ಹೇಗೆ ಹೋದನೇ ಹರಿ ನಮ್ಮನೆಲ್ಲ ತೊರೆದು
ಹೇಗೆ ಹೋದ ಮಧುರೆಗೆ ನಮ್ಮೆದೆಯನು ಇರಿದು?
ಮಾಯೆಯನ್ನು ಹರಡುತಿದ್ದ
ಮುರಳಿಯನ್ನು ತ್ಯಜಿಸಿ
ಮೈಗೆ ಒರಗಿ ನಿಲ್ಲುತಿದ್ದ
ಸುರಭಿ ಹಿಂಡ ಸರಿಸಿ
ನಂದಗೋಪಿ ಬಂಧು ಬಳಗ ಎಲ್ಲರ ಹುಸಿ ಮಾಡಿ
ಹೋದನಲ್ಲ ಕೊನೆಗೂ ಮಧುರೆಯ ರಥವೇರಿ
ಪ್ರತಿ ಇರುಳೂ ಬೀಸುವುದು
ಚೀರುಲಿ ಥರ ಗಾಳಿ
ಹಸು ಕರುಗಳ ಕಣ್ಣಲ್ಲಿ
ಹಳೆ ನೆನಪಿನ ಧಾಳಿ
ಮುಸು ಮುಸು ಅಳುವಂತೆ ದಡವ ನೂಕಿ ನಡೆವ ಯಮುನೆ
ಗೋಕುಲದ ಗೋಳಿಗೀಗ ನರಕದ ವ್ಯಥೆ ಸಮನೆ?
***
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.