ಒಂದು ಮಾಟವಿದೆ ಮೋಟುಮರದಂಥ ಈ ಹಡಗದಲ್ಲಿ,
ಒಂದು ಕ್ರಮವಿದೆ,-ಯಂತ್ರಯುಗದ ಈ ಭ್ರಮೆಯಲ್ಲಿ!
ಅಂದವಿದೆ,-ಚಂದವಿದೆ ಸಹ! ತಿಳಿದು ನೋಡಲಿದೀಗ!
ಇದು ದೋಣಿಯಲ್ಲ,-ತೇಲುತಿರುವ ಹಿರಿಬಣದೋಣಿ!
ಕಬ್ಬಿಣದ ಕಟ್ಟಿಡವಲ್ಲ,-ಇಟ್ಟಣಿಸುವ ಪಟ್ಟಣವಿದು!
ಇದು ಬ್ರಹ್ಮಾಂಡ,-ನೂರು ಭಾಷೆಗಳ ನವಖಂಡ!
ಸಪ್ತಸಾಗರದ ಮೇಲೆ ಸೃಷ್ಟಿಯನ್ನು ತೇಲುಬಿಟ್ಟಂತೆ
ವಿಶ್ವಕರ್ಮನು ರಚಿಸಿ ತೇಲುಬಿಟ್ಟನಿದನ್ನ!
ತಿಮಿಂಗಿಲದಂತೆ ತಿರುಗುತಿದೆ! ತಿರಗಿಸುತಿದೆ!
ಇಂದು ಭಾರತ, ನಾಳೆ ಅರಬ್ಬಿದೇಶ,
ಇಂದು ಇಜಿಪ್ತದಲ್ಲಿ, ನಾಳೆ ಯುರೋಪಿನಲ್ಲಿ,-
ಇದರ ಗತಿ,-ಕಾಲಗತಿ! ಇದರ ವೇಗ-ವಾಯುವೇಗ!
ಇಲ್ಲಿಯ ಊಟ-ಉಪಚಾರ,-ಮನೆಗಿಂತ ಹೆಚ್ಚು.
ಇಲ್ಲಿಯ ಆಟ-ನೋಟ-ಊರಿಗಿಂತ ಮೆಚ್ಚು.
ಮನದ ಮಹಲನು ಕಟ್ಟಬಹುದು! ಮನಬಂದಂತೆ ಕುಣಿಯಬಹುದು!
ಇದು ಹಡಗವಲ್ಲ,-ಸಂಕ್ಷಿಪ್ತ, ಬ್ರಹಾಂಡವಿದು!
ಮಾನವನ ಕೌಶಲ್ಯಕ್ಕೆ ಕಳಸವಿಟ್ಟಿದೆಯಿಲ್ಲಿ.
ನೆರವೇ ಗೆಲುವು, ಔಚಿತ್ಯವೇ ಚೆಲುವು,–
ಎ೦ಬುದನ್ನು ಒರೆದು ಕೊರೆದು ಸಾರಿದೆಯಿಲ್ಲಿ!
*****


















