನೊಂದು ದೋಸೆ ಹಾಕಿಸ್ಕೋ ಅನು…” ನೀಲಾ ಕೇಳಿದಾಗ. “ಬೇಡಮ್ಮಾ, ನಂಗೆ ಇದೇ ಜಾಸ್ತಿಯಾಯ್ತು” ಎಂದವಳೇ ತಟ್ಚೆಯಲ್ಲಿಯೇ ಕೈತೊಳೆದು ದಿಗ್ಗನೆದ್ದು ಬಿಟ್ಟಳು.

“ನಿನ್ನ ಮಗಳಿಗೆ ಕೊಬ್ಬು ಜಾಸ್ತಿ ಕಣೆ. ನೋಡು ತಟ್ಟೇಲಿ ದೋಸೆ ಇರುವಾಗ ಕೈ ತೊಳ್ಕೊಂಡಿದ್ದಾಳೆ. ಒಂದೂ ಒಳ್ಳೇ ಬುದ್ದಿ ಕಲಿಸಲಿಲ್ಲ ನೀನು. ನಿನಗೆ ಒಳ್ಳೇ ಬುದ್ದಿ ಇದ್ರೆ ತಾನೇ ನಿನ್ನ ಮಗಳಿಗೆ ಕಲಿಸೋದು. ತಾಯಿಯಂತೆ ಮಗಳು.” ಜಗದೀಶ ಕಿಡಿ ಕಾರಿದ. ಸರ್ರನೆ ಅಡುಗೆ ಮನೆ ಹೊಕ್ಕು ಬಾಯಿಗೆ ಸೆರಗೊತ್ತಿ ಬಿಕ್ಕಳಿಸಿದಳು.

ರೂಮಿನಲ್ಲಿದ್ದ ಅನುವಿಗೆ ಜಗದೀಶನಾಡಿದ್ದ ಮಾತುಗಳೆಲ್ಲವೂ ಕೇಳಿಸಿತ್ತು. ಕೋಪದಿಂದ ಕೆಂಪಾದಳು. ಕಣ್ಮುಚ್ಹಿ ಅರೆಕ್ಷಣ ತಾಳ್ಮೆ ತಂದುಕೊಂಡಳು.

ಹೊರಬಂದವಳೇ ಚಪ್ಪಲಿ ಮೆಟ್ಟಿ. “ಅಮ್ಮಾ, ನಾ ಹೋಗಿಬರ್ತೀನಿ.” ತಾಯಿಯ ಉತ್ತರಕ್ಕಾಗಿ ಕಾಯದೆ ಕೈನೆಟಿಕ್ ಸ್ಟಾರ್ಟ್‌ ಮಾಡಿದಳು. ಊಟದ ಡಬ್ಬಿ ಹಿಡಿದು ಓಡಿಬಂದ ನೀಲಾ, ಮಗಳಾಗಲೇ ಅಷ್ಟು ದೂರ ಹೋಗಿಬಿಟ್ಚಿದ್ದನ್ನು ನೋಡಿ, “ಛೇ, ಎಂಥ ಕೆಲ್ಸ ಮಾಡ್ದೆ . ಭಾವೋದ್ವೇಗಕ್ಕೆ ಒಳಗಾಗಿದ್ದಕ್ಕೆ ಇವತ್ತು ಮಗಳ ಊಟ ಇಲ್ಲೇ ಉಳಿದುಬಿಡ್ತಲ್ಲ” ಎಂದು ಸಂತಾಪಪಟ್ಟಳು.

“ಆಯ್ತಾ ಮಗಳ ಸೇವೆ? ಮಗಳೊಬ್ಬಳು ಇದ್ದು ಬಿಟ್ಟರೆ. ಈ ಪಾಪಿ ಗಂಡ ನಿನ್ನ ಮುಂದೆ ಇರೋದು ಮರ್ತುಹೋಗಿ ಬಿಡುತ್ತದೆ ಅಲ್ವಾ” ವ್ಯಂಗ್ಯವಾಗಿ ಅಣಕಿಸಿದ.

ಅವನ ವ್ಯಂಗ್ಯಕ್ಕೆ ಪ್ರತಿಕ್ರಿಯೆ ತೋರದೆ ಕಾಫಿ ಬೆರೆಸಿ ಗಂಡನ ಮುಂದೆ ಹಿಡಿದಳು. ಕಾಫಿ ಕುಡಿದು ಲೋಟವನ್ನು ಟೇಬಲ್ ಮೇಲೆ ಕುಕ್ಕಿದ ಜಗದೀಶ.

“ಏನೇ ಯಾವನ ಕನಸು ಕಾಣ್ತ ಇದ್ದೀಯಾ. ನಾ ಹೋಗ್ತ ಇದ್ದೀನಿ ಬಾಗಿಲು ಹಾಕಿಕೊಂಡು ಎಷ್ಟು ಬೇಕಾದ್ರೂ ಕನಸು ಕಾಣು” ಕಾಲಪ್ಪಳಿಸಿ ನಡೆದು ಹೋದಾಗ ನಿಧಾನವಾಗಿ ಬಾಗಿಲು ಹಾಕಿ ಅಡುಗೆ ಮನೆಯಲ್ಲಿ ಉಳಿದ ಕೆಲಸ ಮಾಡಲು ನಡೆದಳು. ಕೆಲಸದಲ್ಲಿ ಮುಳುಗಿ ಹೋದವಳಿಗೆ ಯೋಚಿಸಲು ಪುರುಸೊತ್ತಿಲ್ಲದಂತಾಯಿತು. ಕೆಲಸ ಮುಗಿಸಿ ಹೊರಬಂದವಳೇ ಟೇಬಲ್ ಮೇಲಿದ್ದ ಊಟದ ಡಬ್ಬಿ ಕಾಣಿಸಿ ತಕ್ಷಣವೇ ಮಗಳಿಗೆ ಫೋನ್ ಮಾಡಿದಳು. “ಊಟದ ಡಬ್ಬಿ ಬಿಟ್ಟೇ ಹೋಗಿದ್ದೀಯಲ್ಲಾ”.

“ಅಮ್ಮ, ನಾ ಡಬ್ಬಿ ಬಿಟ್ಟು ಬಂದ್ರೆ ಉಪವಾಸ ಇರ್ತೀನಿ ಅಂತಾ ತಿಳ್ಕೊಂಡ್ಯಾ, ಇಲ್ಲೇನು ಹೋಟೆಲ್ ಇಲ್ವಾ. ಒಂದು ದಿನ ಡಬ್ಬಿ ಊಟ ಬಿಟ್ಟು ಹೋಟೇನಲ್ಲಿ ತಿಂದ್ರೆ ಪ್ರಪಂಚ ಏನೂ ಮುಳುಗಿ ಹೋಗಲ್ಲ. ನೀನು ಅದಕ್ಕಾಗಿ ಚಿಂತೆ ಮಾಡದೆ ನೆಮ್ಮದಿಯಾಗಿ ತಿಂಡಿ ತಿನ್ನು” ಫೋನಿನಲ್ಲಿಯೇ ಅನು ಸಮಾಧಾನಿಸಿದಳು.

“ಹಾಗಲ್ವೆ ಅನು, ನಿಂಗಿಷ್ಟ ಅಂತಾ ಶ್ಯಾವಿಗೆ ಉಪ್ಪಿಟ್ಪು ಮಾಡಿ ಹಾಕಿದ್ದೆ ಕಣೇ” ಅವಲತ್ತುಗೊಂಡಳು.

“ಹೋಗ್ಲಿ ಬಿಡಮ್ಮ ಸಾಯಂಕಾಲ ಬಂದು ತಿನ್ತೀನಿ. ಅದನ್ನ ಹಾಗೆ ಫ್ರಿಡ್ಜ್‌ನಲ್ಲಿಟ್ಟಿರು. ಆಫೀಸಿನಲ್ಲಿ ತುಂಬಾ ಕೆಲಸ. ಫೋನಿಡ್ಲಾ” ಅವಸರಿಸಿದಾಗ, “ಅನೂ. ಸಂಜೆ ಬೇಗ ಬಂದ್ಬಿಡು. ಆಫೀಸ್ ಬಿಟ್ಟ ಮೇಲೆ ಅಲ್ಲಿ ಇಲ್ಲಿ ಅಂತಾ . ಹೋಗಬೇಡ” ಬೇಡುವ ಧ್ವನಿಯಲ್ಲಿ ನುಡಿದಳು.

“ಅಮ್ಮ ಯಾಕ್ಹಿಂಗೆ ಆಡ್ತೀಯಾ. ನಾನೇನು ಸಣ್ಣ ಮಗೂನಾ” ರೇಗಿ ಫೋನಿಟ್ಟುಬಿಟ್ಟಳು.

ಸಂಜೆ ಮನೆಗೆ ಬಂದ ಕೂಡಲೇ ತಾಯಿ ಮೇಲೆ ಹರಿಹಾಯ್ದಳು. “ಅಲ್ಲಮ್ಮ ಆಫೀಸಿಗೆ ಹಾಗೆಲ್ಲ ಫೋನ್ ಮಾಡ್ತಿಯಲ್ಲ, ಅಲ್ಲಿದ್ದವರೆಲ್ಲ ಏನು ಅಂದ್ಕೊಳ್ಳಲ್ಲ. ಊಟದ ಡಬ್ಬಿ ಬಿಟ್ಟು ಹೋಗಿದ್ದಕ್ಕೂ ಫೋನ್ ಮೆಡ್ಬೇಕಾ. ನೀನು ಫೋನ್ ಮಾಡ್ದಾಗ ನಂ ಬಾಸ್ ಅಲ್ಲಿ ಇರದೆ ಇದ್ದದ್ದಕ್ಕೆ ಸರಿಹೋಯ್ತು. ಅವ್ರೋನಾದ್ರೂ ಅಲ್ಲಿ ಇದ್ದಿದ್ದರೆ ಅಷ್ಟು ಹೊತ್ತು ಫೋನ್ ಮಾಡ್ತಿಡ್ದೆ ಅಂತಾ ಬೈಯ್ಕೊಳಲ್ವಾ.”

“ಯಾಕೆ ಬೈತಾರೆ, ತಾಯಿ ಅಂತಃಕರಣ ಅರಿತವರಾರೂ ಹಾಗೆ ಅಂದ್ಕೊಳ್ಳೋದಿಲ್ಲ” ನೀಲಾ ಕೂಡ ರೇಗಿದಳು.

“ಅದು ಹಾಗಲ್ಲ ಅಮ್ಮ. ನಂ ಬಾಸ್ ತುಂಬಾ ಸ್ಟ್ರಿಕ್ಟ್. ಫೋನ್ ಮಾಡ್ತ ಟೈಂ ವೇಸ್ಬು ಮಾಡಿದ್ರೆ ಅವರಿಗೆ ಕೋಪ ಬರುತ್ತೆ. ನಿಂಗೆ ಕಾಮನ್ ಸೆನ್ಸ್ ಇರಬೇಕಿತ್ತು. ಊಟ ಬಿಟ್ಟು ಹೋದ್ರೆ ಅಲ್ಲೋ ಎಲ್ಲಾದ್ರೂ ತಿಂದ್ಕೊತಾಳೆ, ನಾನು ಹೀಗೆ ಸಣ್ಣ ಪುಟ್ಟದ್ದಕ್ಕೆಲ್ಲ ಫೋನ್ ಮಾಡಿ ಡಿಸ್ಟರ್ಬ್ ಮಾಡಬಾರದು ಅನ್ನೋ ಪರಿಜ್ಞಾನ ನಿಂಗಿಲ್ವಾ. ನೀನು ಅತಿ ಅಡ್ತಿಯಾ. ಪ್ರಪಂಚದಲ್ಲಿ ಯಾರಿಗೂ ಇಲ್ದೆ ಇರೋ ಮಗಳ ನಿಂಗೆ. ನೀನು ನೋಡಿದ್ರೆ ಹೀಗೆ. ನಿನ್ಗಂಡ ನೋಡಿದ್ರೆ ಹಾಗೆ. ಮಗಳು ಅನ್ನೋ ವಾತ್ಸಲ್ಯ ಇಲ್ಲ. ತನ್ನ ಕರುಳಿನ ಕುಡಿ ಅನ್ನೋ ಭಾವನೆ ಕೂಡ ಇಲ್ಲಾ. ನಿಂದು ಅತಿವೃಷ್ಟಿ ಆದ್ರೆ ನಿನ್ಗಂಡಂದು ಅನಾವೃಷ್ಟಿ. ಈ ಅಸಮತೋಲನದಿಂದ ನಾನು ಕುಗ್ಗಿ ಹೋಗ್ತ ಇದ್ದೀನಿ. ನಂಗೆ ಒಂದೊಂದ್ಸಲ ಅನ್ಸುತ್ತೆ ನಾನು ನಿನ್ಗಂಡಂಗೆ ಹುಟ್ಟಿದ ಮಗಳು ಹೌದೋ ಅಲ್ವೋ ಅಂತಾ.

“ಅನೂ” ಜೋರಾಗಿ ಚೀರಿ ಕೋಪದಿಂದ ತರತರನೆ ನಡುಗಲಾರಂಭಿಸಿದಳು ನೀಲಾ. ತಾಯಿಯ ಕೋಪಕ್ಕೆ ಹೆದರಿಬಿಟ್ಪಳು ಅನು. ಮಗಳ ಕಡೆ ಕೆಂಗಣ್ಣು ಬಿಡುತ್ತ
“ಅನು ನೀನು ಈ ಮಟ್ಪದಲ್ಲಿ ಯೋಚ್ನೆ ಮಾಡ್ತ ಇದ್ದೀಯಾ. ನಿನ್ನ ತಾಯಿ ಸೂಳೆ ಅಂತಾ ಹೇಳ್ತ ಇದ್ದಿಯಾ. ನಾನು ನನ್ನ ಮನಸ್ಸನ್ನ ಬೇರೆ ಒಬ್ಬನಿಗೆ ಕೊಟ್ಟಿರಬಹುದು ಕಣೆ. ಆದ್ರೆ ಈ ದೇಹನಾ ಮಾತ್ರ ವ್ಯಭಿಚಾರ ಮಾಡಿಲ್ಲ ಕಣೆ. ಇದುವರೆಗೂ ನಿಮ್ಮಪ್ಪನಿಗೆ ನಿಷ್ಠೆಯಾಗಿ ಬಾಳ್ತಾ ಇದ್ದೀನಿ. ನೀನೂ ಕೂಡ ನನ್ನ ಅರ್ಥ ಮಾಡಿಕೊಳ್ಳಲಿಲ್ಲವಾ” ಭೋರೆಂದು ಅಳಲಾರಂಬಿಸಿದೊಡನೆ ಒಂದೇ ಹಾರಿಗೆ ಓಡಿ ಬಂದು ಅನು,

“ಅಮ್ಮ ನನ್ನ ಕ್ಷಮಿಸಿ ಬಿಡಮ್ಮ. ಯಾವುದೋ ಹತಾಶೆಯಲ್ಲಿ ನನ್ನ ಬಾಯಿ ಹೀಗೆ ನುಡಿದು ಬಿಟ್ಟಿದೆ. ನಾನು ನಿನ್ನ ಮಗಳು ಕಣಮ್ಮ. ನೀನು ಹೇಗೆ ಅಂತಾ ನಂಗೆ ಗೊತ್ತಿಲ್ವಾ. ದಯವಿಟ್ಟು ನನ್ನ ಕ್ಷಮ್ಸಿಬಿಡಮ್ಮ. ಇನ್ನೆಂದೂ ಹೀಗೆ ನಾನು ಮಾತನಾಡಲ್ಲ. ನಿನ್ನ ಮೇಲೆ ಆಣೆ” ತಾನು ಅಳುತ್ತ ತಾಯಿಯನ್ನು ಅಪ್ಪಿಕೊಂಡು ಕ್ಷಮೆ ಯಾಚಿಸಿದಳು.

ಮಗಳ ಕಣ್ಣೀರು ಒರೆಸುತ್ತ ನೀಲಾ “ಈ ಪಾಪಿ ಹೊಟ್ಟೋಲಿ ಹುಟ್ಸಿದ್ದಕ್ಕೆ ನನ್ನ ನೋವಿನ ಜೊತೆ ನೀನೂ ನೋವು ಅನುಭವಿಸುವಂತಾಯಿತು. ಹೋಗ್ಲಿ ಬಿಡು ಯಾಕೋ ಇವತ್ತು ಎದ್ದ ಗಳಿಗೇನೇ ಸರಿ ಇಲ್ಲ ಅನ್ಸುತ್ತೆ. ಬೆಳಿಗ್ಗೆಯಿಂದಲೂ ಒಂದಲ್ಲ ಒಂದು ಬೇಸರ. ನಿಮ್ಮಪ್ಪ ಬರೋ ಹೊತ್ತಾಯಿತು. ಅವರ ಮುಂದೆ ಈ ರಾಮಾಯಣ ಯಾಕೆ. ಹೋಗು ಮುಖ ತೊಳ್ಕೊಂಡು ಬಾ, ತಿಂಡಿ ಕೊಡ್ತಿನಿ” ತನ್ನ ಮನಸ್ಸನ್ನು ತಹಬಂದಿಗೆ ತಂದುಕೊಳ್ಳುತ್ತಾ ಮಗಳನ್ನು ಸಂತೈಸಿದಳು.

ಕುಡಿದು ತೂರಾಡುತ್ತ ಬರುವ ಅಪ್ಟನನ್ನು ನೋಡುವ ಮನಸ್ಸಿಲ್ಲದ ಅನು ಗಬಗಬನೆ ತಿಂಡಿ ತಿಂದು ರೂಮು ಸೇರಿಕೊಂಡುಬಿಟ್ಟಳು.

“ರಾತ್ರಿ ಊಟ ಬೇಡ ನಂಗೆ. ನನ್ನ ಬಲವಂತಪಡಿಸಬೇಡ” ಎಂದು ತಾಯಿಗೆ ತಾಕೀತು ಮಾಡಿದಳು.

ಎಲ್ಲರ ಸಂಸಾರನೂ ಎಷ್ಟು ಚೆನ್ನಾಗಿರುತ್ತದೆ. ಆದರೆ ತನ್ನ ಮನೆಯಲ್ಲಿ ಹೀಗೇಕೆ. ಯಾರದು ತಪ್ಪು ಇದ್ರಲ್ಲಿ. ಅಪ್ಪನದೇ, ಅಮ್ಮನದೇ? ಅಥವಾ ತನ್ನದೇ. ಅಪ್ಪ ಹೊರಗಡೆ ಅದೆಷ್ಟು ಸಭ್ಯಸ್ಥನು. ಸಮಾಜದಲ್ಲಿ ಅಷ್ಟು ಒಳ್ಳೆ ಹೆಸರು ಇದ್ದರೂ ಮಾತ್ರ ಹೆಂಡತಿಯನ್ನು ಕಾಡುವ ಕೀಚಕ. ಹೆತ್ತ ಮಗಳನ್ನು ಹತ್ತಿರಕ್ಕೆ ಸೇರಿಸದ ನಿರ್ದಯಿ. ಅಮ್ಮನ್ನು ಸದಾ ಏನಾದರೂ ಅಂದು ಆಡಿ ಆಕೆಯನ್ನು ನೋಯಿಸದಿದ್ರೆ ಆತ ಅಕೆಯ ಗಂಡನೇ ಅಲ್ಲವೇನೋ. ಪಾಪ ಅಮ್ಮ ನನಗಾಗಿ ಎಲ್ಲವನ್ನೂ ಸಹಿಸುತ್ತಾ ಇದ್ದಾಳೆ. ಬೇರೆ ಯಾರೇ ಅಗಿದ್ರೂ ಒಂದೋ ಆತ್ಮಹತ್ಯೆ ಮಾಡಿಕೊಂಡು ಈ ನರಕದ ಬದುಕಿಗೆ ವಿದಾಯ ಹೇಳ್ತ ಇದ್ರು. ಇಲ್ಲಾ ಅಂದ್ರೆ ಈ ನರಕನ ಬಿಟ್ಟು ಓಡಿ ಹೋಗ್ತ ಇದ್ರು. ಅಮ್ಮ ಯಾಕೆ ಹೀಗೆ ಹೇಡಿಯಾಗಿದ್ದಾಳೊ. ಈಗ್ಲಾದ್ರೂ ನನ್ ಜೊತೆ ಬಂದು ಗಂಡನಿಗೆ ಬುದ್ಧಿ ಕಲಿಸಬಾರದೆ. ಕೈ ತುಂಬಾ ಸಂಪಾದನೆ ಮಾಡ್ತ ಇದ್ದೀನಿ. ಬೇರೆ ಮನೆ ಮಾಡ್ಕೊಂಡು ನೆಮ್ಮದಿಯಾಗಿದ್ದು ಬಿಡಬಹುದು. ಅಮ್ಮ ಹಾಗೆ ಅಪ್ಪನ್ನ ಬಿಟ್ಟು ಬರ್ತೀನಿ ಅಂದ್ರೆ ನಾನು ಈವತ್ತೇ ಬೇರೆ ಮನೆ ಮಾಡೋಕೆ ಸಿದ್ಧ. ಹೂವಿನಂತೆ ಅಮ್ಮನ್ನ ನೋಡ್ಕೋತೀನಿ. ಆದ್ರೆ ಅಮ್ಮ ಮನಸ್ಸು ಮಾಡಬೇಕಲ್ಲ. ಗಂಡ ಎಷ್ಟು ನೋವು ಕೊಟ್ರೂ ಅವನನ್ನು ಬಿಟ್ಟು ಬರೋಕೆ ಸಿದ್ದ ಇಲ್ಲ. ಗಂಡ ಬಿಟ್ಪವಳೆಂಬ ಹಣೆಪಟ್ಟಿ ಹೊರಲು ಅಮ್ಮನಿಗೆ ಇಷ್ಟವಿಲ್ಲ. ಅಮ್ಮನನ್ನು ಬಿಟ್ಟು ಹೋಗಲು ತನಗೆ ಇಷ್ಟವಿಲ್ಲ. ಹೆತ್ತವರಿಂದ ದೂರ ಹೋಗುವುದು ತನಗೇನು ಅಸಾಧ್ಯವಲ್ಲ. ಆದರೆ ಹಾಗೇನಾದರೂ ತಾನು ಹೊರಟುಬಿಟ್ಟಲ್ಲಿ ಅಮ್ಮ ಪ್ರಾಣವನ್ನು ಕಳೆದುಕೊಂಡಾಳೆಂಬ ಭಯದಿಂದ ಈ ಮನೆಯಲ್ಲಿ ಬದುಕಬೇಕಾಗಿದೆ. ಇನ್ನೆಷ್ಟು ದಿನ ಈ ನರಕ! ಯಾವಾಗ ತನಗೆ ಈ ಮನೆಯಿಂದ ಬಿಡುಗಡೆ.

ಪಾಪ ಅಮ್ಮ ಸಾಯುವ ತನಕ ಗಂಡನೆಂಬ ಮೃಗದೊಡನೆ ಇರಲೇಬೇಕಾಗಿದೆ. ಇರಲಿ ಅವಳ ಕರ್ಮ. ನೆಮ್ಮದಿಯಾಗಿ ಬದುಕುವ ಅವಕಾಶವಿದ್ದರೂ. ಹಳೇ ಬದುಕೇ ಬೇಕೆಂದು ಅದನ್ನೇ ಅಪ್ಟಿಕೊಂಡಿದ್ದರೆ ನಾನಾದರೂ ಏನು ಮಾಡಲು ಸಾಧ್ಯ ಅವಳ ಸ್ವಭಾವ ಕಂಡೇ ಅಪ್ಪನಿಗೂ ತಾತ್ಸಾರ. ಹೇಗೂ ತನ್ನ ಬಿಟ್ಟು ಹೋಗುವವಳಲ್ಲ. ಕೊನೆವರೆಗೂ ತಾನೇ ಗತಿ ಎಂಬ ಅಹಂ. ಆ ಅಹಂ ತಾನೇ ಅಪ್ಪನಿಗೆ ಹಾಗೆ ಆಡಲು ಪ್ರೇರೇಪಿಸುತ್ತಿರುವುದು. ಒಮ್ಮೆಯಾದರೂ ಅಪ್ಪನನ್ನು ಎದುರಿಸಿದ್ದಾಳಾ. ಹೆತ್ತ ಮಗಳಾದ ನನ್ನನ್ನು ನಿಕೃಷ್ಟವಾಗಿ ಕಾಣುವಾಗಲೂ ಅತ್ತು ಕಣ್ಣೊರೆಸಿಕೊಳ್ಳುತ್ತಾಳೆಯೇ ವಿನಃ ಅದೇಕೆ ಹಾಗೆ ಮಾಡುತ್ತೀಯಾ ಎಂದು ಕೇಳಿದವಳಲ್ಲ. ಪ್ರತಿಭಟಿಸಿದವಳಲ್ಲ. ಅಪ್ಪನ ಪ್ರೀತಿ ಮಗಳಿಗಿಲ್ಲವಲ್ಲ ಎಂದು ಕೊರಗುತ್ತಾಳಷ್ಟೆ. ಆ ಕೊರಗು ತನಗೆ ಅಪ್ಪನ ಪ್ರೀತಿ ವಾತ್ಸಲ್ಯವನ್ನು ಕೊಟ್ಟೀತೇ? ತನ್ನದು ಒಂದು ರೀತಿಯ ದುರದೃಷ್ಟ. ಹೆತ್ತಪ್ಪನಿದ್ದರೂ ಆತನ ಪ್ರೀತಿಗೆ ಎರವಾಗಿ ಬದುಕುವ ಪರಿ. ಇದಕ್ಕೆ ಕಾರಣಕರ್ತರಾರು. ಅಮ್ಮನೇ? ಅಮ್ಮನನ್ನು ಪ್ರೀತಿಸಿ ಕೈಕೊಟ್ಟ ಆತನೇ? ತಾನು ಕೈ ಹಿಡಿಯುವಾಕೆಯ ಪ್ರೇಮ ಬೇರೊಬ್ಬನನ್ನು ಒಲಿದಿದೆ ಎಂದು ತಿಳಿದು ತಿಳಿದೂ ಆ ಪ್ರೇಮಕ್ಕೆ ಖಳನಾಯಕನಾದ ಅಪ್ಪನದೇ, ಗೋಮುಖ ವ್ಯಾಘ್ರನೆಂದು ತಿಳಿಯದೇ, ತನ್ನ ಪ್ರೇಮದ ಸಾಪಲ್ಯಕ್ಕೆ ನೆರವಾಗೆಂದು ಬೇಡಿ, ಕೊನೆಗೆ ಆತ ಕಟ್ಟುವ ತಾಳಿಗೆ ಕೊರಳೊಡ್ಡಬೇಕಾದ ಅಮ್ಮನದೇ? ಭುವಿಗಿಳಿಯಲು ಆತುರ ಪಟ್ಟು ನವಮಾಸ ತುಂಬುವ ಮೊದಲೇ ಧರೆಗಿಳಿದ ನನ್ನ ತಪ್ಪೇ? ಅಂತೂ ತಪ್ಪು ಯಾರದೇ ಇದ್ದರೂ ಅದಕ್ಕೆ ಬಲಿಯಾದವರು ನಾನು, ಅಮ್ಮ. ನನ್ನದೇನು ಇವತ್ತಲ್ಲ, ನಾಳೆ ಮತ್ತೊಂದು ಬದುಕು ಪ್ರವೇಶಿಸುವವಳು.

ಪಾಪ ಅಮ್ಮ ಕೊನೆ ಉಸಿರಿರುವ ತನಕ ಅಪ್ಪನ ಕಪಿಮುಷ್ಟಿಯಲ್ಲಿ ನರಳಬೇಕಾಗಿದೆ. ಎಲ್ಲವನ್ನೂ ಯೋಚಿಸುತ್ತಿದ್ದರೆ ಗಂಡು ಜಾತಿಯ ಬಗ್ಗೆ ದ್ವೇಷ ಹುಟ್ಟುತ್ತದೆ. ತಿರಸ್ಕಾರ ಮೂಡುತ್ತದೆ. ಅಮ್ಮನ ಬಾಳಿನಲ್ಲಿ ಪ್ರವೇಶಿಸಿದ ಈ ಗಂಡುಗಳಿಂದ ತಾನೇ ಅಮ್ಮನ ಬದುಕು ಹೀಗಾಗಿರುವುದು. ಹೇಡಿಯೆಂದು ತಿಳಿಯದೆ ತನ್ನ ಒಲವನ್ನೆಲ್ಲ ಧಾರೆ ಎರೆದುದಕ್ಕೆ ಕೊಟ್ಟನಲ್ಲ ಸರಿಯಾದ ಕಾಣಿಕೆ. ಒಲವ ಕೊಟ್ಟಾಕೆ ಬೇರೊಬ್ಬನನ್ನು ಪರಿಸ್ಥಿತಿಯ ಕೈಗೊಂಬೆಯಾಗಿ ಲಗ್ನವಾಗುತ್ತಿದ್ದಾಳೆ ಎಂದು ತಿಳಿದೂ ತಿಳಿದೂ ದೂರವೇ ಉಳಿದು ಪ್ರೇಮಕ್ಕೆ ದ್ರೋಹ ಬಗೆದ. ಅತನ ಪ್ರೇಮವನ್ನು ನಂಬಿ, ಹಿಂದೆ ಮುಂದೆ ಅಲೋಚಿಸದೆ ಅಪ್ಪನ ಬಳಿ ಎಲ್ಲವನ್ನು ಹೇಳಿ ಸಹಾಯ ಮಾಡೆಂದು ಯಾಚಿಸಿ, ತನ್ನ ಬಾಳಿಗೆ ತಾನೇ ಕಲ್ಲೆಳೆದುಕೊಂಡಳು. ಈ ಅಪ್ಚನಾದರೂ ಎಂತಹ ಮೋಸಗಾರ. ಸಹಾಯ ಮಾಡುವೆನೆಂದು ನಂಬಿಸಿ ಕೊನೆಗೆ ತಾನೇ ತಾಳಿಕಟ್ಟಿ, ಈಗಲೂ ಹಿಂಸಿಸುತ್ತಿರುವ ಕ್ರೂರಿ. ಈತನೇನು ಮನುಷ್ಯನೇ. ಪ್ರೇಮಿಯನ್ನು ಸಂಪೂರ್ಣವಾಗಿ ಮರೆತು, ಕೈ ಹಿಡಿದ ಗಂಡನಿಗೆ ವಿಧೇಯಳಾಗಿದ್ದರೂ ಅಮ್ಮನಿಗೆ ಸುಖವಿದೆಯೇ. ಹಳೆಯದನ್ನೆಲ್ಲ ಕೆದಕಿ ಕೆದಕಿ ಅಮ್ಮನನ್ನು ನೋಯಿಸಿ ತಾನು ಪೈಶಾಚಿಕ ತೃಪ್ತಿ ಪಡೆಯುವ ಅಪ್ಪ ನಿಜಕ್ಕೂ ಸ್ಯಾಡಿಸ್ಟ್, ಹೆಂಡತಿಯನ್ನು ಬಿಡಲೂ ಒಲ್ಲ, ಜೊತೆಯಾಗಿಟ್ಬುಕೊಳ್ಳಲೂ ಒಲ್ಲ. ತನಗಂತೂ ದಿನವೂ ನೋಡಿ ನೋಡಿ ಆತನ ಮೇಲೆ ದ್ವೇಷ ಬೆಳೆದುಬಿಟ್ಚಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಎನ್ನುವ ಹಾಗೆ ಇವರಿಬ್ಬರ ವೈಮನಸ್ಸಿನ ಬಿಸಿ ನನ್ನನ್ನೇ ಸುಡ್ತಾ ಇದೆ. ಈ ಬಿಸಿಯಿಂದ ಪಾರಾಗಲೂ ಆಗದೆ, ಅನುಭವಿಸಲೂ ಸಾಧ್ಯವಾಗದೆ ಬೆಂದು ಹೋಗ್ತಾ ಇದ್ದೀನಿ. ತಂದೆ ಪ್ರೀತಿ ಅಂದ್ರೆ ಏನು ಆಂತನೇ ತಿಳಿದೇ ಬೆಳೆದೆ. ಅಪ್ಪಾ ಅಂತಾ ಪ್ರೀತಿಯಿಂದ ಹತ್ತಿರಕ್ಕೆ ಹೋದರೆ ತಬ್ಬಿಕೊಂಡ ಎಳೆಯ ಕೈಗಳನ್ನು ಕಿತ್ತು ಕಾಲಿನಿಂದ ಒದ್ದು ದೂರ ತಳ್ಳಿದ ಅತ ತಂದೆಯ ಸ್ಥಾನದಲ್ಲಿರಲು ಅನರ್ಹ.

ಅವಳ ಕೈ ಅವಳಿಗರಿವಿಲ್ಲದೆ ಹಣೆಯ ಮೇಲೆ ಆಡಿ, ಗಾಯದ ಗುರುತನ್ನು ಸವರಿತು. ಪ್ರತಿದಿನ ಕನ್ನಡಿಯ ಮುಂದೆ ನಿಂತಾಗಲೆಲ್ಲ ಆ ಕಲೆ ಅವಳನ್ನು ಅಣಕಿಸುತ್ತಿತ್ತು, ಘಾಸಿಪಡಿಸುತ್ತಿತ್ತು. ಕಾಲಿನಿಂದ ನೂಕಿದ ರಭಸಕ್ಕೆ ನೆಲಕ್ಕೆ ಅಪ್ಪಳಿಸಿದಂತಾಗಿ ಹಣೆ ಒಡೆದು ರಕ್ತ ಸುರಿದಿತ್ತು. ಅಂದಿನಿಂದಲೇ ತಂದೆಯೆಂದರೆ ಭೀತಿ. ಆತನನ್ನು ಕಂಡ ಕೂಡಲೇ ಜೋರಾಗಿ ಕಿರುಚಿಕೊಳ್ಳುತ್ತಿದ್ದನಂತೆ. ಅಮ್ಮ ಅದೆಲ್ಲವನ್ನೂ ಹೇಳುತ್ತಿದ್ದರೆ ರಕ್ತ ಹೆಪ್ಪುಗಟ್ಟಿಸಿದಂತಾಗುತ್ತಿತ್ತು. ತಾನಂತೂ ಅಪ್ಪನಿಗೆ ಪರಕೀಯಳಾಗಿಯೇ ಉಳಿದು ಬಿಟ್ಟಿದ್ದು ಬುದ್ದಿ ಬಂದಾಗಿನಿಂದಲೂ ಅತನೊಡನೆ ಮಾತನಾಡಿದ ನೆನಪಿಲ್ಲ. ಅಪ್ಪಾ ಎಂದು ಒಂದು ಬಾರಿಯೂ ಕರೆದಿಲ್ಲ. ತನ್ನದೆಂತಹ ಅದೃಷ್ಟ. ಜೀವದಾತ ಬದುಕಿದ್ದರೂ ತನ್ನ ಪಾಲಿಗೆ ಸತ್ತಂತಿರುವ, ಮಗಳೆಂಬ ಮಮಕಾರವಿರಲಿ, ಮನುಷ್ಯ ಮನುಷ್ಯನೊಡನೆ ಇರಬೇಕಾದ ಕನಿಷ್ಟ ಭಾವನೆಗಳು ಬೇಡವೇ. ಬರೀ ಯೋಚಿಸುವುದೇ ಆಗಿದೆ. ನನ್ನ ಈ ಅಲೋಚನೆಗಳು ಆತನನ್ನು ಬದಲಿಸಿಯಾವೆ. ದೀರ್ಘವಾಗಿ ಉಸಿರುಬಿಡುತ್ತ ಮಗ್ಗುಲು ಬದಲಾಯಿಸಿ ನಿದ್ರಿಸಲೆತ್ನಿಸಿದಳು.

ನಿದ್ರೆ ಬಂದೀತೇ, ಬುದ್ಧಿ ತಿಳಿದಾಗಿನಿಂದಲೂ ಎಲ್ಲರ ಮನೆಯಲ್ಲಿಯೂ ಇರುವಂತಹ ಅಪ್ಪ ಮಕ್ಕಳ ಸಂಬಂಧ ತನ್ನ ಮನೆಯಲ್ಲಿ ಏಕಿಲ್ಲ ಎಂದು ಅಚ್ಚರಿಯಾಗುತ್ತಿತ್ತು. ಅಕ್ಕ ಪಕ್ಕದ ಮಕ್ಕಳೆಲ್ಲ ಅಟವಾಡುತ್ತ ನಕ್ಕು ನಲಿಯುತ್ತಿದ್ದರೆ ಬೆರಗಾಗಿ ನೋಡುತ್ತಿದ್ದೆ. ಗೆಳತಿಯರು ಅಪ್ಟಂದಿರ ವಾಹನಗಳಲ್ಲಿ ಜುಮ್ಮೆಂದು ಬಂದು ಇಳಿಯುತ್ತಿದ್ದರೆ, ಅಪ್ಪನ ಬೈಕನ್ನು ಅಸೆಯಿಂದ ಸವರುತ್ತಿದ್ದೆ. ತನಗೆ ಬೇಕಾದ ಡ್ರೆಸ್, ಬುಕ್ಸ್ ಮತ್ತೆಲ್ಲವನ್ನು ಅಪ್ಪನೇ ಕೊಡಿಸಲಿ ಎಂದು ಅಶಿಸುತ್ತಿದ್ದೆ. ಮಾರ್ಕ್ಸ್‌ ಕಾರ್ಡಿಗೆ ಅಪ್ಪನ ಸಹಿ ಬೇಕೆಂದು ಬಯಸುತ್ತಿದ್ದೆ. ಅಪ್ಪನ ಹೆಗಲೇರಿ ಕುಣಿದು ಕುಪ್ಪಳಿಸಬೇಕು, ಕೈ ಕೈ ಹಿಡಿದು ಅಪ್ಪನ ಪ್ರೀತಿಯೆಲ್ಲ ತನ್ನದೇ ಎಂದು ಎದೆಯುಬ್ಬಿಸಿ ಅಮ್ಮನ ಕಣ್ಣರಳಿಸಬೇಕೆಂದು ನಾ ಪಟ್ಟ ಸಾಹಸ ಒಂದೇ ಎರಡೇ. ನನ್ನೆಲ್ಲ ಅಸೆ ಬಯಕೆಗಳು ಬಯಕೆಗಳಾಗಿಯೇ ಉಳಿದುಬಿಟ್ಟವು. ಅಪ್ಪ ಎಂಬ ಅಕ್ಷರದ ಮಮತೆ, ಪ್ರೀತಿ, ವಾತ್ಸಲ್ಯ ಎಲ್ಲವೂ ನನಗೆ ಮರೀಚಿಕೆ. ಆತನನ್ನು ಕಂಡ ಕೂಡಲೇ ಅಪ್ಪ ಎಂದು ಕೂಗಬೇಕೆಂಬ ಬಯಕೆಯೇ ನಾಲಿಗೆಯಿಂದ ಹೊರ ಬೀಳುತ್ತಿರಲಿಲ್ಲ. ಅಪ್ಪನನ್ನು ಕಂಡ ಕೂಡಲೇ ನನಗರಿವಿಲ್ಲದ ಕೈ ಹಣೆಯನ್ನು ಸವರಿಕೊಳ್ಳುತ್ತಿತ್ತು.

ಅಪ್ಪನ ಪ್ರೀತಿ ಗೆಲ್ಲುವ ಪ್ರಯತ್ನವೇ ಮುರುಟಿ ಹೋಗುತ್ತಿತ್ತು. ನನ್ನೆಲ್ಲ ನಿರಾಶೆಗಳನ್ನು ಕಣ್ತುಂಬಿಯೇ ನೋಡುತ್ತಿದ್ದ ಅಮ್ಮ ಒಂದು ದಿನ ಎಲ್ಲವನ್ನು ಹೇಳಿಬಿಟ್ಬಾಗ ಮರಗಟ್ಟಿ ಹೋದೆ. ಹೀಗೂ ಉಂಟೇ, ತನ್ನಲ್ಲಿ ಕಾಡುತ್ತಿದ್ದ ಸಂಶಯವೊಂದೇ, ಮಗಳನ್ನು ದೂರ ತಳ್ಳುವಂತೆ ಮಾಡಿತ್ತೆ. ಎಂದೋ ಅಮ್ಮನ ಹೃದಯದ ಭಾವನೆಗಳು ಮಧುರವಾಗಿ ಹಾಡಿದ್ದವೆಂಬ ಒಂದೇ ಕಾರಣಕ್ಕೆ ತನಗಿಂತ ತಿರಸ್ಕಾರವೇ. ಹಾಗಾದರೆ ಈ ಸಂಬಂಧ, ಹುಟ್ಟು ಇವ್ಯಾವುದಕ್ಕೂ ಬೆಲೆಯೇ ಇಲ್ಲವೇ. ಕಣ್ಣೆದುರು ಇರುವುದು ತನ್ನ ಅಂಶವೆಂಬ ಅರಿವಿಲ್ಲವೇ? ಇದೆಂತಹ ವಿಚಿತ್ರ ಪರಿಸ್ಥಿತಿ. ಪ್ರಪಂಚದಲ್ಲಿ ಈ ರೀತಿ ಯಾರಾದರೂ ಇದ್ದಾರೆಯೇ? ತನ್ನ ಸ್ವಂತ ಮಗಳನ್ನು ತನ್ನದೇ ರಕ್ತ ಹಂಚಿಕೊಂಡು ಹುಟ್ಟಿದ ಕರುಳಿನ ಚೂರಿನ ಈ ರೀತಿಯ ತಾತ್ಸಾರ ಸಾಧ್ಯವೇ. ತಾನು ಅಪ್ಪನ ಮಗಳೇ ಎನ್ನುವುದಕ್ಕೆ ಅತನ ರೂಪವನ್ನು ಹಂಚಿಕೊಂಡು ಹುಟ್ಟಿರುವುದೇ ಸಾಕ್ಷಿಯಲ್ಲವೇ. ತನ್ನದೇ ರೂಪವನ್ನು ಹೊತ್ತ ಮಗಳು ತನ್ನ ಮಗಳಲ್ಲ ಅಂದರೆ ಏನು ಅರ್ಥ. ಹೆಂಡತಿಯ ಒಲವು ಬೇರೊಬ್ಬನ ಸೊತ್ತಾಗಿತ್ತು ಎಂದೇ ಈ ತಿರಸ್ಕಾರ.

ಛೇ! ಆತನನ್ನು, ಅತನ ನಡವಳಿಕೆಯನ್ನು ನೆನೆಸಿಕೊಂಡರೇ ಮನ ಅಸಹ್ಯಿಸಿಕೊಳ್ಳುತ್ತದೆ. ಈ ಗಂಡು ಜನ್ಮಕ್ಕೆ ಧಿಕ್ಕಾರವಿರಲಿ. ಕೈ ಕೊಟ್ಟ ಅತ, ಕೈ ಹಿಡಿದ ಈತ ಇಬ್ಬರೂ ಅಮ್ಮನ ಬಾಳಿನಲ್ಲಿ ಖಳನಾಯಕರೇ. ಈ ಪ್ರೀತಿ ಪ್ರೇಮ ಅನ್ನೋ ಸೆಂಟಿಮಂಟ್ಸ್ ಅಮ್ಮನನ್ನು ಈ ಪರಿಸ್ಥಿತಿಗೆ ತಳ್ಳಿತು. ಆತನನ್ನು ಮರೆಯಲಾರಳು, ಈತನನ್ನು ಸಹಿಸಲಾರಳು. ಯಾಕೆ ಬೇಕಿತ್ತು ಈ ಇಬ್ಬಗೆಯ ಬದುಕು. ಸದಾ ಕಣ್ಣೀರಿಡುವ ಬದುಕು. ಇಂತಹ ಪರಿಸ್ಥಿತಿ ತನ್ನ ಬದುಕಿನಲ್ಲಿ ಮಾತ್ರ ತಾನು ಬರಗೊಡಲಾರೆ. ಮನಸ್ಸಿನಲ್ಲಿಯೇ ಶಪಥ ಮಾಡಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲಗೆನ್ನ ಮುದ್ದುಮರಿ
Next post ಸೂರ್ಯನ ಪ್ಲಾನು

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…