ನಾನು ಕೊಡುವವನೆಂದು
ಹೆಮ್ಮೆಪಡುವುದು ಬೇಡ
ನಾನು ಕೊಡುವವನಲ್ಲ ನೋಡುವವನು
ಕೊಡಿಸುವನು ನನ್ನಿಂದ
ಕೊಡಗೈಯ ದೊರೆ ತಾನು
ಒಬ್ಬನೇ ಜಗದೊಳಗೆ ದಾನಿಯವನು
ಇಂದಿರುವುದೆಲ್ಲವೂ
ಬಂದಿರುವುದೇತಕ್ಕೆ?
ಎಂದಾದರೊಂದು ದಿನ ಕೊಡುವುದಕ್ಕೆ
ಇಂದು ಕೊಡು ಇದ್ದುದನು
ಮುಂದಿ ಬರುವುದಕಾಗಿ
ಹರಿಯಗೊಡು ನೀನದನು ಹೊಳೆಯಹಾಗೆ
ಕೊಡಲು ಪಾತ್ರರು ಯಾರು
ಎಂಬ ಯೋಚನೆ ಬೇಡ
ಕೊಡಿಸುವಗೆ ಬಿಟ್ಟುಗೊಡು ಅದನು ನೀನು
ಕೊಡುವುದಕೆ ಪಾತ್ರ
ನಾನಾಗಬೇಕೆಂದೆಣಿಸು
ಕೊಡುವ ಹಿರಿಗೆಲಸಕ್ಕೆ ಕರಣ ನೀನು
*****

















