ವಿವಸ್ತ್ರೆ ವಿವಿಯನ್ ಬಾತ್‌ಟಬ್ಬಿನ
ಬೆಚ್ಚನೆ ನೀರಿನ ಖುಷಿಗೆ ಅರ್ಧ ನಿಮೀಲಿತ
ನೇತ್ರೆ, ನಿಶ್ಚಲೆ; ಚೂಪಿಟ್ಟ ಕಠಿಣ ಮೊಲೆ
ತೊಡೆ ಸಂದಿಯ ಕೂದಲ ಸುರುಳಿಗಳು

ಬಿಟ್ಟು ಕೊಟ್ಟಿದೆ ತಮ್ಮನ್ನು ತಾವೆ ನೀರಿಗೆ
ತೆರೆದೂ ತೆರೆಯದ ಯೋನಿ ಮುಚ್ಚಲಾರದೆ
ಬಿಚ್ಚಿದಂತಿದೆ ಬಿಚ್ಚಿದರೂ ಬಿಟ್ಟುಕೊಡದಂತೆ
ಎಲ್ಲವೂ ಗಹನ ಎಷ್ಟೋ ಮೇಲೆ ಒಂದು ವಿಮಾನ

ಹಾರಿಹೋಗಿರಬಹುದು ಕೆಳಗೆಲ್ಲೊ ಬೆಕ್ಕು
ಚೆಲ್ಲಿರಬಹುದು ಹಾಲಿನ ಪಾತ್ರೆ ಕರೆಗಂಟೆ
ಬಾರಿಸುತ್ತಲೇ ಇರಬಹುದು-ಇವಳು ಮಾತ್ರ
ಹಿಡಿದಿಟ್ಬುಕೊಂಡಿದ್ದಾಳೆ ಧಾವಿಸಲು ತುಯ್ಯುವ

ಜಗತ್ತಿನ ಪ್ರಕ್ಷುಬ್ಧ ಕ್ಷಣಗಳನ್ನು ತನ್ನ
ದೇಹದ ಕಣಕಣಗಳಲ್ಲಿ-ತಾನು
ಮಗ್ಗುಲು ಬದಲಿಸಿದರೆ ಆಸ್ಫೋಟ
ಚಲಿಸಿದರೆ ಪ್ರಳಯ ಎಂಬ ರೀತಿಯಲ್ಲಿ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)