(ಅಳ್ವಾರರ ಬಗೆಯನ್ನು ಭಗವಂತನು ತುಂಬಿ ನಿಂತುದನ್ನು ಕುರಿತ ಹಾಡು)
(ಸಿರಿಬಾಯಿ ನುಡಿಯ ಒಂದನೇ ನೂರಿನ ಹತ್ತನೇ ಹಾಡು)
೧
ಅರಿಶಿರಗಳನು ತರಿವ ಮಾಶಂಖ ಚಕ್ರಗಳ ಧರಿಸಿದವನು
ಸಿರಿಯ ಚೆಲುನೀಳಡಿಯನೇಳು ಲೋಕಗಳಾದರಿಸುವಂತೆ
ತರಳನಿಂಥವನಿಲ್ಲವೆನುವ ವಾಮನನಾಗಿ ವರ್ಧಿಸಿದವ
ಕರಿಯ ಮಣಿಯಂದ ಕಂಗೊಳುವನಿವನೆನ್ನ ಕಂಗಳೊಳೆ ನಿಂತ.
೨
ಕಂಗಳೊಳಗೆಯೆ ನಿಲ್ವನಿವನನಾವೆರೆಯೆ ಕಾದಲ್ಮೆಯಿಂದ
ಸಂಗಡಿಸುವನು ನೆನೆಯೆ-ಇನ್ನಿವನ ನಾವೇನ ಬೇಡಲಹುದು
ಹೊಂಗುವುರಿ ತಾನಾಗಿ ನಲ್‌ಗಾಳಿ ನೀರಾಗಿ ಬಾನುಮಾಗಿ
ಮಂಗಳದ ನೆಲವಾಗಿ ಬಿತ್ತರಿಸುವೀ ನಮ್ಮ ನಾಥನನ್ನು?
೩
ನಾಥನಿವ ನಮಗೆನ್ನ ತಂದೆಗೂ ತಾತನಿಗು ಮುತ್ತಜ್ಜಗೂ
ನಾಥನಿವ ತಣ್ಣನೆಯ ಚೆಂದಾವರೆಯ ಚೆನ್ನ ಕಂಗಳವನು
ನಾಥನುರದೊಳು ಲತೆಗು ಹಾವಿಗು ನುಣ್ಣ ನಡುವವಳ ತಳೆದ
ನಾಥನೆಮ್ಮವನಿವನ ಬಿಡದೆ ಧರಿಸೌ ನನ್ನ ಮುಗ್ಧ ಹೃದಯ.
೪
ಹೃದಯವೇ ನೀನೊಳ್ಳೆಯವಳೊಳ್ಳೆಯವಳೌ ನಿನ್ನ ನೆರವಿಂ
ಅದನದಾವುದ ಗೈಯೆವಿನ್ನೆಮಗೆ ಏನುಂಟು ಆವ ಕೊರತೆ?
ಹದಗೆಡದ ಹರೆಯದವ, ಮಲರಮಗಳಾಣ್ಮನವ, ನೀನವನನು
ಹೊದದೆ ಇರು ಬಿಡದೆ ನಾನರಿವುಗೆಟ್ಟಿರುವಂದಿಗೂ ಕಂಡೆಯಾ.
೫
ಕಂಡೆಯಾ, ಎಲೆ ನನ್ನ ಹೃದಯವೇ, ಕರ್ಮಗಳು ಫಲಿಸುತಿಹುದ
ಕೊಂಡೆಣಿಕೆಯಿಲ್ಲದೆಯೆ ತಾವಾಗಿ ಫಲಗಳನು ಬಿಡುವ ತೆರವ
ಉಂಡವನನೇಳು ಲೋಕಂಗಳನು, ತೊಣೆಯಿರದ ಮೂರಡಿಗಳ
ಕೊಂಡೆಲ್ಲವಳೆದವನ ಕಂಡುಕೊಂಡಿಹೆಯಲಾ ನೀನುಮಿಂದು?
೬
ನೀನುಮಂತೆಯೆ ನಾನುಮೀನೇರನಿಂತಿರಲು ಇನ್ನು ಮುನ್ನು
ಏನೊಂದು ನೋವನೂ ಬಳಿಸಾರಗೊಡ, ಕೇಳು, ನನ್ನ ಮನವೇ
ತಾನೆ ತಾಯಾಗಿ ತಂದೆಯುಮಾಗಿ ಈ ಲೋಕದೊಳಗೆ ಮೈಯ-
ನಾನುವೀಶನು ಮಣಿಯ ಬಣ್ಣದೊಡಲಿನ ಚೆಲುವ ನನ ತಂದೆ.
೭
ತಂದೆಯೇ ಎಂದೆನುತ ನನ್ನೊಡೆಯ ಎನ್ನುತ್ತ ನೆನೆದು ಮನಕೆ
ತಂದಿಟ್ಟುಕೊಳ್ಳುತ್ತ ಸೊಲ್ಲಿನೊಳು ಮೊರೆಯಿಡುವ ಪಾಪಿ ನಾನು
ತಂದೆಯೇ ನಮ್ಮೊಡೆಯ ಎನ್ನುತ್ತ ಬಾನವರು ನೆನೆದು ಮನದಿ
ತಂದಿಟ್ಟುಕೊಳ್ಳುತ್ತ ಸೊಲ್ಲಿನೊಳು ಕೊಂಡಾಡುವೀ ಚೆಲುವನನ್ನು.
೮
ಚೆಲುವ ನಾರಾಯಣಾ ಎಂಬ ಸೊಲ್ಲೆನ್ನ ಕಿವಿಸೋಕೆ ಸಾಕು
ಮಳಮಳನೆ ಕಣ್ಣ ಹನಿಯುದುರುವುದು ಹುಡುಕುವೆನು-
ಸೋಜಿಗವಿದು!
ನಲುಮೆಯಿರುಳೊಳಗಂತೆ ಹಗಲೊಳೂ ಎಡಬಿಡವೆ ಒಡಗೂಡುತ
ಒಲುಮೆಯಿಂದೀ ಪೂರ್ಣನೆನ್ನ ಬಿಡದಿರುವನೈ ನನ್ನ ನಂಬಿ.
೯
ನಂಬಿಯನು ಸಿರಿಕುರುಂಗಡಿಯೆಂಬ ಪುರದೊಳಗೆ ನಿಂತವನನು
ಚೆಂಬೊನ್ನಿನಂತೆಯೇ ಹೊಳೆಯುತಿಹ ಸಿರಿಮೂರ್ತಿಯುಳ್ಳವನನು
ಚೆಂಬೊಗರ ತಳೆದವನ ಮೇಗಳಿನ ಬಾನವರಿಗಾದಿಮನನು
ಎಂಬೆ ನಾನೇನೆಂದು ನನ್ನೊಡೆಯಗೇನೊರೆದು ನಾ ಮರೆವೆನು?
೧೦
ಮರವೆಯಿದು ಅರಿಮೆಯಿದು ಎಂದು ನಾನೊಂದನೂ ತಿಳಿದರಿಯೆನು
ಮರೆವನಿವನೆಂದೆಯೇ ಚೆಂದಾವರೆಯ ಚೆಲುವ ಕಂಗಳಾಂತು
ಮರವೆಯಳಿವಂತೆನ್ನ ಹೃದಯದೊಳು ನಿತ್ಯವೂ ನೆಲಸಿರುವನ
ಮರೆವೆನೇ ನಾನಿನ್ನು ನನ್ನ ಈ ನೀಲಮಣಿಯಂದದವನ.
೧೧
ಮಣಿಯನ್ನು ಬಾನವರ ನೆಲೆಯ ನಡಸುವನನ್ನು ತನಗೆ ತಾನೆ
ಎಣೆಯಾದ ಒಡವೆಯನು ಚೆಲುವು ಕುರಕೂರವನು ಶಡಗೋಪನು
ಅಣಿಗೊಂಡ ನುಡಿಗಳಿಂ ನುತಿಸಿರುವ ಸಾಸಿರದೊಳೀ ಹತ್ತನು
ದಣಿವಿಲ್ಲದಂದದೊಳು ಕಲಿವವರ ಕಲಿವು ಹಾಯುವುದು ನೆಲೆಗೆ.
*****








