ತೋಟವ ನೋಡಿರಯ್ಯಾ ಸದ್ಗುರುವಿನ
ಆಟವ ನೋಡಿರಯ್ಯಾ || ಪ ||

ನೀಟಗೂಡಿ ನಿಜ ಬ್ರಹ್ಮಜ್ಞಾನದಿ
ಕೋಟಿ ಕರ್ಮ ಸಂಹರಿಸಿದ ಧರ್ಮವ ||ಅ.ಪ.||

ಬೈಲೊಳು ಬೈಲಾಗಿ ಕವಲಿಲ್ಲದ
ಮೂಲ ಸಹಿತವಾಗಿ
ಜೋಲುವ ಫಲಗಳು ಗಾಳಿಗೆ ಒಲಿಯಲು
ಸಾಲು ಸಾಲಿನ ಮೇಲೆನಿಸುವವರ ||೧||

ಭೂಮಿಯೊಳಧಿಕವಾದ ಎಲವಿಗಿಯೆಂಬ
ನಾಮದಿಂದಿಹ ಗ್ರಾಮದಾ
ರಾಮಜೋಗಿಯು ತಾನು ಪ್ರೇಮದಿ ಬೆಳಸಿದ
ಕೋಮಲ ವನದೋಳು ರಾಮನು ನೆಲಸಿದ ||೨||

ಅಡಿಕಿ ತೆಂಗಿನ ಫಲವು
ಬಳಿಕ್ಯಾಡುವ ಬಾಳೀದಿಂಡಿನ ಛಲವೂ
ಕಡಿಕಿನಿಂ ಶಿಶುನಾಳ ಒಡಿಯ ನಿರ್ಮಿಸಿದಂಥಾ
ಅಡಿಪ್ರಾಸ ಹೊಂದಿದ ಕಡು ಚಲ್ವ ಪದವೆಂಬ ||೩||

****