ಅರುಣೋದಯವಾಗೆ, ರಾಗರತಿ ರಂಗೇರಿ ಬಾನಿನಲ್ಲಿ ರಂಗಿನ ಓಕುಳಿಯಾಟ. ಗರತಿ ಸೆರಗುಕಟ್ಟಿ ಅಂಗಳದಲ್ಲಿ ಮಂಗಳದ ರಂಗವಲ್ಲಿ ಬಿಡಿಸುತ್ತಾ ಹಾಡು ಗುನುಗುತ್ತಿದ್ದಾಳೆ. ಹೃದಯದಲ್ಲಿ ಒಂದು ರಾಗಲಹರಿಯ ಚಿಲುಮೆ. ಮತ್ತೆ ಮನೆ ಗುಡಿಸಿ ಸಾರಿಸಿ ಓರಣ ಮಾಡುವಾಗ ಮತ್ತೊಂದು ರಾಗ ಲಹರಿ. ಕೆರೆಯ ತಂಪು ಜಲದಲ್ಲಿ ಮೀಯುವಾಗ ಮತ್ತೊಂದು ಸಂತಸದ ಲಹರಿಯ ಗೀತೆ. ನೀರಿನ ಕೊಡ ಹೊತ್ತು ನಡೆವಾಗ ತುಂಬಿದೆದೆಯ ಹಾಡು. ಮನೆಯೊಡೆಯನ, ಮಕ್ಕಳ ಸೇವೆಯಲ್ಲಿ ಮಗದೊಂದು ಹಾಡು. ಅಡಿಗೆ ಮಾಡುವಾಗ ಅಗ್ನಿ ದಿವ್ಯವಕೆ ಮತ್ತೊಂದು ಬೆಚ್ಚಗಿನ ಹಾಡು, ರಾಗಿ ಬೀಸುವಾಗ ಸರಾಗದ ಹಾಡು, ಮಲಗುವಾಗ, ಏಳುವಾಗ, ಕುಳಿತುಕೊಳ್ಳುವಾಗ, ಕೆಲಸ ಮಾಡುವಾಗ, ಎಲ್ಲಾ ಘಳಿಗೆ ಘಳಿಗೆಗೂ ಹಾಡಿನ ಚಿಲುಮೆ. ಕ್ಷಣದಲ್ಲಿ ಲೀನಮನ, ಆನಂದಘನವಾದಾಗ ಹೃದಯವೆಷ್ಟು ಹಗುರ. ಇಲ್ಲಿ ಹೊಮ್ಮುವುದೆಲ್ಲಾ ಹಾಡು, ಹೃದಯ ಭಾರವಾದಾಗ, ಹೆಪ್ಪುಗಟ್ಟಿದಾಗ, ಹೊರಹೊಮ್ಮುವುದು ಪಾಡು. ಅದು ಮೌನದ ಬೀಡು. ಕಡ್ಡಿ ಕಸದ ಗೂಡು. ಹಾಡು ಪಾಡಿನ ಗಡಿಯ ಮಧ್ಯದಲ್ಲಿ ಹೃದಯ ಗುಡಿಯಾದಾಗ ಗರತಿ ಗಂಟಲಿನಲ್ಲಿ ಮೂಡಿತ್ತು ಹಾಡಿನ ಜ್ಯೋತಿ!
*****








