ಓಂ

ವೇದಭೂಮಿಯೊಳಿಹ ಕಡುಸಾಹಸದ ನೆಲೆಗೆ ಮಿ
ತಿಯಿಲ್ಲ, ಕೊನೆಯಿಲ್ಲ;  ಪುರುಷ ಸ್ತ್ರೀಯರುವೆಂದು
ನೀತಿಯಲಿ ಧೈರ್ಯದಲಿ ಛಲದಲ್ಲಿ ಧರ್ಮ ಭೂ
ಮಿದುರೊಳೀ ಭೇದವಿಹುದಿಲ್ಲ;  ವಿಶ್ವವಿದನಂ
ತ; ಅನಾದಿಕಾಲದಿಂ ಈ ಕ್ಷೇತ್ರ ಶೌರ್ಯ ಸ-
ದನವದು; ಕಡು ಹೇಡಿಗಳಾ ಬೀಡು ತಾನಲ್ಲ!

ಮೊರೆಯಿಟ್ಟು ಮತಿಗೆಟ್ಟು ಛಲಸಿದ್ಧಿ ದುರ್ಬುದ್ಧಿ
ಯಿಂದ ಈ ಜಗರಂಗದೆಡೆ ಪರದೆಯೊಳು ನಿಂತು
ಶತವರ್ಷ ದುರ್ನಟನಾ ದೃಶ್ಯವನು ತೋರಿದೊ-
ಡಿನ್ನೆಲ್ಲಿ ಶೋಭನವು?  ಭರತ ಶಾಸ್ತ್ರವು ಅಖಿಲ
ಶಸ್ತ್ರ ಸಾಮ್ರಾಜ್ಯಕನ್ವಯಿಸಿ ಕ್ಷಾತ್ರದೀವಿ
ಗೆಯನ್ನು ಕಡೆತನಕ ಬೆಳಗಿಪುದು!  ಕಾಣಿಪುದು!!

ವೇದಗಳೂ ಹಾಡುವುವು ತೃಣಕಾಷ್ಠದಿಹ ಪೌ-
ರುಷವ; ಶ್ರುತಿಗಳಿಹ ಝೇಂಕಾರವಾಚಾರ
ಸಂಪನ್ನವದು; ಸಹಸ್ರಾರು ಶ್ಲೋಕಗಳು ಘರ್ಜಿ
ಪುವು ಹಾಡುಗಳ ಶೂರತನ ಧೀರತನ!  ಗಂಡು
ಸರ ಹೆಂಗುಸರ ಕಂಠಗಳೂ ಶೋಭನವು ಸ್ತುತ್ಯ
ಗಾನಗಳ ಹಾರದಲಿ; ಕಾಣಿಕೆಯ ದಾರದಲಿ.

ಒಮ್ಮರದೊಳಸುರಾಗಿ ಒಂದರಲಿ ಕೆಂಪಾಗಿ
ಒಂದರಲಿ ಬಿಳಿದಾಗಿ ಪುಷ್ಪಗಳ ನಸುನಗೆಯು.
ಒಂದರಸಿ ಕರ್ಮುಡಿಯೊಳಿನ್ನೊಂದು ತಿಪ್ಪೆಯಲಿ
ಕೂಡಿಹುದು; ಜನವೊಂದೆ, ಭಾಳದಕ್ಕರ ರೀತಿ
ಒರಟಾಗಿ ನಯವಾಗಿ ಕೆತ್ತಿಹುದು ಡೊಂಕಾಗಿ.
ಅಂತಂತೆ ಕುಣಿಯಿಪುವು ಬಾಳುವೆಯಲೀ ಜನವ-

ಇತಿಹಾಸವೆಂಬೊಂದು ಪುಣ್ಯಯಾತ್ರೆಯ ಹಾದಿ;
ವೇದಭೂಮಿಯೊಳಿಹ ವಿಶಾಲತೆಯನು ನೋಡಿ ನ
ಡೆವ ಮಾರ್ಗ ತಾನಲ್ಲ, ಮಾನಸಿಕ ನಡೆಯುವಿಕೆ.
ನೋಡುವಿಕೆ, ವೈಭವ ವೈಚಿತ್ರ್‍ಯಗಳ ತಿಳಿಯುವಿಕೆ;
ಗತಕಾಲ ಜೀವಿತದ ಛಾಯೆಯನುಭವ ರೂಪ!-
ಸಮರಗಳ ಸಾಹಸದ ರಾಜ್ಯಗಳ ವ್ಯಾಜ್ಯಗಳ!!

ಸಿರಿಯಡುವೆ ಧನಿಗಿಹದಿ ಕಲ್ಲೆಡೆಯೊಳಿಹ ಹೊನ್ನು;
ಕಾರ್ಯಸಫಲತೆಯದುವೆ ಸರ್ವವನು ತೊರೆದ ಹಿ-
ತೈಷಿಯ ಧನವು;  ಧಾರಿಣಿಯ ಭಿಕ್ಷುಕಗೆ ದಿನಕೆ
ಪೈಯೊಂದೆ ಸಂಪತ್ತು;  ದಿನದಿನವು ಹೊರೆದುಂಬ
ಜನಕಿಹದೆ ಹಿಡಿಯನ್ನ ಸಿರಿಯಂತೆ-ಕವಿಗಹುದ
ಪರಂಜಿಯದು ಕಲ್ಲೆದೆಯ ತೊಯಿಪ ವಿಚಾರಗಳು.

ಮಾಮರವನೇರೇರಿ ಮಧುಮಾವನೊಂದು ಕೆಳ
ತಪ್ಪಂತೆ;  ಹಿಮಗಿರಿಯೊಳೆಲ್ಲೆಡೆಯು ನೋಡ್ಯೊಂದು
ವರ ಮೂಲಿಕೆಯನೆಳೆತರುವಂತೆ;  ಇತಿಹಾಸಗ
ಳಗಾಧ ಪಂಕ್ತಿಗಳೆಡೆಯಿಂದ ಸುಭೋಧನೆಯ
ಕಥೆಯೊಂದನೆಳೆತಂದು ಬಣ್ಣವನು ಹರಿಯಿಸಿದೆ.
ಶಬ್ಧಗಳ ಚೆಲ್ಲಾಡಿ ರಸವನೊಸರಿಸಿದೆನಿದಕೆ!

ಕತ್ತಲೆಯ ಕಾಲದಲಿ ಜನರ ಕೆಯ್‌ಗೈಮೆಗಳು
ಕಟ್ಟುಗ್ರದಿಂದೆಸೆದು ಕಟ್ಟಾಳ ಬಾಳಲ್ಲವೊ?
ಇಂದಿಂದಿಗಾರಾರೊ ಎಂತೆಂತೊ ತಿಳುಹುತಾ
ಊಹನೆಯ ಸಾಧನೆಯಿಂದೆಮ್ಮಲ್ಲೆ ಕತ್ತಲೆಯು!
ನೋಡುವೆವು ಬೆಳಕೆಂದು ದಿಟ್ಟಿಯದೊಯ್ಯುವುದು
ಶತಮಾನ ಕೆಲವಕ್ಕೆ!  ಪಿಂಪ್ರಭೆಯದೆಂತಿರ್ದಿತೊ?

ರಾಜ್ಯವನು ಕಟ್ಟಿದರು ನಿಮಿಷದಲಿ ಚೂರಾಗಿ
ಕಾಡಿದರು ಬೇಡಿದರು;  ಪೌರುಷದಿ ಮಡಿದನಿತು
ಮತಗಳನು ಜನಪ್ರೀತಿ ಜನಸೇವೆಯಿಂದಲು
ಹೊರಡಿಸುತ, ಪಲಕಾಲಕಂತದುವೆ ಬೀಳುತಾ
ಪರದೇಶದಿಂ ಸಹಸ್ರಸಾರಿ ಸಾಲಾಗಿ ಜನ
ಕೂಡಿದರು ಬೀಡಿದಕೆ;  ರುದ್ರಭೂಬಯಲಾಗಿ!!

ಹಿಂದಿನದು ಇಂದಕ್ಕೆ, ಇಂದಿನದು ಮುಂದಕ್ಕೆ
ಅಂದಿನದು ವಿಚಿತ್ರ ಇಂದಿನದು ಕುತಂತ್ರ-
ಮಾನವನೆ ಬಲುಮೋಹಿ ಹಿಂದಿನಿಂದಿನದೆಂದು!
ಹೈಂದವ ಮಹಸಾಮ್ರಾಜ್ಯ ಕೀರ್ತಿತೊಟ್ಟಿಲೊಳು
ಪೂರ್ವಾಪರಕತ್ತಿತ್ತ ವಿಲಾಸದ ತೂಗಿನಲಿ
ಮೈಮರೆದು ಕಳೆಗುಂದಿ ಮೊನ್ನೆದಂ ನೆನೆಸುತಿದೆ!

ಆರ್ಯ ನೆತ್ತರ ದಮನಿ ಪಾವನವು ಸ್ಫೂರ್ತಿಮಯ!
ಹೊಸವರ್ಷ ಮಳೆಜೋರು, ಮಣ್ಣುಕ್ಕಿ ನೆರೆಯಿಂದ
ವೆಂಬಂತೆ ಹೊಸಮಕುಟ ಹೊಸರೀತಿ ಶಾಸನವು
ವಿಧವಿಧದೆ ವಾಣಿಜ್ಯ ಮಾರುತದ ತೆರೆಯಂತೆ
ಏಳುವುದು ಬೀಳುವುದು;  ಪೊಂದುತಲಿ ಕಷ್ಟವನು
ದುಃಖವನು, ಜನಗಣವು ದೇಶವೇ ಕೋಟ್ಯಾದಿ!

ಹೆಣ್ಣೊಂದು ಹೊನ್ನೊಂದು ಮಣ್ಣೊಂದು ಎಂಬಂತೆ
ಮಾನವನ ಹೃದಯ ಮೂಲವಂ ಕೊರೆಯುವುದು
ಋಷಿವರ್ಯ ಪಂಡಿತರು ಜ್ಞಾನಿಗಳುಮೆಲ್ಲ ಸಾ
ಲಾಗಿ ಎದೆದುಂಬಿ ಸಂತೈಸಿಹರತ್ಯಾಶೆ ಮೂಲ
ವಂ ಕಿತ್ತೊಗೆಯಲು!  ಮಳೆಯನಿಳೆಯಿಂ ತಡೆದು ನಿಲಿ-
ಸಲಂಭುಧಿಯ ಜಲಿವಾರಿಸೆ ತೊಡಗಿ ಸಾಧಿಪರೆ?

ಜಡಿಮಳೆಯು ಜರಜರನೆ ದಿನಹಲವು ಹೊಡೆಯಲಿ
ಒಣಗಿಸದೆ ತಂಭೂಮಿಯನು ದಿನಕೆ ರವಿಬಂದು?
ಚೆಂಜೇನ ಕೂಡಿಸಲಿ ತಾಸುಮಾಸಗಳೆಲ್ಲ
ನಿಮಿಷೊಂದೆ ನಿರ್ಘೃಣನ ಕೈಹಿಡಿತವಾಗದೇ?
ಕ್ರಿಮಿಯೆಂಬ ದಯವುಂಟೆ?  ಜನವೆಂಬ ಮತಿಯುಂಟೆ?
ಧರ್ಮದಾಸ್ಥಾನಕೆ ಬಹುಮಾನದೊಂದಿರವುಂಟೆ?

ಆರ್ಯ ಮೂರ್ತಿಗಳದೃಶ್ಯ ಜಗವೀರ ಸಿಕಂದ
ರನಾಗಮನ; ಸನಾತನ ಧರ್ಮದಲಶ್ರದ್ಧೆ ಆ
ವಿಶ್ವಗುರು ಗೌತಮನ ಮೂರ್ತಿಯೂ, ಅನಾಯಕ
ತೆ ಬರೂರಿ ರಾಜ್ಯದಲ್ಲೋಲಕತೆ ಅಡಗಿಸಿದ
ಪಾವನ ವರಮೂರ್ತಿ ಪ್ರಿಯದರ್ಶಿ; ಗಣ್ಯ ಮೂ
ರ್ತಿಗಳಂತು ಭಾರತವು ಸ್ತುತ್ಯವಿಂದಂತೂ.

ಪುಷ್ಯಮಿತ್ರ ಗುಪ್ತಾದಿ ಮಿತ್ರರೂ, ಹರ್ಷಕ್ಬ
ರಾದಿ ಸುಚರಿತ್ರರೂ, ಪ್ರಥಪ ಶಿವಜಿ ಪ್ರ
ತಾಪರೂ, ಮೇಲ್ಮೇಲೆ ನೆನಹು ಭಿತ್ತಿಯನುತ
ಟ್ಟುವರು, ಭಾರತವು ಧನ್ಯಸಲೆ!  ಅನ್ನೆಯದ ಪ್ರ
ತಿರೂಪ ನೀಲಾಂಬುಧಿ ಮಧ್ಯವಿಹ ನಕ್ರತಿಮಿಂ
ಗಿಲದಂತೆ ಅಲ್ಲಲ್ಲಿ ಶೋಭನೆಯ ತಡೆಯದೆ?

ಯಾರಾರು ಎಂತೆಂತು ಬಾಳಿಲ್ಲ ಬದುಕಿಲ್ಲ?
ಕವಿತಾನು ಹಾಡಾಡಿ ಕೊಚ್ಚೆನೀರನು ಬೊಗಸೆ
ಯೊಳುವಿಟ್ಟು ತೀರ್ಥವಿದಪ್ಪಯ್ಯ ಎಂದಂದು ನೀ
ಡಿತಾ ಮರಳುಗೊಳಿಸುವುದೆ?  ನಾತಿಂದ ಬೇವಿನೆ
ಲೆಯಂ ತುತಿಸಿ ಪೊಗಳೀದರೇಂ ಗ್ರಹಿಪರೆಂದು ನಾ
ನೋಡುವೆನೆ?  ಬಾಯ್ದಣಿಯ ಇನಿದೆಂದು ಪಾಡುವೆನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೩೪
Next post ಚಂದ್ರನ ವಿವರಣೆ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…