Home / ಬಾಲ ಚಿಲುಮೆ / ಕಥೆ / ಬೆಳ್ಳಿ ಕಡಗ

ಬೆಳ್ಳಿ ಕಡಗ

ಒಂದು ಕುಗ್ರಾಮದಲ್ಲಿ ಮುದುಕ ಮುದುಕಿ ಇದ್ದರು. ಅವರಿಗೆ ಒಬ್ಬ ಮಗನಿದ್ದ. ಆತ ಹೇಳಿದ್ದನ್ನು ತಿಳಿದುಕೊಳ್ಳಲಾರದಷ್ಟು ದಡ್ಡನಾಗಿದ್ದ. ಮಗನ ಈ ವರ್ತನೆಯಿಂದ ಬೇಸತ್ತ ಅವನ ತಂದೆ-ತಾಯಿ ಪಕ್ಕದ ಆಶ್ರಮದ ಋಷಿಯ ಬಳಿ ಹೋಗಿ `ಸ್ವಾಮೀಜಿ, ಇವನು ನಮ್ಮ ಮಗ ಧನವಂತ. ಇವನು ದಡ್ಡ. ಹೇಗಾದರೂ ಮಾಡಿ ಇವನನ್ನು ಬುದ್ಧವಂತನನ್ನಾಗಿ ಮಾಡಿ. ನಮ್ಮ ಬಳಿ ಇರುವ ಆಸ್ತಿ, ಹಣವನ್ನು ಆಶ್ರಮಕ್ಕೆ ಒಪ್ಪಿಸಿ ನಾವೂ ಇಲ್ಲಿಯೇ ಕೆಲಸ ಮಾಡಿಕೊಮಡು ಇರುತ್ತೇವೆ’ ಎಂದು ಬೇಡಿಕೊಂಡರು. ಧನವಂತನನ್ನೊಮ್ಮೆ ನೋಡಿದ ಋಷಿ `ಆಯಿತು’ ಎಂದರು.

`ಧನವಂತಾ, ನೀನು ಸ್ವಲ್ಪ ದಿನಗಳವರೆಗೆ ಸ್ವಚ್ಛಂದವಾಗಿ ಆಶ್ರಮದಲ್ಲಿ ಸುತ್ತಾಡಿಕೊಂಡಿರು. ಇಲ್ಲಿ ನಿನಗಾಗಿ ಈಜುಕೊಳ, ಪ್ರಾಣಿ, ಪಕ್ಷಿಗಳಿವೆ’ ಎಂದರು. ಸಂತಸಗೊಂಡ ಧನವಂತ `ಆಗಲಿ’ ಎಂದು ಕುಣಿಯುತ್ತ ಹೋದ.

ಸ್ವಲ್ಪ ದಿನಗಳ ನಂತರ ಋಷಿಗಳು ತಾವು ಕಲಿತ ಎಲ್ಲ ವಿದ್ಯೆಗಳನ್ನೂ ಕಲಿಸಿ ಧನವಂತನನ್ನು ಬುದ್ಧವಂತನನ್ನಾಗಿ ಮಾಡಿದರು. ನಂತರ `ನಾನು ಕಲಿತ ವಿದ್ಯೆಯನ್ನೆಲ್ಲ ನಿನಗೆ ಧಾರೆ ಎರೆದಿದ್ದೇನೆ. ನಿನಗೆ ರಾಜನಾಗುವ ಲಕ್ಷಣಗಳಿವೆ. ನಿನಗೊಂದು ಬೆಳ್ಳಿ ಕಡಗ ಕೊಡುವೆ. ಇದು ಸಾಮಾನ್ಯವಾದುದಲ್ಲ. ನೀನು ಕೇಳಿದ್ದನ್ನೆಲ್ಲ ಕೊಡುತ್ತದೆ. ಆದರೆ, ಒಳ್ಳೆಯ ಕಾರ್ಯಗಳಿಗೆ ಮಾತ್ರ ಉಪಯೋಗಿಸು’ ಎಂದು ಹೇಳಿ ಬೆಳ್ಳಿ ಕಡಗವನ್ನು ಧನವಂತನಿಗೆ ಕೊಟ್ಟರು.

ರಾತ್ರಿ ಮಲಗಿದ್ದ ಸಮಯದಲ್ಲಿ ಧನವಂತನ ಮನದಲ್ಲಿ ಕೆಟ್ಟ ಯೋಚನೆಗಳು ಸುಳಿದಾಡಿದವು. ತುಸು ಸಮಯದ ನಂತರ ಆತ ಎದ್ದು ಕುಳಿತು, ಬೆಳ್ಳಿ ಕಡಗವನ್ನು ಕೈಗೆ ಹಾಕಿಕೊಂಡು ನನಗೊಂದು ಅರಮನೆ ಬೇಕೆಂದ. ಕೂಡಲೇ ಅಲ್ಲೊಂದು ಅರಮನೆ ಸೃಷ್ಟಿಯಾಯಿತು. ತನಗೊಬ್ಬ ರಾಜಕುಮಾರಿ ಬೇಕೆಂದ. ಮರುಕ್ಷಣವೇ ಅಲ್ಲಿಗೆ ಒಬ್ಬ ಸುಂದರ ಯುವತಿ ಬಂದಳು. ಹೀಗೆ ಅರಮನೆಯ ರಾಜನಿಗೆ ಬೇಕಾದ ಬೆಳ್ಳಿ, ಬಂಗಾರ, ವಜ್ರ, ವೈಢೂರ್‍ಯ, ಸೈನಿಕರು, ಸೇವಕರು ಎಲ್ಲವೂ ಬಂದವು. ಇದನ್ನೆಲ್ಲ ಗಮನಿಸಿದ ಋಷಿಗಳು `ಧನವಂತ, ಏನಿದು ವಿಚಿತ್ರ’ ಎಂದು ಕೋಪಗೊಂಡರು. ಆದರೆ, ಧನವಂತ ಅದನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ. ಆತ ಅಹಂಕಾರದಿಂದ `ಏ! ಯಾರು ನೀನು? ನಡೆ ಇಲ್ಲಿಂದ’ ಎಂದು ಗದರಿಸಿದ.

`ಥೂ, ಪಾಪಿ, ನೀನು ಸರ್ವನಾಶವಾಗುತ್ತಿ ಹೋಗು’ ಎಂದು ಹೇಳಿ ಋಷಿಗಳು ಅಲ್ಲಿಂದ ಹೊರಟರು.

ಇತ್ತ ಧನವಂತ ತನ್ನ ರಾಜ್ಯದಲ್ಲಿ ದರ್ಪ, ಸೊಕ್ಕಿನಿಮದ ಮೆರೆಯುತ್ತ ಪ್ರಜೆಗಳಿಗೆ ಕಿರುಕುಳ ಕೊಡಲು ಆರಂಭಿಸಿದ. ಅನ್ಯಾಯವಾಗಿ ಭೂಕಂದಾಯ ವಸೂಲಿ ಮಾಡುವುದು, ಭೂಮಿ ಕಬಳಿಸುವುದು, ಪಕ್ಕದ ರಾಜರನ್ನು ಯುದ್ಧಕ್ಕೆ ಆಹ್ವಾನಿಸಿ ತನ್ನ ಬೆಳ್ಳಿ ಕಡಗದ ಸಹಾಯದಿಂದ ಅವರನ್ನು ಸೋಲಿಸಿ, ಅವರ ಸಮಸ್ತ ರಾಜ್ಯವನ್ನೂ ತೆಗೆದುಕೊಂಡು ಆ ರಾಜರನ್ನು ತನ್ನ ಗುಲಾಮರನ್ನಾಗಿಸಿಕೊಳ್ಳುವುದೇ ಅವನ ಬದುಕಾಯಿತು.

ಇದನ್ನೆಲ್ಲ ಅರಿತ ಋಷಿಗಳು ಧನವಂತನಿಗೆ ಕೊಟ್ಟ ಬೆಳ್ಳಿ ಕಡಗವನ್ನು ದಿವ್ಯ ಶಕ್ತಿಯಿಂದ ತಮ್ಮ ಬಳಿ ಬರುವಂತೆ ಮಾಡಿದರು. ಕೂಡಲೇ ಬೆಳ್ಳಿ ಕಡಗ ಋಷಿಗಳ ಹತ್ತಿರ ಬಂತು. ಅಂದಿನಿಂದ ಧನವಂತ ಹಂತ ಹಂತವಾಗಿ ಎಲ್ಲವನ್ನೂ ಕಳೆದುಕೊಂಡ. ತನ್ನ ತಪ್ಪಿನ ಅರಿವಾಗಿ ಪುನಃ ಋಷಿಗಳ ಹತ್ತಿರ ಬಂದು ತನ್ನ ತಪ್ಪನ್ನು ಮನ್ನಿಸುವಂತೆ ಕೇಳಿಕೊಂಡ. ಅವನ ಕೋರಿಕೆ ತಿರಸ್ಕರಿಸಿದ ಋಷಿಗಳು `ನಿನ್ನನ್ನು ಶಿಷ್ಯನನ್ನಾಗಿ ಮಾಡಿಕೊಂಡಿದ್ದೇ ತಪ್ಪು, ನಡೆ ಆಚೆ’ ಎಂದರು. ಧನವಂತನ ಹೆಂಡತಿ ಅಳುತ್ತ `ಸ್ವಾಮೀಜಿ, ನನ್ನ ಗಂಡನದು ತಪ್ಪಾಗಿದೆ. ಮನ್ನಿಸಿ. ನಿಮ್ಮ ಸೇವೆ ಮಾಡಲು ನಮಗೆ ಅವಕಾಶ ಕೊಡಿ’ ಎಂದು ಬೇಡಿಕೊಂಡಳು. ಋಷಿಗಳು ಕಡೆಗೊಮ್ಮೆ ಆ ಮಾತಿಗೆ ಒಪ್ಪಿದರು. ಮುಂದೆ ಧನವಂತ ಸನ್ಮಾರ್ಗದಲ್ಲಿ ನಡೆದು ತನ್ನ ತಪ್ಪನ್ನು ತಿದ್ದಿಕೊಂಡ. ಆಶ್ರಮದಲ್ಲೇ ಇದ್ದು ಋಷಿಗಳ ಸೇವೆ ಮಾಡುತ್ತ ಕಾಲ ಕಳೆದ.

     *****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...