ಹೊಸ ವರುಷದ ಹೊಸ್ತಿಲಿನಲಿ ಹೊಂಗಿರಣದ ಚೆಲುವು
ಹೊಸಕಾಲದ ಹೊಸ ತಿಳಿವಿನ ನಲವಿನ ನವ ಜಲವು
ಹೊಸತಾಗಿಸಿ ಹಳ ಬಾಳನು ತರಲಿದೆ ಮಾ ಗೆಲುವು
ಕಸ-ಕಸವರ ವಾಗಲಿದೆ
ಬಿಸ-ರಸದಲಿ ಮುಣುಗಲಿದೆ!
ಕಿವಿ ಕೇಳದ ಕರ್ಕಶ ದನಿ ಇಂಚರವಾಗಲಿದೆ
ಸವಿ ಸೂಕ್ಷ್ಮದ ಸುಂದರ ತನು ಮನದಲಿ ಬಾಗುತಿದೆ
ಕವಿ ಕಾಣುವ ದಿವ್ಯಾಂಬರ ತಾ ಮೈಗೊಳ್ಳುತಿದೆ
ಕಾಣದ ಕಣ್ಣಿಗೆ ಹೊಸತು
ಕಾಣುವ ಕಣ್ಣಿಗೆ ಹಳತು!
ಶಬ್ದಬ್ರಹ್ಮಾಂಡದಲಿದು ನಿಶ್ಶಬ್ದವು ಕಾಣೋ!
ಅಬ್ದನ ಅಪ್ರಾರ್ಥಿತ ವರ; ವೈರವ ನೀಮಾಣೋ!
* * *
ಬರುವುದಕದೊ ಬಾಯಾರಿಕೆ ತಲ್ಲಣಿಸಿದೆ ತಿರುಗಿ
ಕೊರಗನು ತೊರೆ ನವ ಚೇತನ ಬರುತಿಹುದದೊ ಮಿನುಗಿ
*****
ಬೆಂಗಳೂರು : ೧೯೪೪

















