ಬಲ್ಲೆ ನಿನ್ನ ಮನಸ ಸಖೀ
ಬಲ್ಲೆ ನಿನ್ನ ಕನಸ
ಇಲ್ಲಿದ್ದೂ ಎಲ್ಲೋ ಮನ
ಏನೋ ಶಂಕೆ ಹರುಷ

ಅವನ ಕಂಡ ಗಳಿಗೆಯೇ
ಹರಣ ಹಾರಿ ನಿಂತೆಯೇ
ಉರಿವ ದೀಪ ನಿನ್ನ ನೇತ್ರ
ಬರೆಯುತಿಹವು ಕತೆಯನೇ

ಹೋದಲ್ಲಿಗೆ ಒಯ್ಯುತಿರುವೆ
ಅವನ ಸ್ಮರಣೆ ಬಿಂಬ
ಗಾಳಿಗೆ ಮರ ತೂಗುತಿರುವೆ
ಧ್ಯಾನ ಮನದ ತುಂಬ

ಎಲ್ಲಿರುವನೊ ಬಲ್ಲೆಯೇನೆ
ಹೃದಯವಾಯ್ತು ಹೋಳು
ನಿನ್ನೊಳಿರುವ ಇಡಿಯಾಗಿ
ಸುಳ್ಳೋ ನಿಜವೋ ಹೇಳು!
*****

ಪುಸ್ತಕ: ನಿನಗಾಗೇ ಈ ಹಾಡುಗಳು