ಹುಲಿಯು ಚೆಕ್ಕಿನ ಹತ್ತಿರ ವಿದ್ಯೆಯನ್ನು ಕಲಿಯುವುದಕ್ಕೆ ಹೋಯಿತು. ಬೆಕ್ಕು “ಅಯ್ಯಾ! ನಿನಗೆ ಸಿಟ್ಟು ಬಹಳ, ನೀನು ಆ ಸಿಟ್ಟು! ಬಿಟ್ಟರೆ ಆಗಬಹುದು” ಎಂದಿತು. ಹುಲಿಯು “ಹಾಗೇ ಆಗಲಿ” ಎಂದು ಒಪ್ಪಿ ಕೊಂಡಿತು. ಬೆಕ್ಕು ಅಕ್ಕರೆಯಿಂದ ಕಲಿಸಲು ಮೊದಲು ಮಾಡಿತು.
ಆದರೆ ಬೆಕ್ಕಿಗೆ ಬಹಳ ಬುದ್ಧಿ. ತನಗಿಂತ ಗಾತ್ರದಲ್ಲಿ ದೊಡ್ಡದಾದ ಹುಲಿಯು ಮೇಲೆ ಬಿದ್ದರೆ ತಾನು ಉಳಿಯುವುದು ಅನುಮಾನವೆಂದು, ದೂರದಲ್ಲಿಯೇ ಇರುತ್ತಿತ್ತು. ಗುಟ್ಟರೆ ಹಾಕುವುದು, ಸದ್ದಾಗದಂತೆ ನಡೆಯುವುದು, ಪೊದೆಗಳಲ್ಲಿ ಅವಿತುಕೊಳ್ಳುವುದು, ಗುರಿಯಿಟ್ಟು ಹಾರುವುದು ಮೊದಲಾದ ವಿದ್ಯೆಗಳನ್ನು ಹೇಳಿಕೊಟ್ಟಿತು. ಹುಲಿಯು ಬಹಳ ವಿಧೇಯನಾಗಿ ಎಲ್ಲವನ್ನೂ ಕಲಿತುಕೊಂಡಿತು. ಅಲ್ಲಿಗೆ ಒಂದು ವರುಷವಾಯಿತು.
ಎರಡನೆಯ ವರುಷ ಕೊಂಚ ಕಷ್ಟದ ಪಾಠಗಳಿಗೆ ಆರಂಭವಾಯಿತು. ಕತ್ತಲಲ್ಲಿ ನೋಡುವುದು, ಹೊಂಚು ಹಾಕುವುದು, ಬಾಲವನ್ನು ನೆಲಕ್ಕಪ್ಪಳಿಸುವುದು, ಇವೆಲ್ಲವನ್ನೂ ಕಲಿತುಕೊಂಡಿತು.
ಮೂರನೆಯ ವರುಷ ಇನ್ನೂ ಕಷ್ಟದ ಪಾಠಗಳು. ಆದರೆ ಆಲ್ಲಿ ಕಲಿಯುವುದು ಹೆಚ್ಚಾಗಿರಲಿಲ್ಲ. ಆ ವರ್‍ಷ, ಉಗುರುಗಳನ್ನು ಬೇಕಾದಾಗ ಈಚೆಗೆ ಬಿಡುವುದು, ಬೇಡವಾದಾಗ ಒಳಗೆ ಎಳೆದುಕೊಳ್ಳುವುದು ಇದೊಂದು, ಮರ ಹತ್ತುವುದೊಂದು, ಹೀಗೆ ಎರಡೇ ಕಲಿಯಬೇಕಾಗಿದ್ದುದು. ಹುಲಿಯು ಉಗುರನ್ನು ಬಿಟ್ಟು ಎಳೆದುಕೊಳ್ಳುವುದನ್ನು ಕಲಿತುಕೊಂಡಿತು. ಬೆಕ್ಕು ಮರವನ್ನು ಹತ್ತುವುದನ್ನು ಹೇಳಿಕೊಡುತ್ತದೆ. ಎಷ್ಟುಸಲ ಹೇಳಿದರೂ ಹುಲಿಯು ಎಲ್ಲೋ ನೋಡಿಕೊಂಡಿತ್ತು. ಅದಕ್ಕೆ ತಿಳಿಯಲಿಲ್ಲ. ಅದಕ್ಕಾಗಿ ಬೆಕ್ಕು ಅದನ್ನು ಬೆತ್ತದಿಂದ ಹಾಗೆಂದಿತು, ಹುಲಿಯು ತಿರುಗಿ ತಟ್ಟನೆ ಮೇಲೆ ಬಿತ್ತು. ಆದರೆ ಬೆಕ್ಕು ಬಹಳ ಎಚ್ಚರಿಕೆಯಿಂದಿತ್ತು. ಹುಲಿಗೆ ಸಿಕ್ಕಲಿಲ್ಲ. ತಟ್ಟನೆ ಮರವನ್ನು ಹತ್ತಿ ಕೊಂಡಿತು. ಹುಲಿಗೆ ಮರ ಹತ್ತಲು ಆಗಲಿಲ್ಲ. ಆಗ ಅದಕ್ಕೆ “ನನಗೆ ಮರವನ್ನು ಹತ್ತುವುದು ಬರುವುದಿಲ್ಲ” ಎಂಬುದು ನೆನಪಿಗೆ ಬಂತು.
ಮತ್ತೆ ಬೆಕ್ಕು ಅವಿಧೇಯನಾದ ಹುಲಿಯನ್ನು ನಂಬಲಿಲ್ಲ. ತನ್ನ ಕೆಟ್ಟ ನಡತೆಗಾಗಿ ಹುಲಿಯು ಬಹಳ ನೊಂದುಕೊಂಡಿತು. ತಾನು ವಿಧೇಯನಾಗಿರುವೆನೆಂದು ಹೇಳಿಕೊಂಡಿತು. ಬೆಕ್ಕು “ನೀನು ಅವಿಧೇಯ. ಹೇಳಿದ ಹಾಗೆ ಕೇಳುವವನಲ್ಲ. ನಿನಗೆ ನಾನು ಪಾಠ ವನ್ನು ಹೇಳುವುದಿಲ್ಲ” ಎಂದು ಹೇಳಿಬಿಟ್ಟಿತು. ಹುಲಿಯು ಅತ್ತು, ಕಣ್ಣೀರು, ಕರೆಯಿತು. ಆದರೂ ಬೆಕ್ಕು ಮರ ಹತ್ತುವುದನ್ನು ಅದಕ್ಕೆ ಕಲಿಸಿ ಕೊಡಲಿಲ್ಲ. “ನನಗೆ ಮರ ಹತ್ತುವುದು ಬರುನುದಿಲ್ಲ” ಎಂದು ಹುಲಿಯು ಈಗಲೂ ಅಳುವುದಂತೆ.
*****