ಮಲಗೆನ್ನ ಮುದ್ದುಮರಿ ಚಿನ್ನ
ನಿದ್ದೆ ನೇವರಿಸುತಿದೆ ಕಣ್ಣ

ನಡುರಾತ್ರಿ ದಾಟುತಿದೆ ಗಡಿಯ
ಇರುಳು ಬಿಚ್ಚಿದೆ ಕಪ್ಪು ಜಡೆಯ
ಲೋಕವೇ ಮಲಗಿರಲು ಹೊದ್ದು
ಆಟ ಸುರುಮಾಡುವರೆ ಮುದ್ದು?

ಕಣ್ಣೆ ಇದು, ಕಾಂತಿಯಾ ಚಿಲುಮೆ
ಹುಣ್ಣಿಮೆಗು ಇಲ್ಲ ಈ ಹಿರಿಮೆ
ನಿನ್ನ ಕುಲು ಕುಲು ನಗೆಯ ಹನಿಯು
ಬೃಂದಾವನದ ಕೊಳಲ ಹನಿಯು

ಹೂವಿಗೂ ಮಿದುವಾದ ಹೆಜ್ಜೆ-ಆಹ
ಜೀವ ಝಲ್ಲೆನಿಸುವಾ ಗೆಜ್ಜೆ!
ನಿನ್ ತೂಗುವ ಭಾಗ್ಯಕೆಂದೇ
ತೊರೆದೆ ಮರಿ, ಮನೆ ಮಾರು ಲಜ್ಜೆ

ಮೂಗು ತಿದ್ದಿದಳೇನೊ ರಂಭೆ
ನಗಲು ಕಲಿಸಿದಳೋ ಜಗದಂಬೆ
ನನ್ನ ಮಗುವೇ? ನಾನೆ ನಂಬೆ, ದೇವಲೋಕದ್ದೆ ಈ ಗೊಂಬೆ?

ಜೀವದಾಳದ ಬಯಕೆ ನೀನು
ಜನುಮ ಜನುಮದ ಕನಸು ನೀನು
ಒಲುಮೆಯಿಂಪನು ಹೀರಿ ಬೆಳೆದ ಕೆಂಪುತೋಟದ ಕಂಪು ನೀನು!
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)