ಮನವಿರಲಿ ಇರದಿರಲಿ
ಬರೆಯಬೇಕು
ಹಣ ಕೊಡಲಿ ಕೊಡದಿರಲಿ
ದುಡಿಯಬೇಕು!
ಮಾತು ಮಾತಿಗೆ ತಪ್ಪನೆಣಿಸಿದರು ಹೌದೆಂದು
ಬೀತ ನರಪೇತನೊಲು ಯೋಗ್ಯತೆಯ ಮರೆತಿಂದು
ಸೋತ ಕಾಲಿನ ಕುಣಿತ ನಿಂತರೂ ನಿಲದೆಂದು
ಪ್ರೇತವಾಗಿದ್ದರೂ ಸ್ಫೂರ್ತಿ ನನಗುಂಟೆಂದು-
ತಿಳಿದು ಹೊಟ್ಟೆಯ ಹೊರೆವ ಬಾಳು ಬಾಳೆ?
ಕೊಳೆತು ನಾರುವ ರಕ್ತ ಮಾಂಸಮೂಳೆ!
ನೆತ್ತರಿನ ಕಾಳ್ಕುದಿತ ಹೆಚ್ಚಿದೊಡಮೇನುಂಟು?
ಸತ್ತು ಸುಖಿಸುವುದೊಂದೆ ಬಾಕಿಯುಂಟು
ಅತ್ತತ್ತು ಕಂಬನಿಯ ಕಾಲುವೆಯ ಹರಿಸಿದರು
ತುತ್ತು ಕೂಳಿಗೆ ಕಾಲಿನೊದೆತ ಕೊಸರು!
“ನನ್ನ ಕೂಲಿಯು ನೀನು; ನಾನೀಯೆ ನಿನಗುಂಟು
ನನ್ನ ಧರ್ಮದ ನೆಳಲಿನಲ್ಲಿ ನೀನು
ನನ್ನಿಂದಲೇ ನೀನು-ನಿನಗೆಲ್ಲಿ ಅಸ್ತಿತ್ವ?
ನನ್ನ ಕಾಲಿಗೆ ಬೀಳು ದೇವ ನಾನು”
ಎಂಬ ಮಾತನು ಕೇಳಿ
ತುಂಬ ರೋಷವ ತಾಳಿ
ಜೀವ ಹೋರಾಟಕ್ಕೆ ಹೊಂಚುತ್ತಿದೆ
ಸಾವಿನರಮನೆಗಾಗಿ ಬಯಸುತ್ತಿದೆ!
ಜೀವಿಗೆಲ್ಲಿದೆ ಸಾವು
ಸಾವಿಗೆಲ್ಲಿದೆ ನೋವು!
ಇದರಂಶರಂಗವನ್ನರಿಯ ಬೇಕು
ಪದರುಗಳ ಪರ್ಯಂತ ಸಾಗಬೇಕು
ಕಂಡು ಕಾಣುವ ವಸ್ತುಗಳಿಗೆಲ್ಲ ಸಾವಿಲ್ಲ
ಎಂದೊ ಸಾರಿದ ಮಾತು; ಇಂದೆ ಅಲ್ಲ;
ದಂಡು ದಾಳಿಗಳಿಂದ-ಅಣುವಿಂದ ಕೊನೆಯಿಲ್ಲ
ಮುಂದಕೂ ಇದೆ ಮಾತು-ಸಟೆಯಿದಲ್ಲ
ಎನಿತು ಕೂಗಿದೊಡೇನು ನಿರ್ವಾತ ತಾಣದಲಿ?
ಅನಿತು ದೈಹಿಕ ಶ್ರಮವೆ ಅಲ್ಲವೇನು?
ಹೆಚ್ಚು ಮಾತಿಂದೇನು? ಹುಚ್ಚುತನವಾದೀತು
ಮುಚ್ಚು ಕಣ್ಣನು ಮತ್ತೆ ತೆರೆಯದಂತೆ!
ನೈರಾಶ್ಯ ಭಾವನೆಯ ಬೇರು ಚಿಗುರೊಡೆದಂತೆ –
ಕಾಣುತಿದೆ; ಸತ್ಯವೋ? ಏನೋ ಎಂತೊ?
ಸ್ವೈರವೃತ್ತಿಯ ರಣದಿ ಆಶಾನಿರಾಶೆಗಳು
ಗೊಣಗುತ್ತಿದ್ದರು ಸರಿಯೆ-ಏನು ಚಿಂತೆ?
* * *
ಎದುರಿಸೆಲೊ ಬಂದುದನು ಬಂಟನಂತೆ-
ಮುದುರಿದರೆ ಸಾಯುವಿಯೊ ಹುಳುವಿನಂತೆ!
*****
ಬೆಂಗಳೂರು : ೧೯೪೬








